Advertisement

ನ್ಯಾಯಾಧೀಶರಿಂದ ನಗರ ಪ್ರದಕ್ಷಿಣೆ

04:40 PM Apr 04, 2020 | Suhan S |

ಗದಗ: ಕೋವಿಡ್ 19 ವೈರಸ್‌ ತಡೆಗಾಗಿ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ನಿರಾಶ್ರಿತರು, ಬಡವರಿಗೆ ಜಿಲ್ಲಾಡಳಿತ ಪರಿಹಾರ ಕಾರ್ಯಗಳ ಪರಿಶೀಲನೆಗಾಗಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿರದ ನ್ಯಾಯಾಧೀಶರು ನಗರದಲ್ಲಿ ಸುತ್ತಾಡಿ ಅವಲೋಕಿಸಿದರು.

Advertisement

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಜಿ.ಎಸ್‌. ಸಂಗ್ರೇಶಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ನ್ಯಾ|ಎಸ್‌.ಜಿ. ಸಲಗರೆ ಅವರು ಜೊತೆಗೆ ಸತತ ಎರಡನೇ ದಿನವೂ ನಗರದಲ್ಲಿ ಪ್ರದಕ್ಷಿಣೆ ಹಾಕಿದರು. ಈ ವೇಳೆ ನಗರದ ತೋಂಟದಾರ್ಯ ಮಠ ಹಾಗೂ ಬೆಟಗೇರಿ ಅಂಡರ್‌ ಬ್ರಿಜ್ಡ್ ಬಳಿಕ ಕಂಡುಬಂದ ಇಬ್ಬರು ಭಿಕ್ಷುಕರ ಮನವೊಲಿಸಿದರು. ಅಲ್ಲದೇ ಇದ್ದ ಆಟೋವೊಂದರಲ್ಲಿ ಸ್ವ ಆಧಾರ ವೃದ್ಧಾಶ್ರಮಕ್ಕೆ ಕಳುಹಿಸಿಕೊಟ್ಟರು.

ಇದಕ್ಕೂ ಮುನ್ನ ಕಾರ್ಮಿಕ ಇಲಾಖೆ, ರೆಡ್‌ಕ್ರಾಸ್‌, ವಿವಿಧ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ನಗರಸಭೆ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದ ಬಳಿ ನಡೆದ ಸುರಕ್ಷತ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಆಟೋ ಚಾಲಕರಿಗೆ ಮಾಸ್ಕ್, ಸ್ಯಾನಿಟೈಜರ್‌ ಹಾಗೂ ಕೊರೊನಾ ತಡೆಗಟ್ಟುವಿಕೆ ಕುರಿತು ಕರಪತ್ರವನ್ನು ಒಳಗೊಂಡ ಕಿಟ್‌ ವಿತರಿಸಿದರು.

ಪೌರ ಕಾರ್ಮಿಕರಿಗೆ ಸನ್ಮಾನ: ಗದಗ-ಬೆಟಗೇರಿ ನಗರಸಭೆ ಸ್ವಚ್ಛತಾ ಸಿಬ್ಬಂದಿಯನ್ನು ನಗರದ ಸರ್ವೋದಯ, ಡಾಲರ್ಸ್‌ ಕಾಲೋನಿಯಲ್ಲಿ ಜೈನ್‌ ಸಮಾಜದವರು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ಎಂದಿನಂತೆ ರಸ್ತೆ ಹಾಗೂ ಚರಂಡಿ ಸ್ವಚ್ಛತೆಯಲ್ಲಿ ತೊಡಗಿದ್ದ ನಗರಸಭೆ ಸಿಬ್ಬಂದಿಗೆ ಸ್ಥಳೀಯರು ಹಾರ ಹಾಕಿ, ಸನ್ಮಾನಿಸಿದರು.

 ವಾಹನಗಳ ನಿರ್ಬಂಧ: ಲಾಕ್‌ಡೌನ್‌ ಮಧ್ಯೆಯೂ ಕೆಲವರು ಮಾರುಕಟ್ಟೆ ಪ್ರದೇಶದಲ್ಲಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಎಲ್ಲೆಡೆ ಬ್ಯಾರಿಕೇಡ್‌ ಹಾಕಿದೆ. ಇಲ್ಲಿನ ಮಹೇಂದ್ರಕರ್‌ ಸರ್ಕಲ್‌, ಹಳೇ ಬಸ್‌ ನಿಲ್ದಾಣ, ಪಟೇಲ್‌ ರಸ್ತೆ, ಬಸವೇಶ್ವರ ಸರ್ಕಲ್‌, ಪಂಚರಹೊಂಡ, ಸರಾಫ್‌ ಬಜಾರ್‌ ಭಾಗದಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿದೆ. ಹೀಗಾಗಿ ನಾಮಜೋಶಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿಗಳಿಗೆ ಆಗಮಿಸುವ ಜನರು ಬಹು ದೂರವೇ ತಮ್ಮ ವಾಹನ ನಿಲ್ಲಿಸಿ, ನಡೆದುಕೊಂಡು ಬರಬೇಕು. ಬೆಳಗ್ಗೆ 10 ಗಂಟೆ ಬಳಿಕ ಅವಳಿ ನಗರದ ಎಲ್ಲೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

Advertisement

ಮಾಂಸ ಮಾರಾಟ ಆರಂಭ: ವರ್ತಕರ ಮನವಿ ಮೇರೆಗೆ ಶುಕ್ರವಾರದಿಂದ ಮಾಂಸ ಮಾರಾಟ ಆರಂಭವಾಗಿದೆ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, 700 ರೂ. ಕೆ.ಜಿ. ದರದಲ್ಲಿ ಮಾಂಸ ಖರೀದಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ನ್ಯಾಯ ಬೆಲೆ ಅಂಗಡಿಕಾರರು ವಾಹನಗಳಲ್ಲಿ ಮನೆ ಬಾಗಿಲಿಗೆ ಪಡಿತರ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next