Advertisement

“ಸಿಟಿ ಸ್ಕ್ಯಾನ್‌’ಗೆ ಖಾಸಗಿ ಕೇಂದ್ರವೇ ಗತಿ!

06:33 PM May 18, 2022 | Team Udayavani |

ಕೊಪ್ಪಳ: ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿದೆ ಎನ್ನುವ ಮಾತುಗಳು ಬರಿ ಹೇಳಿಕೆಗೆ ಮಾತ್ರ ಎನ್ನುವಂತಾಗಿದೆ. ಆದರೆ ನೈಜವಾಗಿ ಬಡ ರೋಗಿಗಳಿಗೆ ಇನ್ನೂ ಶುಲ್ಕದ ಹೊರೆ ತಪ್ಪುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಸಿಟಿ ಸ್ಕ್ಯಾನ್‌ ಆರಂಭಿಸಿಲ್ಲ. ಕೋವಿಡ್‌ ನಲ್ಲೇ ಯಂತ್ರಗಳು ಬಂದಿದ್ದರೂ ಅಳವಡಿಕೆ ವಿಳಂಬವಾಗುತ್ತಿದೆ. ಇದರಿಂದ ರೋಗಿಗಳು ದುಬಾರಿ ಶುಲ್ಕ ನೀಡಿ ಖಾಸಗಿ ಸೆಂಟರ್‌ ಗಳಿಗೆ ತೆರಳುವಂತಾಗಿದೆ.

Advertisement

ಹೌದು. ಜನಸಂಖ್ಯೆ ಬೆಳೆದಂತೆ ಜಿಲ್ಲೆಯಲ್ಲಿನ ಆಸ್ಪತ್ರೆಗಳ ಕಟ್ಟಡಗಳು ವಿಸ್ತಾರವಾಗಿವೆ. ಆದರೆ ಆಸ್ಪತ್ರೆಗಳಲ್ಲಿನ ಹುದ್ದೆಗಳು ಇನ್ನು ವಿಸ್ತರಣೆ ಕಂಡಿಲ್ಲ. ಹಳೇ ಆಸ್ಪತ್ರೆ ಸಾಮರ್ಥ್ಯಕ್ಕೆ ತಕ್ಕಂತೆ ಈಗಲೂ ಇವೆ. ಹುದ್ದೆಗಳನ್ನು ಉನ್ನತೀಕರಿಸಿಲ್ಲ. ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದರೂ ಇಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಲ್ಲಿ ಯಾರಿಗಾದರೂ ಅಪಘಾತ ಸಂಭವಿಸಿದಾಗ ತೆಲೆ, ಎದೆಯ ಭಾಗಕ್ಕೆ ತೀವ್ರ ಪೆಟ್ಟಾದ ಸಂದರ್ಭದಲ್ಲಿ ಅವರನ್ನು ಪ್ರಾಣಾಪಾಯದಿಂದ ಪಾರಾ ಮಾಡಲು ಕೆಲ ತಪಾಸಣೆ ಮಾಡಬೇಕಾಗುತ್ತದೆ. ಅದರಲ್ಲೂ ಸಿಟಿ ಸ್ಕ್ಯಾನ್‌ ಮಾಡುವುದು ಅಗತ್ಯವಾಗುತ್ತದೆ. ಆದರೆ ಜಿಲ್ಲೆಯಲ್ಲಿನ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಈವರೆಗೂ ಸಿಟಿ ಸ್ಕ್ಯಾನ್‌ ವ್ಯವಸ್ಥೆಯಿಲ್ಲ. ಇದು ನಿಜಕ್ಕೂ ಶೋಚನೀಯ ಸಂಗತಿ. ಇದರಿಂದ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಖಾಸಗಿಯೇ ಗತಿ: ಜಿಲ್ಲೆಯಲ್ಲಿನ ರೋಗಿಗಳು ಸಿಟಿ ಸ್ಕ್ಯಾನ್‌ಗಾಗಿ ಖಾಸಗಿ ಸ್ಕ್ಯಾನ್‌ ಸೆಂಟರ್‌ಗಳಿಗೆ ತೆರಳುವಂತ ಪರಿಸ್ಥಿತಿಯಿದೆ. ಸರ್ಕಾರಿ ಆಸ್ಪತ್ರೆಗಳಲ್ಲಾದರೆ ಉಚಿತ ತಪಾಸಣೆ ಮಾಡಲಾಗುತ್ತದೆ. ಆದರೆ ಖಾಸಗಿ ಮೋರೆ ಹೋದರೆ ಕನಿಷ್ಟವೆಂದರೂ ಓರ್ವ ರೋಗಿಗೆ 2500-3000 ರೂ. ಶುಲ್ಕ ಪಾವತಿಸುವಂತ ಸ್ಥಿತಿಯಿದೆ. ಖಾಸಗಿ ಕೇಂದ್ರಗಳು ಸರ್ಕಾರದ ನಿಯಮ ಮೀರಿಯೂ ರೋಗಿಗಳಿಂದ ಶುಲ್ಕ ಪಡೆದು ಸ್ಕ್ಯಾನ್‌ ಮಾಡುತ್ತಿವೆ. ಆರೋಗ್ಯ ಇಲಾಖೆ ಇದರ ಮೇಲೆ ನಿಯಂತ್ರಣ ಸಾಧಿಸುತ್ತಿಲ್ಲ. ಖಾಸಗಿ ಬಿಟ್ಟರೆ ಬೇರೆ ಗತಿಯೇ ಇಲ್ಲ ಎನ್ನುವಂತಾಗಿದೆ.

ಇಲ್ಲಿ ಖಾಸಗಿ ಸೆಂಟರ್‌ಗಳ ಲಾಭಿಯೋ ಅಥವಾ ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ ವೋ ತಿಳಿಯದಂತಾಗಿದೆ. ಬಡ ರೋಗಿಗಳಿಗೆ ಸ್ಕ್ಯಾನ್‌ಗೆ ಹಣ ಪಾವತಿಸಲಾಗದೇ ಅದೆಷ್ಟೊ ಬಾರಿ ಪರದಾಡಿದ ಪ್ರಸಂಗವೂ ನಡೆದಿವೆ.

4 ಯಂತ್ರ ಇದ್ದರೂ ಅಳವಡಿಕೆ ವಿಳಂಬ: ಕಳೆದ ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಸ್ಕ್ಯಾನ್‌ ಮಷಿನ್‌ಗಳ ಸಮಸ್ಯೆ ಅರಿತು ಸರ್ಕಾರವು ಎನ್‌ಎಚ್‌ಎಂ, ಕೆಕೆಆರ್‌ಡಬಿ ಸೇರಿ ವಿವಿಧ ಯೋಜನೆಯಡಿ ಜಿಲ್ಲೆಗೆ ನಾಲ್ಕು ಸಿಟಿ ಸ್ಕ್ಯಾನ್‌ ಮಷಿನ್‌ ಮಂಜೂರು ಮಾಡಿದೆ. ಕುಷ್ಟಗಿ, ಯಲಬುರ್ಗಾ, ಗಂಗಾವತಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ತಲಾ ಒಂದೊಂದು ಮಂಜೂರಾಗಿದ್ದರೆ, ಕೊಪ್ಪಳದ ಮೆಡಿಕಲ್‌ ಕಾಲೇಜಿಗೆ ಒಂದು ಸಿಟಿ ಸ್ಕ್ಯಾನ್‌ ಯಂತ್ರ ಮಂಜೂರಾಗಿದೆ. ಇವೆಲ್ಲವುಗಳನ್ನು ಇನ್ನು ಅಳವಡಿಕೆ ಮಾಡುವ ಕಾರ್ಯದಲ್ಲಿಯೇ ಆರೋಗ್ಯ ಇಲಾಖೆ ಕಾಲಹರಣ ಮಾಡುತ್ತಿದೆ. ಈ ಯಂತ್ರಗಳ ಆಪರೇಟ್‌ ಮಾಡುವ ತಜ್ಞ ವೈದ್ಯರ ಅಗತ್ಯವಿದೆ. ಜೊತೆಗೆ ಅದಕ್ಕೆ ಸಿಬ್ಬಂದಿಗಳ ವ್ಯವಸ್ಥೆಯೂ ನಡೆಯಬೇಕಿದೆ.

Advertisement

ಇಲ್ಲಿ ಸಿಟಿ ಸ್ಕ್ಯಾನ್‌ ಪೂರೈಕೆ ಹಾಗೂ ಅಳವಡಿಕೆ ಮಾಡುವಲ್ಲಿ ಏಜೆನ್ಸಿಗಳ ಸಮಸ್ಯೆಯೋ? ಆರೋಗ್ಯ ಇಲಾಖೆ ವಿಳಂಭ ಧೋರಣೆಯೋ? ಅಥವಾ ಖಾಸಗಿ ಲಾಭಿಯೋ ತಿಳಿಯದಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆಯ ಕಟ್ಟಡವಿದ್ದರೂ ಸಿಟಿ ಸ್ಕ್ಯಾನ್‌ ಇಲ್ಲ. ಯಂತ್ರ ಮಾತ್ರ ಬಂದಿವೆ ಎನ್ನುವ ಮಾತುಗಳು ಆರೋಗ್ಯ ಇಲಾಖೆಯಿಂದ ಕೇಳಿ ಬಂದಿದೆ. ಇನ್ನಾದರೂ ಬಡವರ ಸಮಸ್ಯೆ ಅರಿತು ಸ್ಕ್ಯಾನ್‌ ಯಂತ್ರಗಳನ್ನು ಶೀಘ್ರ ಆಸ್ಪತ್ರೆಗಳಲ್ಲಿ ಅಳವಡಿಸಿ ಅದಕ್ಕೆ ತಕ್ಕಂತೆ ಸಿಬ್ಬಂದಿ, ತಜ್ಞ ವೈದ್ಯರನ್ನು ನಿಯೋಜಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕಿದೆ. ಜನಪ್ರತಿನಿಧಿಗಳು ಸಹ ಇತ್ತ ಕಾಳಜಿ ವಹಿಸುವ ಅಗತ್ಯವಿದೆ.

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next