Advertisement

ವೇತನಕ್ಕಾಗಿ ಪೌರಕಾರ್ಮಿಕರ ಮೌನ ಪ್ರತಿಭಟನೆ

04:23 PM Jul 31, 2018 | Team Udayavani |

ಎಚ್‌.ಡಿ.ಕೋಟೆ: ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸ್ವತ್ಛತಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಕೂಡಲೇ 5 ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸ್ವತ್ಛತಾ ಕಾರ್ಯ ನಿಲ್ಲಿಸಿ ಮೌನ ಪ್ರತಿಭಟನೆ ನಡೆಸಿ, ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ.

Advertisement

ಪುರಸಭೆ ಸ್ವತ್ಛತಾ ವಿಭಾಗದಲ್ಲಿ ಅನೇಕ ವರ್ಷಗಳಿಂದ ಸುಮಾರು 16 ಮಂದಿ ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ., ಇವರ ಹೊರಗುತ್ತಿಗೆ ಅವಧಿ ಕಳೆದ ಮಾ.31ಕ್ಕೆ ಕೊನೆಯಾಗಿದೆ. ಅದರೂ ಸರ್ಕಾರ ಇವರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು, ಅಲ್ಲಿಯವರೆಗೂ ಇವರನ್ನೇ ಮುಂದುವರಿಸುವಂತೆ ಸೂಚಿಸಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿ ಸ್ವತ್ಛತಾ ವಿಭಾಗದಲ್ಲಿ ದುಡಿಸಿಕೊಂಡು 5 ತಿಂಗಳಾದರೂ ವೇತನ ನೀಡದೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಕಾಲ ದೂಡುತ್ತಿದ್ದಾರೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.

ಇದರಿಂದ ಬಡ ಪೌರಕಾರ್ಮಿಕ ಸಿಬ್ಬಂದಿ ವೇತನ ಸಿಗದಿದ್ದರೂ ಇಲ್ಲಿಯವರೆಗೂ ತಡೆದುಕೊಂಡು ಸೇವೆ ಸಲ್ಲಿಸಿದ್ದು, ಕಳೆದ ವಾರ ವೇತನಕ್ಕೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ರಮೇಶ್‌, ಅಧ್ಯಕ್ಷೆ ಮಂಜುಳಾ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಬಂದು ಇನ್ನೊಂದು ವಾರದಲ್ಲಿ ಎರಡು ಕಂತು ಬಾಕಿಯಿರುವ 5 ತಿಂಗಳ ವೇತನವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದ ಮೇರೆಗೆ ಮುಷ್ಕರ ಹಿಂಪಡೆಯಲಾಗಿತ್ತು.

ಭರವಸೆ ನೀಡಿ ದಿನಗಳು ಕಳೆದರೂ ಇನ್ನು ಬಾಕಿಯಿರುವ ವೇತನ ಪಾವತಿಸದ ಕಾರಣ ಸೋಮವಾರ ಸ್ವತ್ಛತಾ ಕೆಲಸ ನಿಲ್ಲಿಸಿ ಕಚೇರಿ ಮುಂದೆ ದಿನಪೂರ್ತಿ ನಿಲ್ಲುವ ಮೂಲಕ ಮೌನ ಪ್ರತಿಭಟನೆ ನಡೆಸಿದರು. ಮಂಗಳವಾರದಿಂದ ಬಾಕಿ ವೇತನ ನೀಡುವವರೆಗೂ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀರಂಗ ತಿಳಿಸಿದ್ದಾರೆ.

ಮುಷ್ಕರಕ್ಕೆ ಸಂಘಟನೆಗಳ ಬೆಂಬಲ: ಯಾವುದೇ ನಗರ ಪಟ್ಟಣ ಸುಂದರವಾಗಿ, ಸ್ವತ್ಛವಾಗಿ ಇರಬೇಕಾದರೆ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಜೊತೆಗೆ ಸಮಾಜದ ಅತ್ಯಂತ ಕಟ್ಟ ಕಡೆಯ ಸಮುದಾಯದ ಈ ಬಡ
ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳದೆ ಹೊರಗುತ್ತಿಗೆಯಲ್ಲಿ ಕಳೆದ 5 ತಿಂಗಳಿಂದ ದುಡಿಸಿ ಕೊಂಡು ವೇತನ ನೀಡದೆ ನಿರ್ಲಕ್ಷ್ಯ ವಹಿಸಿರುವ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡೆಗೆ ಪಟ್ಟಣಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Advertisement

ಪೌರಕಾರ್ಮಿಕ ಸಿಬ್ಬಂದಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ದಸಂಸ ಸಂಘಟನೆ, ವರ್ತಕರ ಸಂಘ, ವಾಹನ ಚಾಲಕರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ಆನೇಕ ಪ್ರಗತಿಪರ ಸಂಘ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸಂಘದ ಅಧ್ಯಕ್ಷ ಶ್ರೀರಂಗ ತಿಳಿಸಿದ್ದಾರೆ.

ಪುರಸಭೆ ಸ್ವತ್ಛತಾ ವಿಭಾಗದ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ 5 ತಿಂಗಳಿಂದ ವೇತನ ನೀಡಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅನಾರೋಗ್ಯ ಕಾಡುತ್ತಿದ್ದರೂ ಚಿಕಿತ್ಸೆ ಪಡೆಯಲು ನಮ್ಮ ಕೈಯಲ್ಲಿ ಹಣ ಇಲ್ಲ. ನಾವು ಹೇಗೆ ಜೀವನ ನಿರ್ವಹಣೆ ಮಾಡಬೇಕು.
 ಶ್ರೀರಂಗ, ಅಧ್ಯಕ್ಷ, ಪೌರ ಕಾರ್ಮಿಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next