ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ 2993 ಕೋಟಿ ರೂ.ಗಳ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಇಲಾಖೆಯು ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯು 9 ಜಿಲ್ಲೆಗಳ 503.25 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ ನೀಡಿತು.
ಇಂದಿನ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 80.75 ಕೋಟಿ. ರೂ, ಬೆಂಗಳೂರು ನಗರ ಜಿಲ್ಲೆಯ 123.25 ಕೋಟಿ ರೂ.,ಕೋಲಾರ ಜಿಲ್ಲೆ(ಬಂಗಾರ ಪೇಟೆ ಪುರಸಭೆ ಮಾತ್ರ):8.5 ಕೋಟಿ ರೂ.,ತುಮಕೂರು ಜಿಲ್ಲೆ: (ತಿಪಟೂರು ನಗರ ಸಭೆ ಮತ್ತು ಹುಳಿಯಾರ್ ಪಟ್ಟಣ ಪಂಚಾಯಿತಿ ಹೊರತು ಪಡಿಸಿ):72.25 ಕೋಟಿ ರೂಪಾಯಿ, ಹಾಸನ ನಗರ ಸಭೆಗೆ ಹೆಚ್ಚುವರಿ ಮೊತ್ತ 6 ಕೋಟಿ ರೂ.,ಬೆಳಗಾವಿ(ಚಿಕ್ಕೋಡಿ ಪುರಸಭೆ ಮಾತ್ರ):8.5 ಕೋಟಿ ರೂ.,ಉತ್ತರ ಕನ್ನಡ(ಕಾರವಾರ,ದಾಂಡೇಲಿ, ಕುಮಟ,ಅಂಕೋಲ,ಹೊನ್ನಾವರ ನಗರ ಸ್ಥಳೀಯ ಸಂಸ್ಥೆಗಳು ಮಾತ್ರ):80.75 ಕೋಟಿ ರೂ., ಹಾಗೂ ಕಲಬುರಗಿ ಜಿಲ್ಲೆಯ 97.75 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದರಿಂದಾಗಿ ಈವರೆಗೆ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ 2993 ಕೋಟಿ ರೂಪಾಯಿಗಳ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯ 3885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿದ್ದವು.
ಈ ಯೋಜನೆಯಡಿ 117 ಪಟ್ಟಣ ಪಂಚಾಯತಿಗಳು ತಲಾ 5 ಕೋಟಿ ರೂ., 124 ಪುರಸಭೆಗಳು ತಲಾ 10 ಕೋಟಿ ರೂ. ಹಾಗೂ 38 ನಗರಸಭೆಗಳು ತಲಾ 30 ಕೋಟಿ ರೂ., 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆ ನಗರಸಭೆಗಳು ತಲಾ 40 ಕೋಟಿ ರೂ. ಪಡೆಯಲಿವೆ. ಈ ಹಣದಲ್ಲಿ 2022-23 ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು ಕೈಗೊಳ್ಳಲಿವೆ.
ಇದಕ್ಕಾಗಿ ಈಗಾಗಲೇ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾವಾರು ಯೋಜನಾ ಸಮಾಲೋಚಕರನ್ನು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆ, ಟೆಂಡರ್ ಪ್ರಕ್ರಿಯೆಯಲ್ಲಿ ನೆರವು, ಕ್ರಿಯಾ ಯೋಜನೆ ತಯಾರಿಕೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಗುಣಮಟ್ಟ ನಿಯಂತ್ರಣಕ್ಕಾಗಿ ನೇಮಕ ಮಾಡಿಕೊಳ್ಳಲು ಆಸಕ್ತ ಯೋಜನಾ ಸಮಾಲೋಚಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ನಿರ್ದೇಶನಾಲಯದ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಮತ್ತಿತ್ತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.