Advertisement

ಶಿಕ್ಷಣದಿಂದ ಮಾತ್ರ ನಾಗರಿಕ ಸಮಾಜ ನಿರ್ಮಾಣ

11:29 AM Jul 15, 2017 | |

ಮೈಸೂರು: ಶಿಕ್ಷಣದಿಂದ ಮಾತ್ರ ಜವಾಬ್ದಾರಿಯುತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಹಾಗೂ ನೀತಿಯುತ ಶಿಕ್ಷಣ ನೀಡಬೇಕಾದ ಅಗತ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕನಕಪುರ ದೇಗುಲಮಠದ ಶ್ರೀ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠವು ಆಲನಹಳ್ಳಿಯ ನಂದಿನಿ ಬಡಾವಣೆಯಲ್ಲಿ ನಿರ್ಮಿಸಿರುವ ನಿರ್ವಾಣಸ್ವಾಮಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಕಾನ್ವೆಂಟ್‌ನ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಭಾರತ ಸ್ವಾತಂತ್ರ್ಯಗೊಂಡು 70 ವರ್ಷ ಕಳೆದರೂ ಸಂಪೂರ್ಣ ಸಾಕ್ಷರತೆ ಸಾಧ್ಯವಾಗಿಲ್ಲ. ಇದರಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಕಂದರ, ಶೋಷಣೆ ಹೆಚ್ಚಾಗಿದೆ. ಜತೆಗೆ ಜನರಲ್ಲಿ ಮೌಡ್ಯ ಆಚರಣೆ, ಅಸಮಾನತೆ, ಕಂದಾಚಾರ ಹೆಚ್ಚುತ್ತಿದೆ. ಎಲ್ಲರಿಗೂ ಶಿಕ್ಷಣ ದೊರೆತಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಶಿಕ್ಷಿತರಲ್ಲೂ ಅನೇಕರು ಅಮಾನವೀಯ ದೃಷ್ಟಿಕೋನ ಹೊಂದಿದ್ದಾರೆ. ಆದ್ದರಿಂದ ಮೌಲ್ಯಯುತ ಮತ್ತು ನೀತಿಯುತ ಶಿಕ್ಷಣ ನೀಡಿ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.

ಶಿಕ್ಷಣ, ಆರೋಗ್ಯ, ಆಹಾರ ಮತ್ತು ವಸತಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಎಲ್ಲರನ್ನೂ ಶಿಕ್ಷಿತರನ್ನಾಗಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಶ್ರಮಿಸುತ್ತಿದ್ದರೂ ಸಾಕ್ಷರತೆ ಪ್ರಮಾಣ ಹೆಚ್ಚಳ ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಈ ವರ್ಷ 22 ರಿಂದ 23 ಸಾವಿರ ಕೋಟಿ ರೂ. ನೀಡುತ್ತಿರುವುದಾಗಿ ಹೇಳಿದರು.

ಕನಕಪುರದ ದೇಗುಲ ಮಠವು ಸದ್ದುಗದ್ದಲವಿಲ್ಲದೆ ಶಿಕ್ಷಣ, ವಸತಿ, ದಾಸೋಹದಂತಹ ಸಮಾಜಮುಖೀ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ದೇಗುಲಮಠವು ಶಿಕ್ಷಣ ಸಂಸ್ಥೆ ತೆರೆದಿರುವುದು ಸಂತೋಷದ ಸಂಗತಿ. ಇನ್ನಷ್ಟು ಶಿಕ್ಷಣ ಸಂಸ್ಥೆ ತೆರೆದರೆ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.

Advertisement

ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದರೆ ತಮ್ಮ ಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಗಳಿಸುವುದು ಕಷ್ಟವಾಗಲಿದೆ ಎಂಬ ಭಾವನೆ ಪೋಷಕರಲ್ಲಿದೆ. ಇಂತಹ ಮನಸ್ಥಿತಿ ದೂರವಾಗಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಈ ರೀತಿಯ ಭಾವನೆ ದೂರವಾಗಲು ಸಾಧ್ಯ ಎಂದರು.

ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಮುಮ್ಮಡಿ ನಿರ್ವಾಣಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಂಸದ ಆರ್‌. ಧ್ರುವನಾರಾಯಣ್‌, ಕಾಂಗ್ರೆಸ್‌ ಮುಖಂಡ ಡಾ. ಯತೀಂದ್ರ, ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಸಿದ್ದರಾಜು, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next