Advertisement

ಸಿಂಗಾಪುರದ ಸ್ವತ್ಛತೆ ವಿವರಿಸಿದ ಪೌರಕಾರ್ಮಿಕರು

11:14 AM Dec 05, 2017 | Team Udayavani |

ವಾಡಿ: ಅಲ್ಲಿನ ರೋಡ್‌ಗಳು ಬಿಲ್ಡಿಂಗ್‌ಗಳು ಕನ್ನಡಿ ಹೊಳೆದಾಂಗ ಹೊಳಿತಾವ. ಸೊಳ್ಳೆ ಮತ್ತು ಕಸ ಹುಡುಕಿದರೂ ಸಿಗಲಿಲ್ಲ. ಬೀದಿ ದೀಪಗಳು ಹಗಲಿನಷ್ಟೇ ಬೆಳಕು ನೀಡುತ್ತವೆ. ಚರಂಡಿಗಳ ಗಬ್ಬು ವಾಸನೆ ಒಮ್ಮೆಯೂ ನಮ್ಮ ಮೂಗಿಗೆ ತಟ್ಟಲೇ ಇಲ್ಲ. ಬೀದಿಯ ಯಾವ ದಿಕ್ಕಿನಲ್ಲೂ ಕಸದ ರಾಶಿ ಕಾಣಸಿಗಲಿಲ್ಲ. ಬೇಕಾಬಿಟ್ಟಿ ಉಗುಳಿದರೆ ಸ್ಥಳದಲ್ಲಿಯೇ ದಂಡ ಕಟ್ಟಬೇಕು. ಅಲ್ಲಿ ಎಲ್ಲದ್ದಕ್ಕೂ ಕಾನೂನಿದೆ. ಆ ಜನರು ಅಲ್ಲಿನ ಕಾನೂನಿಗೆ ಬೆಲೆ ಕೊಟ್ಟು ಬದುಕುತ್ತಿದ್ದಾರೆ…

Advertisement

ಹೀಗೆ ಸಿಂಗಾಪುರ ನಗರದ ಸ್ವತ್ಛತೆ ಚಿತ್ರಣ ಬಣ್ಣಿಸಿದ್ದು, ಸಿಮೆಂಟ್‌ ನಗರಿ ವಾಡಿ ಪಟ್ಟಣದ ಪುರಸಭೆ ಪೌರಕಾರ್ಮಿಕರು. ಕರ್ನಾಟಕ ರಾಜ್ಯ ಪೌರಾಡಳಿತ ನಿರ್ದೇಶನಾಲಯ ವತಿಯಿಂದ ಕರೆದೊಯ್ಯಲಾಗಿದ್ದ ನಾಲ್ಕು ದಿನಗಳ ಸಿಂಗಾಪುರ ಅಧ್ಯಯನ ಪ್ರವಾಸದಿಂದ ತರಬೇತಿ ಪಡೆದು ಸೋಮವಾರ ಬೆಳಗ್ಗೆ ನಗರಕ್ಕೆ ಮರಳಿದ ಬಳಿಕ ಉದಯವಾಣಿಯೊಂದಿಗೆ ಮಾತನಾಡಿದ ಪೌರಕಾರ್ಮಿಕರಾದ ಗುಂಡಮ್ಮ ಬಿದರಚೆನ್ನಿ, ಸರಸ್ವತಿ ಮೇತ್ರೆ ಹಾಗೂ
ದೊಡ್ಡಯ್ಯ ನಾಲವಾರಕರ, ರೈಲಿನಲ್ಲಿ ಕುಳಿತು ಪ್ರಯಾಣಿಸಿದ ನಮಗೆ ಕಾರ್‌ನಲ್ಲಿ ಕೂಡುವುದು ಅಪರೂಪವಾಗಿತ್ತು. ಅಂತಹದ್ದರಲ್ಲಿ ಸರಕಾರ ನಮ್ಮನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಿದ್ದು, ಗಗನಯಾತ್ರೆ ಎಂಬುದು ಮರೆಯಲಾಗದ ಅನುಭವವಾಗಿದೆ. ಸ್ವತ್ಛ ಹಾಗೂ ಸುಂದರವಾಗಿರುವ ಸಿಂಗಾಪುರ ಮಾದರಿ ನಗರವಾಗಿದೆ. ವಿವಿಧ ಜಿಲ್ಲೆಗಳಿಂದ
ಆಗಮಿಸಿದ್ದ ನೂರಾರು ಜನ ಪೌರಕಾರ್ಮಿಕರ ಜತೆ ಸಿಂಗಾಪುರ ಸುತ್ತಿ ಅನೇಕ ವಿಚಾರ ತಿಳಿದುಕೊಳ್ಳುವಂತಾಯಿತು ಎಂದು ವಿವರಿಸಿದರು.

ಅಲ್ಲಿ ಚೂರು ಕಸ ಬೀದಿಗೆ ಬೀಳದಿದ್ದರೂ ಹೋಟೆಲ್‌ಗ‌ಳ ಸುತ್ತಲೂ ಹೆಜ್ಜೆಗೊಂದು ಕಸದ ತೊಟ್ಟಿ ಇಡಲಾಗಿದೆ. ಸಾರ್ವಜನಿಕರು ಕಸವನ್ನು ಬೀದಿಗೆ ಎಸೆಯದೆ ತೊಟ್ಟಿಗೆ ಹಾಕುವ ಪ್ರಜ್ಞಾವಂತರಿದ್ದಾರೆ. ಯಾರಾದರೂ ಕಸವನ್ನು
ರಸ್ತೆಗೆ ಎಸೆದರೆ ಬಾರ್ಕೋಲಿನಿಂದ ಮೂರು ಸಲ ಭಾರಿಸುವ ಮತ್ತು ದಂಡ ವಿಧಿಸುವ ಕಠಿಣ ಕಾನೂನಿದೆ. ಧೂಮಪಾನ ಮಾಡಿ ಸಿಗರೇಟ್‌ ತುಂಡು ರಸ್ತೆಗೆ ಬೀಸಾಡುವಂತಿಲ್ಲ. ಮರಗಳ ಕೆಳಗೆ ಉದುರಿ ಬಿದ್ದ ಎಲೆಗಳ ಕಸವನ್ನಷ್ಟೇ ಪೌರಕಾರ್ಮಿಕರು ವಿಲೇವಾರಿ ಮಾಡುವುದು ಕಂಡುಬರುತ್ತದೆ. ರಸ್ತೆಗಳ ಕೆಳಗೆ ಚರಂಡಿಗಳಿದ್ದು, ಸುರಕ್ಷಿತ ವೈಜ್ಞಾನಿಕ ಮ್ಯಾನ್‌ಹೋಲ್‌ ಗಳಿರುವುದರಿಂದ ದುರ್ಗಂಧ ಹೊರ ಸೂಸುವ ಮಾತಿಲ್ಲ. 50 ಅಡಿ ಎತ್ತರದ ಕಟ್ಟಡಗಳಿಂದ ಸಾರ್ವಜನಿಕರು ಕಸವನ್ನು ಪೈಪ್‌ಗ್ಳ ಮೂಲಕ ಕೆಳಗೆ ಕಳಿಸುವ ಅಲ್ಲಿನ ವ್ಯವಸ್ಥೆ ಕಂಡು ನಮಗೆ ಆಶ್ಚರ್ಯವಾಯಿತು ಎಂದು ವಿವರಿಸಿದರು.

ಮಳೆ ನೀರು ನೇರವಾಗಿ ಚರಂಡಿಗೆ ಜಾರುತ್ತವೆ. ಪ್ಲಾಸ್ಟಿಕ್‌ ಕಸದಿಂದ ವಿದ್ಯುತ್‌ ತಯಾರಿಸಲಾಗುತ್ತದೆ. ಪ್ರತಿಯೊಂದು ಕಸವನ್ನು ವಿಂಗಡಿಸಿ ಮರುಬಳಕೆ ಮಾಡಲಾಗುತ್ತದೆ. ಶೇ.99ರಷ್ಟು ಜನ ಹೋಟೆಲ್‌ಗ‌ಳಲ್ಲೇ ಊಟ ಮಾಡುತ್ತಾರೆ. ತಟ್ಟೆಯಲ್ಲಿ ಊಟ-ಉಪಹಾರ ಉಳಿಸಿದರೆ ಹೋಟೆಲ್‌ ಮಾಲೀಕ ಗದರುತ್ತಾನೆ. 

ಸಮುದ್ರದ ಮಧ್ಯೆಯೇ ಈ ಸಿಂಗಾಪುರ ನಗರವಿದ್ದು, ಅಲ್ಲಿನ ನೀರು ಮಾತ್ರ ಕುಡಿಯಲು ಯೋಗ್ಯವಿಲ್ಲ. ಮಲೇಶಿಯಾದಿಂದ ನೀರು ತರಿಸಿಕೊಳ್ಳಲಾಗುತ್ತದೆ. ಅಲ್ಲಿನ ಉದ್ಯಾನವನ ಮತ್ತು ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಸಿಂಗಾಪುರ ಅಧ್ಯಯನ ಪ್ರವಾಸ ನಮ್ಮಲ್ಲಿ ಸ್ವತ್ಛತೆ ಅರಿವು ಮೂಡಿಸಿದೆ ಎಂದು ಪೌರಕಾರ್ಮಿಕರು ಅನುಭವ ಹೇಳಿಕೊಂಡರು. ನಮ್ಮಲ್ಲೂ ಅಂತಹ ಕಾನೂನುಗಳು ಜಾರಿಗೆ ಬಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿದರೆ ಸ್ವತ್ಛ ನಗರವನ್ನಾಗಿ ಮಾಡುವುದು ಕಷ್ಟವಲ್ಲ. ಆದರೆ ಆಡಳಿತ ಮನಸ್ಸು ಮಾಡಬೇಕು ಎಂದು ಹೇಳಿದರು.

Advertisement

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next