ಹುಬ್ಬಳ್ಳಿ: ಕಿಮ್ಸ್‌ನಲ್ಲಿ 128 ಸ್ಲೈಸ್ ಸ್ಕ್ಯಾನಿಂಗ್ ಯಂತ್ರವನ್ನು ಜುಲೈನಲ್ಲಿ ಅಳವಡಿಸಲಾಗಿದ್ದು, ಕಂಪನಿಯವರು ಸೋಮವಾರ ಕಿಮ್ಸ್‌ಗೆ ಬಂದು ವೈದ್ಯರಿಗೆ ಇದರ ಬಳಕೆ, ನಿರ್ವಹಣೆ ಬಗ್ಗೆ ತರಬೇತಿ ನೀಡಿ, ಪ್ರಮಾಣ ಪತ್ರ ನೀಡಿದ ನಂತರ ಸೇವೆಗೆ ಮುಕ್ತವಾಗಲಿದೆ.
ಅಂದಾಜು 5.32 ಕೋಟಿ ರೂ. ವೆಚ್ಚದ 128 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ರೋಗಿಯ ದೇಹದ ಯಾವುದೇ ಭಾಗವನ್ನು ಸಿಟಿ ಸ್ಕ್ಯಾನ್ ಮಾಡಿ ಅದರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ರೋಗಿಯ ದೇಹವು ಯಂತ್ರದೊಳಗೆ ಸೇರುತ್ತಿದ್ದಂತೆ ರಕ್ತನಾಳ, ಎಲುಬು, ಸ್ನಾಯು, ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕರನೊರಿ ಆರ್ಟಿಸ್, ಪುಪ್ಪಸದ ಸ್ಕ್ಯಾನ್ ಸೇರಿದಂತೆ ದೇಹದ ಎಲ್ಲ ಭಾಗದ ಚಿತ್ರವು ಉತ್ಕೃಷ್ಟ ಗುಣಮಟ್ಟ,3 ಡಿ ಪರಿಣಾಮವಾಗಿ ಸಿಗುವುದರಿಂದ ರೋಗಿಗೆ ಇಂತಹುದೆ ರೋಗವಿದೆ ಎಂದು ತಜ್ಞ ವೈದ್ಯರಿಗೆ ಪತ್ತೆ ಮಾಡಲು ಸಹಕಾರಿಯಾಗಲಿದೆ. ಅತಿ ಕಡಿಮೆ ಅವಧಿಯಲ್ಲಿ ಸ್ಕ್ಯಾನ್ ಆಗುವುದರಿಂದ ರೋಗಿಗಳ ಮೇಲೆ ಕ್ಷ-ಕಿರಣದಿಂದ ಉಂಟಾಗಬಹುದಾದ ದುಷ್ಪರಿಣಾಮ ಕಡಿಮೆಯಾಗಲಿದೆ. ಅಲ್ಲದೇ ಸ್ಕ್ಯಾನ್‌ಗಾಗಿ ರೋಗಿಗಳು ತಾಸುಗಟ್ಟಲೇ ಕಾಯುವುದು, ಅಲೆಯುವುದು ತಪ್ಪಲಿದೆ.
ದಿನಕ್ಕೆ 100 ಸ್ಕ್ಯಾನಿಂಗ್ ಸಾಧ್ಯ: ಕಿಮ್ಸ್ ಆಸ್ಪತ್ರೆಗೆ ಪ್ರತಿದಿನ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ರೋಗಿಗಳ ಶೀಘ್ರ ಶುಶ್ರೂಷೆ ಮಾಡಲು ಅವಶ್ಯವಿರುವ ಸ್ಕ್ಯಾನಿಂಗ್ ಯಂತ್ರವಿರಲಿಲ್ಲ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆ ಆಗುತ್ತಿತ್ತು. ಇದನ್ನೆಲ್ಲ ನಿವಾರಿಸಲು ಈ ಆಧುನಿಕ ಯಂತ್ರ ಅಳವಡಿಸಲಾಗಿದೆ. ಪ್ರತಿದಿನ 80-100 ರೋಗಿಗಳ ಸ್ಕ್ಯಾನಿಂಗ್ ಮಾಡಬಹುದಾಗಿದೆ. ಈ ಮೊದಲು ಕಿಮ್ಸ್ ನಲ್ಲಿದ್ದ ಹಳೆಯ ಸ್ಕ್ಯಾನಿಂಗ್ ಯಂತ್ರದಿಂದ ದಿನಕ್ಕೆ 15-20 ರೋಗಿಗಳಿಗೆ ಮಾತ್ರ ಸ್ಕ್ಯಾನಿಂಗ್ ಮಾಡಬಹುದಿತ್ತು. ಈ ಹೊಸ ಯಂತ್ರವು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಬೆಂಗಳೂರಿನ ವೈದ್ಯಕೀಯ ಕಾಲೇಜ್‌ನಲ್ಲಿದೆ. ಅದನ್ನು ಬಿಟ್ಟರೆ ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾದ ಎರಡನೆಯ ಯಂತ್ರ ಇದಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ ಅಳವಡಿಸಲಾದ ಆಧುನಿಕ 128 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಬಳಕೆ ಕುರಿತು ಕಂಪನಿಯವರು ವೈದ್ಯರಿಗೆ ಸೋಮವಾರ ತರಬೇತಿ ನೀಡಲಿದ್ದಾರೆ. ಆನಂತರ ಕಿಮ್ಸ್‌ನ ವೈದ್ಯರು ಈ ಯಂತ್ರವನ್ನು ರೋಗಿಗಳ ಮೇಲೆ ಬಳಕೆ ಮಾಡಬಹುದು ಎಂಬುದರ ಬಗ್ಗೆ ತಪಾಸಣೆ ನಡೆಸಿ ಪ್ರಮಾಣಪತ್ರ ನೀಡಲಿದ್ದಾರೆ. ನೂತನ ಯಂತ್ರದಿಂದಾಗಿ ರೋಗಿಗಳಿಗೆ ಅನುಕೂಲವಾಗಲಿದೆ.
ಡಾ| ದತ್ತಾತ್ರೇಯ ಡಿ. ಬಂಟ್,
ನಿರ್ದೇಶಕ, ಕಿಮ್ಸ್
ಶಿವಶಂಕರ ಕಂಠಿ