Advertisement

ಭ್ರಷ್ಟಾಚಾರದ ವಿರುದ್ಧ ನಾಗರಿಕ ಜಾಗೃತಿ

01:09 AM Oct 20, 2019 | mahesh |

ಪುತ್ತೂರು: ಪುತ್ತೂರು, ಸುಳ್ಯ ತಾಲೂಕುಗಳ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರಕಾರಿ ಇಲಾಖೆಗಳ ದೊಡ್ಡ ಕುಳಗಳೇ ಸಿಕ್ಕಿ ಬೀಳುತ್ತಿರುವುದು ಪಾರದರ್ಶಕ ಆಡಳಿತ ವ್ಯವಸ್ಥೆ ಆಶಯಕ್ಕೆ ಋಣಾತ್ಮಕ ವಿಚಾರ ವಾದರೂ ಸಾರ್ವಜನಿಕ ಜಾಗೃತಿ ಪ್ರಜ್ಞೆ ಚುರುಕಾಗಿರುವ ಧನಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತಿದೆ.

Advertisement

ನಾಲ್ಕು ತಿಂಗಳ ಅವಧಿಯಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭ ರೆಡ್‌ ಹ್ಯಾಂಡ್‌ ಆಗಿ ಕಂದಾಯ ಇಲಾಖೆಯ ಪ್ರಮುಖ ಅಧಿಕಾರಿಗಳೇ ಸಿಕ್ಕಿ ಬಿದ್ದಿದ್ದಾರೆ. ಚುನಾವಣ ಕರ್ತವ್ಯದ ಸಂದರ್ಭದಲ್ಲಿ ಕೇಟರಿಂಗ್‌ ವ್ಯವಸ್ಥೆ ಮಾಡಿದವರಿಂದ ದೊಡ್ಡ ಮೊತ್ತದ ಲಂಚ ಸ್ವೀಕರಿಸುತ್ತಿದ್ದ ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಎಸಿಬಿ ಬಲೆಗೆ ಬಿದ್ದಿದ್ದರು. ಅ. 4ರಂದು ಪುತ್ತೂರು ಸರ್ವೇಯರ್‌ ಶಿವಕುಮಾರ್‌ ಉಪ್ಪಿನಂಗಡಿಯಲ್ಲಿ ಲಂಚ ಸ್ವೀಕರಿಸುವಾಗ, ಅ. 10ರಂದು ಕಡಬ ತಾಲೂಕಿನ ರಾಮಕುಂಜ ಮತ್ತು ಹಳೆನೇರಂಕಿ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ ಲಂಚ ಸ್ವೀಕರಿಸುವಾಗ ಬಂಧನಕ್ಕೆ ಒಳಗಾಗಿದ್ದರು.

ದೂರುದಾರರ ಹೆಚ್ಚಳ
ಲೋಕಾಯುಕ್ತ ಸಂಸ್ಥೆ ಮಾತ್ರವಲ್ಲದೆ ಭ್ರಷ್ಟಾಚಾರ ನಿಗ್ರಹ ದಳದಲ್ಲೂ ಪುತ್ತೂರು ಮತ್ತು ಸುಳ್ಯ ತಾಲೂಕು ಗಳ ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ದೂರುಗಳು ಸಾರ್ವಜನಿಕ ವಲಯದಿಂದ ದಾಖಲಾಗುತ್ತಿವೆ. ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆ ಪುತ್ತೂರಿನಲ್ಲಿ ನಡೆಸಿದ್ದ ಅದಾಲತ್‌ನಲ್ಲಿ 27 ಪ್ರಕರಣಗಳ ಪರಿಶೀಲನೆ ಮತ್ತು ವಿಚಾರಣೆ ನಡೆದಿತ್ತು. ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಸ್ವೀಕರಿಸುವ ಅಧಿಕಾರಿಗಳ ಕುರಿತು ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಎಸಿಬಿ ಅಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ.

ಪ್ರಮುಖರು ಹೊಣೆಗಾರರಲ್ಲವೇ?
ಇತ್ತೀಚಿನ ದಿನಗಳಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಮೂವರು ಅಧಿಕಾರಿಗಳೂ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಕಂದಾಯ ಇಲಾಖೆಯಡಿಯಲ್ಲಿ ಬರುವ ತಹಶೀಲ್ದಾರ್‌ ಕಚೇರಿ, ತಾಲೂಕು ಕಚೇರಿ, ಭೂ ಮಾಪನ ಕಚೇರಿಯಲ್ಲಿ ಹಣ ನೀಡದೆ ಕೆಲಸ ನಡೆಯುವುದಿಲ್ಲ ಎನ್ನುವ ಆರೋಪ ಇದೆ. ಇವರೆಲ್ಲರ ಮೇಲಧಿಕಾರಿ ಸ್ಥಾನದಲ್ಲಿದ್ದು, ಉಪವಿಭಾಗದ ದಂಡಾಧಿಕಾರಿಯೂ ಆಗಿರುವ ಸಹಾಯಕ ಕಮಿಷನರ್‌ ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಗತ್ಯವಿದೆ.

ಸಹಕಾರ ಬೇಕು
ಗ್ರಾಮಾಂತರ ತಾಲೂಕು ವ್ಯಾಪ್ತಿಗಳಲ್ಲಿ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ವ್ಯಕ್ತಪಡಿಸಿ ದೂರು ನೀಡುತ್ತಿರುವುದು ಉತ್ತಮ ಬೆಳವಣಿಗೆ. ಭ್ರಷ್ಟಾಚಾರವನ್ನು ಸಂಪೂರ್ಣ ದೂರ ಮಾಡಲು ಸಾರ್ವಜನಿಕ ಸಹಕಾರ, ಬೆಂಬಲ ಅತಿ ಅಗತ್ಯ. ಅವರು ಮುಕ್ತವಾಗಿ ನಿಯಮದ ಪ್ರಕಾರ ದೂರು ನೀಡಬಹುದು.
– ಸುಧೀರ್‌ ಹೆಗ್ಡೆ, ಪ್ರಭಾರ ಎಸ್ಪಿ, ಭ್ರಷ್ಟಾಚಾರ ನಿಗ್ರಹ ದಳ


Advertisement

ಇಲ್ಲಿಗೆ ದೂರು ನೀಡಿ
ಭ್ರಷ್ಟಾಚಾರ ನಿಗ್ರಹ ದಳ ದ.ಕ. ಡಿವೈಎಸ್ಪಿ
– 9480806231
ಪೊಲೀಸ್‌ ಇನ್‌ಸ್ಪೆಕ್ಟರ್‌ – 9480806291
– 9480806292
ಸ್ಥಿರ ದೂರವಾಣಿ – 08242483000

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next