ದೇಶದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಗುರಿಯಾಗಿಸಿ ತೀರಾ ಅವಹೇಳನಕಾರಿ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿರುವುದರ ವಿರುದ್ಧ ದೇಶದೆಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದೆ. ಅಷ್ಟು ಮಾತ್ರವಲ್ಲದೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭಗಳಲ್ಲಿ ಒಂದಾಗಿರುವ ನ್ಯಾಯಾಂಗವನ್ನೇ ನೇರವಾಗಿ ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳ ಮೂಲಕ ದಾಳಿ ನಡೆಸಲಾಗಿದ್ದರೂ ಕೇಂದ್ರ ಸರಕಾರ ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಒಂದಿಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಪ್ರಕರಣದ ಸಂಬಂಧ ವಿಪಕ್ಷಗಳ ನಾಯಕರು ಈಗ ರಾಷ್ಟ್ರಪತಿಗಳಿಗೆ ಪತ್ರವೊಂದನ್ನು ಬರೆದು ಸಿಜೆಐ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಆನ್‌ಲೈನ್ ಟ್ರೋಲಿಂಗ್ ಮಾಡಿರುವವರ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಲು ಆಗ್ರಹಿಸಿದ್ದಾರೆ.
ಇದು ಸಿಜೆಐ ಮತ್ತು ನ್ಯಾಯಾಂಗ ಪ್ರಕ್ರಿಯೆ ಮೇಲಣ ನೇರ ಹಸ್ತಕ್ಷೇಪವಾಗಿದ್ದು, ಇಂಥ ಬೆಳವಣಿಗೆಗಳು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ದೇಶದ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ಘನತೆ, ಗೌರವವಿದ್ದು ಇಂಥ ಟ್ರೋಲ್‌ಗಳು ಇಡೀ ನ್ಯಾಯದಾನದ ಪ್ರಕ್ರಿಯೆಯ ಮೇಲೆ ಸವಾರಿ ಮಾಡಿದಂತೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅಲ್ಲದೆ ಪತ್ರದ ಪ್ರತಿಗಳನ್ನು ಕಾನೂನು ಸಚಿವರು, ಐಟಿ ಸಚಿವರು ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗೂ ಸಲ್ಲಿಸಲಾಗಿದೆ. ಇದೇ ವೇಳೆ ದೇಶದ ಅಟಾರ್ನಿ ಜನರಲ್ ಅವರಿಗೂ ಈ ಸಂಬಂಧ ಪ್ರತ್ಯೇಕ ಪತ್ರವೊಂದನ್ನು ಬರೆದು ಈ ಬಗ್ಗೆ ಅವರ ಗಮನ ಸೆಳೆಯಲಾಗಿದೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿನ ಶಿವಸೇನೆ-ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿ ಸರಕಾರದ ಅಂಗಪಕ್ಷವಾಗಿದ್ದ ಶಿವಸೇನೆಯಲ್ಲಿನ ಭಿನ್ನಮತ ತಾರಕಕ್ಕೇರಿದ ಸಂದರ್ಭದಲ್ಲಿ ಅಂದಿನ ರಾಜ್ಯಪಾಲರು ಮೈತ್ರಿ ಸರಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚನೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಬುಧವಾರದಂದು ಆಗಿನ ರಾಜ್ಯಪಾಲರ ನಡೆಯ ಬಗೆಗೆ ಕೆಲವೊಂದು ಪ್ರಶ್ನೆಗಳನ್ನು ಎತ್ತಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಆನ್‌ಲೈನ್ ಟ್ರೋಲ್ ತಂಡವೊಂದು ಸಿಜೆಐ ಅವರನ್ನು ಗುರಿಯಾಗಿಸಿ ಟ್ರೋಲಿಂಗ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾದ ಹೇಳಿಕೆ ವ್ಯಾಪಕವಾಗಿ ಟ್ರೋಲಿಂಗ್‌ಗೆ ಒಳಗಾಗಿತ್ತು. ಇದೊಂದು ಗಂಭೀರ ಪ್ರಕರಣವಾದರೂ ತನಿಖಾ ಸಂಸ್ಥೆಗಳಾಗಲಿ, ಸರಕಾರವಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ರಾಷ್ಟ್ರಪತಿಯವರ ಕದ ತಟ್ಟಿವೆ.
ರಾಷ್ಟ್ರೀಯ ನ್ಯಾಯಾಂಗ ಆಯೋಗ ಮಸೂದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದಾಗಿನಿಂದ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಬಂದಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕದ ವಿಚಾರದಲ್ಲಿ ಇತ್ತಂಡಗಳ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಕೊನೆಗೆ ತಿಂಗಳ ಹಿಂದೆಯಷ್ಟೇ ಕೊಲೀಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ಹೆಸರುಗಳಿಗೆ ಕೇಂದ್ರವು ಸಮ್ಮತಿಯನ್ನು ಸೂಚಿಸುವ ಮೂಲಕ ವಿವಾದ ಒಂದಿಷ್ಟು ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಕೊಲೀಜಿಯಂ ವಿಚಾರವಾಗಿ ಕಾನೂನು ಸಚಿವರು ತಮ್ಮ ಹಿಂದಿನ ವಾದವನ್ನು ಮುನ್ನೆಲೆಗೆ ತಂದಿದ್ದಾರೆ.
ನ್ಯಾಯಾಂಗ ಮತ್ತು ಶಾಸಕಾಂಗದ ನಡುವಣ ವಿವಾದ, ತಿಕ್ಕಾಟಗಳು ಇಂದು- ನಿನ್ನೆಯದಾಗಿರದೆ ಇದಕ್ಕೆ ದಶಕಗಳ ಇತಿಹಾಸವಿದೆ. ಆದರೆ ಸಿಜೆಐ ಅವರನ್ನೇ ಗುರಿಯಾಗಿಸಿ ಅವಮಾನಕಾರಿಯಾಗಿ ಟ್ರೋಲಿಂಗ್ ಮಾಡಿದರೂ ಮೂಕ ಪ್ರೇಕ್ಷಕನಂತೆ ವರ್ತಿಸಿರುವ ಸರಕಾರದ ನಡೆ ಸಹಜವಾಗಿಯೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಂಥ ಸೂಕ್ಷ್ಮ ವಿಚಾರಗಳನ್ನು ಸರಕಾರ ಒಂದಿಷ್ಟು ಗಂಭೀರವಾಗಿ ಪರಿಗಣಿಸಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂಬ ಬಿಗುಮಾನವನ್ನು ಬಿಟ್ಟು ದೇಶದ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದಲ್ಲಿ ಹಾದಿ ತಪ್ಪಿದವರೂ ನಿಧಾನವಾಗಿ ಸರಿದಾರಿಗೆ ಮರಳುತ್ತಾರೆ ಎಂಬ ಸೂಕ್ಷ್ಮತೆಯನ್ನು ಸರಕಾರ ಅರಿತುಕೊಳ್ಳಬೇಕು.