ಹುಬ್ಬಳ್ಳಿ: ಹಲವು ದಿನಗಳಿಂದ ಅವಳಿ ನಗರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಮಳೆಯಿಂದಾಗುವ ವಿಕೋಪಗಳನ್ನು ತಡೆಯುವ ದಿಸೆಯಲ್ಲಿ ಮಹಾನಗರ ಪಾಲಿಕೆ ಸರ್ವಸನ್ನದ್ಧವಾಗಿದ್ದು, ವಿವಿಧ ವಿಭಾಗಗಳ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿದೆ.
ತಗ್ಗು ಪ್ರದೇಶಗಳ ಜನವಸತಿಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ಕೂಡ ನಿಯೋಜಿಸಲಾಗಿದ್ದು, ಸಂದರ್ಭ ಒದಗಿ ಬಂದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಮುದಾಯ ಭವನಗಳು, ಶಾಲೆಗಳು, ಸರಕಾರಿ ಭವನಗಳಲ್ಲದೇ ಖಾಸಗಿ ಭವನಗಳಲ್ಲಿ ಕೂಡ ವಸತಿ ಕಲ್ಪಿಸುವ ದಿಸೆಯಲ್ಲಿ ಪಾಲಿಕೆ ಕಾರ್ಯೋನ್ಮುಖವಾಗಿದೆ.
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ (ಎಇಇ) ದರ್ಜೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ತಂಡಗಳನ್ನು ರಚನೆ ಮಾಡಲಾಗಿದ್ದು, ಪ್ರತಿ ವಲಯದಲ್ಲಿ ಎರಡು ತಂಡಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿ ತಂಡದಲ್ಲಿ 10 ಸದಸ್ಯರಿದ್ದು, ಎರಡು ತಂಡಗಳು ಶಿಫ್ಟ್ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿವೆ.
ಒಂದು ತಂಡ ಮಧ್ಯಾಹ್ನ 2:00 ಗಂಟೆಯಿಂದ ರಾತ್ರಿ 10:00 ಗಂಟೆವರೆಗೆ ಕಾರ್ಯ ನಿರ್ವಹಿಸಿದರೆ, ಇನ್ನೊಂದು ತಂಡ ರಾತ್ರಿ 10:00 ಗಂಟೆಯಿಂದ ಬೆಳಗ್ಗೆ 6:00 ಗಂಟೆವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ತಂಡದಲ್ಲಿ ಪೌರ ಕಾರ್ಮಿಕರು, ಹೆಲ್ತ್ ಇನ್ಸ್‌ಪೆಕ್ಟರ್‌ಗಳು, ಜಮಾದಾರ್‌ಗಳನ್ನು ಸೇರಿಸಿಕೊಳ್ಳಲಾಗಿದೆ. ಸಂಬಂಧಿತ ಸಿಬ್ಬಂದಿ ತ್ವರಿತಗತಿಯಲ್ಲಿ ಕಾರ್ಯೋನ್ಮುಖರಾಗುವಂತೆ ಪಾಲಿಕೆ ಆಯಕ್ತರು ತಿಳಿಸಿದ್ದಾರೆ.
Advertisement
ಮಳೆ ವಿಕೋಪ ನಿರ್ವಹಣಾ ವಿಶೇಷ ತಂಡ ಮಳೆಯಿಂದಾಗುವ ಅನಾಹುತಗಳ ದೂರುಗಳಿಗೆ ಆದ್ಯತೆ ನೀಡುವಂತೆ ಮಹಾನಗರ ಪಾಲಿಕೆ ಸಹಾಯವಾಣಿಗೆ ಸೂಚಿಸಿದೆ. ದಿನದ 24 ಗಂಟೆಯೂ ಸ್ವೀಕರಿಸಿದ ದೂರುಗಳನ್ನು ಸಂಬಂಧಿತ ವಿಭಾಗಗಳ ಸಿಬ್ಬಂದಿ ಗಮನಕ್ಕೆ ತರುವಂತೆ ತಿಳಿಸಲಾಗಿದೆ.
Related Articles
Advertisement
•ವಲಯಕ್ಕೆರಡು ವಿಶೇಷ ತಂಡ ರಚನೆ
•ಶಿಫ್ಟ್ ಆಧಾರದಲ್ಲಿ ಕಾರ್ಯ ನಿರ್ವಹಣೆ
•ತಂಡದಲ್ಲಿದ್ದಾರೆ ಪೌರ ಕಾರ್ಮಿಕರು, ಹೆಲ್ತ್ ಇನ್ಸ್ ಪೆಕ್ಟರ್‌ಗಳು, ಜಮಾದಾರ್
•ಸಂದರ್ಭ ಒದಗಿ ಬಂದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ವ್ಯವಸ್ಥೆ
ನಾಲಾಗಳ ದಡದಲ್ಲಿರುವ ಜನವಸತಿ ಮೇಲೆ ಹೆಚ್ಚು ನಿಗಾ:
ದಿನದಿಂದ ದಿನಕ್ಕೆ ಮಳೆ ಪ್ರಮಾಣ ಹೆಚ್ಚುತ್ತಿರುವುದರಿಂದ ಅನಾಹುತಗಳ ಸಾಧ್ಯತೆ ಜನರನ್ನು ಆತಂಕಿತರನ್ನಾಗಿಸಿದೆ. ನಾಲಾಗಳ ದಡದಲ್ಲಿರುವ ಜನವಸತಿ ಮೇಲೆ ಹೆಚ್ಚಿನ ಗಮನ ಹರಿಸಲು ಸೂಚಿಸಲಾಗಿದೆ. ಕೆಲ ದಿನಗಳ ಹಿಂದೆ ಕುಂಭದ್ರೋಣ ಮಳೆಯಿಂದ ನಾಲಾ ನೀರು ಮನೆಗಳಿಗೆ ನುಗ್ಗಿ ಜನರಿಗೆ ಗಂಜಿಕೇಂದ್ರ ತೆರೆಯುವ ಸ್ಥಿತಿ ಉಂಟಾಗಿತ್ತು. ನಾಲಾಗಳಿಂದ 15 ಅಡಿ ದೂರದಲ್ಲಿ ಕಟ್ಟಡ ನಿರ್ಮಿಸಬೇಕೆಂಬ ನಿಯಮವಿದ್ದರೂ ನಾಲಾದ ಹತ್ತಿರವೇ ಮನೆ, ಅಂಗಡಿ ಕಟ್ಟಿಕೊಂಡಿರುವುದು ಸಮಸ್ಯೆ ಉಲ್ಭಣಿಸುವಂತೆ ಮಾಡಿದೆ. ಹಳೇ ಹುಬ್ಬಳ್ಳಿಯ ಹೆಗ್ಗೇರಿ, ಜಗದೀಶ ನಗರ, ಕಸಬಾ ಪೇಟ ಪ್ರದೇಶಗಳಲ್ಲಿ ಮನೆಗಳಲ್ಲಿ ನೀರು ನುಗ್ಗುವ ಸಮಸ್ಯೆ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ನಗರದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕೆಲವು ಕಡೆ ಮನೆಗಳು ಬಿದ್ದಿದ್ದರೆ, ಇನ್ನೂ ಕೆಲ ಮನೆಗಳ ಗೋಡೆಗಳು ಕುಸಿದಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆಯಾಗಿದೆ. ರಸ್ತೆಗಳು ಹಾಳಾಗಿದ್ದು, ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಕೆಲವು ರಸ್ತೆಗಳು ಹೊಂಡಗಳಂತಾಗಿವೆ. ಇದರಿಂದಾಗಿ ಕೆಲವು ಅನಾಹುತಗಳಾಗಿವೆ. ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಉಣಕಲ್ಲ ಕೋಡಿ ತುಂಬಿ ಹರಿದಿದೆ. ಇದರಿಂದ ಹೆಚ್ಚಾದ ನೀರು ಹರಿಯುವ ಕಾಲುವೆಗಳ ಅಕ್ಕಪಕ್ಕಗಳಲ್ಲಿನ ಕಟ್ಟಡಗಳು, ಕೊಳೆಗೇರಿಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ.
ಮಳೆ ಸುರಿವ ಸಂದರ್ಭದಲ್ಲಿ ಮಾತ್ರ ನಾಲಾಗಳ ಅಭಿವೃದ್ಧಿ ಬಗ್ಗೆ ಚಿಂತಿಸಲಾಗುತ್ತಿದೆ. ಕೆಲವು ನಾಲಾಗಳು ಹಾಳಾಗಿವೆ. ಪಾಲಿಕೆ ಸದಸ್ಯರ ಪ್ರಭಾವ ಸೇರಿದಂತೆ ಹಲವು ಕಾರಣಗಳಿಂದ ನಾಲಾ ಸಮೀಪ ನಿರ್ಮಿಸಿರುವ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಹಿಂದೇಟು ಹಾಕುತ್ತಿದೆ. ನಿಯಮ ಉಲ್ಲಂಘಿಸಿ ನಾಲಾಗಳ ಸಮೀಪ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವುದು ಅವಶ್ಯವಿದೆ. ನಾಲಾಗಳ ಸುತ್ತಮುತ್ತಲಿನ ಜನವಸತಿಯನ್ನು ತೆರವು ಮಾಡಿದರೆ, ಒಳಚರಂಡಿ ವ್ಯವಸ್ಥೆ ಸುಧಾರಿಸಿದರೆ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ.
ಮಳೆ ವಿಕೋಪವನ್ನು ತಡೆಗಟ್ಟಲು ಮಹಾನಗರ ಪಾಲಿಕೆ ಸನ್ನದ್ಧವಾಗಿದೆ. ಮಳೆ ಅನಾಹುತ ನಿರ್ವಹಣೆಗೆ ವಿಶೇಷ ತಂಡಗಳನ್ನು ಮಾಡಲಾಗಿದ್ದು, ದೂರುಗಳನ್ನು ತ್ವರಿತವಾಗಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲು ಕಂಟ್ರೋಲ್ ರೂಮ್‌ಗೆ ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಳೆ ಅನಾಹುತ ಸಂಬಂಧಿತ ದೂರುಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.• ಸುರೇಶ ಇಟ್ನಾಳ,ಮಹಾನಗರ ಪಾಲಿಕೆ ಆಯುಕ್ತ
•ವಿಶ್ವನಾಥ ಕೋಟಿ