Advertisement

ವೇತನ ಪಾವತಿಗಾಗಿ ದಿನಗೂಲಿ ಪೌರ ಕಾರ್ಮಿಕರ ಧರಣಿ

05:20 PM Jun 23, 2018 | Team Udayavani |

ರೋಣ: ಕಳೆದ 8 ತಿಂಗಳಿನಿಂದ ವೇತನ ಪಾವತಿಸುವಲ್ಲಿ ಪುರಸಭೆ ವಿಳಂಬ ಮಾಡಿದ್ದನ್ನು, ಖಂಡಿಸಿ ಹಾಗೂ ಕೂಡಲೇ ವೇತನ ಪಾವತಿಗೆ ಆಗ್ರಹಿಸಿ ದಿನಗೂಲಿ ಕಾರ್ಮಿಕರು ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಗುತ್ತಗೆ ಆಧಾರದ ಮೇಲೆ ನೇಮಕಗೊಂಡ ದಿನಗೂಲಿ ಕಾರ್ಮಿಕರಿಗೂ ಪುರಸಭೆ ನೇರವಾಗಿ ವೇತನ ಪಾವತಿಸುವಂತೆ ಕಳೆದ ಡಿಸೆಂಬರ್‌ ನಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರು ಪುರಸಭೆ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಆದರೂ ಈವರೆಗೆ ವೇತನ ಪಾವತಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ದಿನಗೂಲಿ ನೌಕರರಿಗೆ ತೀವ್ರ ತೊಂದರೆಯಾಗಿದ್ದು, ನಿತ್ಯ ಬದುಕು ಸಾಗಿಸುವುದು ದುಸ್ತರವಾಗಿದೆ. ಕೂಡಲೇ ಮುಖ್ಯಾಧಿಕಾರಿಗಳು ಈ ಕುರಿತು ಗಮನ ಹರಿಸಿ, ಸರ್ಕಾರೇತರ ಸಂಸ್ಥೆ ಮೂಲಕ ವೇತನ ಪಾವತಿಸುವ ಬದಲು, ನೇರವಾಗಿ ಸರ್ಕಾರದಿಂದ ವೇತನ ಪಾವತಿಯಾಗುವಂತೆ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಧರಣಿಯನ್ನು ಅನಿರ್ಧಿಷ್ಟಾವಧಿ ಮುಂದುವರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಧರಣಿ ನಿರತರೊಂದಿಗೆ ಮಾತನಾಡಿ, ಏಪ್ರಿಲ್‌ ಮತ್ತು ಮೇ ತಿಂಗಳ ವೇತನವನ್ನು ಈ ಕೂಡಲೇ ಪಾವತಿಸಲಾಗುವುದು ದಯವಿಟ್ಟು ಧರಣಿಯಿಂದ ಹಿಂದೆ ಸರಿಯುವಂತೆ ಮನವೊಲಿಸಲು ಯತ್ನಿಸಿದರು. ಇದಕ್ಕೊಪ್ಪದ ಪ್ರತಿಭಟನಾರರು, ಸರ್ಕಾರ ಮತ್ತು ಜಿಲ್ಲಾ ಯೋಜನಾಧಿಕಾರಿಗಳ ನಿರ್ದೇಶನದಂತೆ ಕಳೆದ ಡಿಸೆಂಬರ್‌ನಿಂದ ಈವರೆಗೆ ವೇತನ ಪಾವತಿಸಿದಲ್ಲಿ ಮಾತ್ರ ಧರಣಿ ಕೈ ಬಿಡುತ್ತೇವೆ. ಇಲ್ಲವಾದರೆ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಡಿಸೆಂಬರ್‌ನಿಂದಲೇ ವೇತನವನ್ನು ಈ ದಿನವೇ ಪಾವತಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪೌರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಮಂಜುನಾಥ ಹಾಳಕೇರ, ಬಸನಗೌಡ ಪಾಟೀಲ, ವಿರೋಧ ಪಕ್ಷದ ನಾಯಕ
ಬಸವರಾಜ ಬಸನಗೌಡ್ರ, ದಿನಗೂಲಿ ಪೌರ ಕಾರ್ಮಿಕರಾದ ರವಿ ಜೊಗಣ್ಣವರ, ಬಸವರಾಜ ಚಲವಾದಿ, ಮಲ್ಲಪ್ಪ ಮುದೇನಗುಡಿ, ಹನಮಂತ ತೆಗ್ಗಿನಮನಿ, ಜಯವ್ವ ಹಾದಿಮನಿ, ಮಂಜವ್ವ ಪೂಜಾರ, ಗಂಗವ್ವ ಹಲಗಿ, ಪ್ರೇಮವ್ವ ದೊಡ್ಡಮನಿ, ಬಸವ್ವ ಪೂಜಾರ, ಮಂಜುನಾಥ ಹಾದಿಮನಿ ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next