Advertisement
“ಅಮ್ಮಾ, ಯಾಕೋ ಅಳಬೇಕು ಅನ್ನಿಸ್ತಾ ಇದೆ. ನಾಲ್ಕು ಗೋಡೆಯ ಮಧ್ಯೆ ಏನು ಮಾಡಲಿ? ಇವರೋ ಬೆಳಗ್ಗೆ ಆಫೀಸ್‌ಗೆ ಹೋದವರು ಬರೋದು ಸಂಜೆಯೇ. ಅಲ್ಲಿವರೆಗೂ ಒಬ್ಬಳೇ ಇರಬೇಕು…’ ಅಳುವ ದನಿಯಲ್ಲಿ ಮಗಳು ಹೇಳುತ್ತಿದ್ದರೆ ಇತ್ತ ಊರಲ್ಲಿರುವ ಅಮ್ಮನಿಗೆ ಕರುಳು ಹಿಂಡಿದಂಥ ಅನುಭವ.
Related Articles
Advertisement
ಹಳ್ಳಿ ಪರಿಸರದಲ್ಲಿ ಬೆಳೆದ ಹೆಚ್ಚಿನ ಹೆಣ್ಣುಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆ ಇದು. ಸಿಟಿ ಜೀವನದಿಂದ ಬೇಸತ್ತು ತವರಿಗೆ ಬಂದರೆ, ಅಲ್ಲಿಯೂ ಅದೇ ಪ್ರಶ್ನೆ: “ಮದುವೆಯಾದ್ಮೇಲೆ ಲೈಫ್ ಹೇಗಿದೆ? ಮನೆಯಲ್ಲಿ ಕೂತು ಬೇಜಾರಾಗಲ್ವ?’ ಇಲ್ಲ ಅನ್ನಲೂ, ಹೌದೆಂದು ಒಪ್ಪಿಕೊಳ್ಳಲೂ ಆಗದ ಸ್ಥಿತಿ ಆಕೆಯದ್ದು. ಹೆಚ್ಚೆಂದರೆ ಹದಿನೈದು ದಿನ ತವರಿನಲ್ಲಿರಬಹುದು. ಮರಳಿ ಗೂಡಿಗೆ ಸೇರಲೇಬೇಕಲ್ಲವೆ? ಸಿಟಿ ಸೇರಿದ ಮೇಲೆ ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ.
ಮದುವೆಯಾದ ಹೊಸತರಲ್ಲಿ ಎಲ್ಲ ಹುಡುಗಿಯರನ್ನೂ ಕಾಡುವ ಸಮಸ್ಯೆಯಿದು. ಆ ಸಮಯದಲ್ಲಿ ಗಂಡನಾದವನು, ಅವಳಿಗೆ ಜೊತೆಯಾದರೆ, ಅವಳ ಭಾವನೆಗಳನ್ನು ಅರ್ಥ ಮಾಡಿಕೊಂಡರೆ, ಆಕೆಯೂ ಸಿಟಿ ಜೀವನಕ್ಕೆ ಹೊಂದಿಕೊಳ್ಳುತ್ತಾಳೆ.
ಗಂಡನೇ ಬೆಸ್ಟ್ ಫ್ರೆಂಡ್ಮದುವೆಯ ನಂತರ ಗಂಡನೇ ಆಕೆಯ ಬೆಸ್ಟ್‌ಫ್ರೆಂಡ್. ಗಂಡನೆನ್ನುವ ಅಧಿಕಾರದಿಂದ ಮಾತನಾಡುವ ಬದಲು ಸಲುಗೆಯಿಂದ ಗೆಳೆಯನಂತೆ ವರ್ತಿಸಿದರೆ, ಸತಿ-ಪತಿಯ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ. ಒಂದು ಮಿಸ್‌ಕಾಲ್
ಆಫೀಸ್‌ಗೆ ಹೋದ ನಂತರ ಕೆಲಸದಲ್ಲಿ ಮುಳುಗುವ ಮುನ್ನ, ನಿನ್ನ ಬಗ್ಗೆಯೂ ಯೋಚಿಸುತ್ತೇನೆ ಎಂಬುದನ್ನು ಪರೋಕ್ಷವಾಗಿ ಹೇಳಲು ಅವಳಿಗೊಂದು ಕಾಲ್ ಮಾಡಿ. ಗಂಟೆಗಟ್ಟಲೆ ಹರಟೆ ಹೊಡೆಯಬೇಕಾಗಿಲ್ಲ. “ಏನು ಮಾಡ್ತಾ ಇದ್ದೀಯ?’ ಅನ್ನೋ ಒಂದು ಮಾತು ಸಾಕು ಆಕೆಯನ್ನು ಖುಷಿಪಡಿಸಲು. ಸಂಜೆಯ ವಾಕಿಂಗ್
ಸಂಜೆ ಆಫೀಸಿನಿಂದ ಬಂದ ನಂತರವೂ ಕೆಲಸ, ಮೊಬೈಲ್, ಟಿವಿಯಲ್ಲಿ ಮುಳುಗಿ ಬಿಡಬೇಡಿ. ಹೆಂಡತಿಯ ಜೊತೆಗೆ ವಾಕಿಂಗ್ ಹೋಗಿ. ಬೆಳಗಿನಿಂದ ಸಂಜೆಯವರೆಗೆ ಮನೆಯಲ್ಲೇ ಇರುವ ಪತ್ನಿಯ ಎಲ್ಲ ಬೇಸರವೂ ಅದರಿಂದ ದೂರಾಗುತ್ತದೆ. ಸಪ್ಪೆಯಾಗಿರಬೇಡಿ
ಹೆಂಡತಿ ಸಂತೋಷವಾಗಿ ಇರುವಂತೆ ನೋಡಿಕೊಳ್ಳುವುದು ಗಂಡನ ಕರ್ತವ್ಯ ಇರಬಹುದು. ಆದರೆ, ಹೊಸ ಬದುಕಿಗೆ ಹೊಂದಿಕೊಳ್ಳುವುದು ಹೆಂಡತಿಯ ಕೈಯಲ್ಲೇ ಇದೆ. ಪತಿ ಮನೆಗೆ ಬಂದಾಗ ಸಪ್ಪೆ ಮುಖದಿಂದ ಬಾಗಿಲು ತೆಗೆಯಬೇಡಿ. ಮಾತುಮಾತಿಗೆ, “ಬೋರ್ ಆಗ್ತಾ ಇದೆ. ತವರು ಮನೆಯೇ ಚಂದ ಇತ್ತು’ ಎಂದು ಕೊರಗುತ್ತಾ ಇರಬೇಡಿ. ನಕಾರಾತ್ಮಕ ಯೋಚನೆಗಳನ್ನು ದೂರವಿಟ್ಟು, ಖುಷಿಯಾಗಿರಿ. ಹವ್ಯಾಸ ಬೆಳೆಸಿಕೊಳ್ಳಿ
ಮನೆಯಲ್ಲೇ ಕುಳಿತು ಬೋರ್ ಅನ್ನುವುದಕ್ಕಿಂತ, ಹೊಸ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಓದು, ಬರಹ, ಸಂಗೀತ, ನೃತ್ಯ, ಚಿತ್ರಕಲೆ, ಅಡುಗೆ, ಹೊಲಿಗೆ…ಸೃಜನಾತ್ಮಕವಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಹತ್ತಾರು ಮಾರ್ಗಗಳಿವೆ. ನಿಮ್ಮ ಸಂತೋಷ ನಿಮ್ಮ ಕೈಯಲ್ಲಿ!
ಸಂತೋಷದ ರಿಮೋಟನ್ನು ಯಾರದೋ ಕೈಗೆ ಕೊಡಬೇಡಿ. ಗಂಡ, ಹೆತ್ತವರು, ಅತ್ತೆ-ಮಾವ ನಿಮಗೆ ಸಾಂತ್ವನ ಹೇಳಬಹುದೇ ಹೊರತು, ಅವರಿಂದಲೇ ಎಲ್ಲವನ್ನೂ ಬಯಸುವುದು ಸರಿಯಲ್ಲ. ನಿಮ್ಮ ಸಂತೋಷ, ನೆಮ್ಮದಿ, ಸಮಾಧಾನಕ್ಕೆ ನೀವೇ ವಾರಸುದಾರರಾಗಿ. ವಂದನಾ ರವಿ ಕೆ.ವೈ., ವೇಣೂರು