Advertisement
ಸಿಟಿ ಬಸ್ ಸೇವೆ ಸ್ಥಗಿತಮಾ. 22ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಸಂಪುರ್ಣವಾಗಿ ಬಂದ್ ಆಗಿದ್ದು, ಸೋಮವಾರ ನಗರ ಭಾಗಶಃ ಸ್ತಬ್ಧವಾಗಿದೆ. ನಗರದಿಂದ ಅಲೆವೂರು, ಮಣಿಪುರ, ಮಣಿಪಾಲ, ಪರ್ಕಳ, ಆತ್ರಾಡಿ, ಕುಕ್ಕಿಕಟ್ಟೆ, ಕಿನ್ನಿಮೂಲ್ಕಿ, ಗುಂಡಿಬೈಲು ಸೇರಿದಂತೆ ವಿವಿಧ ಕಡೆಗಳಿಗೆ ಸಂಪರ್ಕ ಒದಗಿಸುತ್ತಿರುವ 80 ಸಿಟಿ ಬಸ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.
ಉಡುಪಿಯಿಂದ- ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಉಡುಪಿ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಬಸ್‌ಗಳ ಸೇವೆ ಸಂಪುರ್ಣವಾಗಿ ಸ್ಥಗಿತಗೊಂಡಿದೆ. ಉಡುಪಿಯಿಂದ ಕುಂದಾಪುರ, ಕೊಲ್ಲೂರಿಗೆ ಸಂಚರಿಸುವ 150 ಬಸ್‌ಗಳಲ್ಲಿ ಕೇವಲ 15 ರೂಟ್ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಹೆಚ್ಚಿನ ಬಸ್‌ಗಳು 4.30ಕ್ಕೆ ಸೇವೆಯನ್ನು ಸ್ಥಗಿತಗೊಳಿಸಿದವು. ಉಡುಪಿ ಕಾರ್ಕಳ ಮಾರ್ಗದ 60 ರೂಟ್‌ಗಳಲ್ಲಿ 3 ಬಸ್‌ಗಳನ್ನು ಮಾತ್ರ ಸಂಚರಿಸುತ್ತಿವೆ. ನರ್ಮ್ ಹಾಗೂ ಕೆಸ್ಸಾರ್ಟಿಸಿ ಬಸ್‌ಗಳ ಸಂಚಾರವನ್ನು ಮಾರ್ಚ್ 31ರ ವರೆಗೆ ನಿಷೇಧಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ವಿರಳ
ನಗರದ ಸಿಟಿ, ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ಬಸ್ ನಿಲ್ಲಿಸಿ ಅರ್ಧ ಗಂಟೆಯಾದರೂ ಬಸ್ ತುಂಬುತ್ತಿರಲಿಲ್ಲ. ಬೆರಳೆಣಿಕೆ ಸಂಖ್ಯೆಯ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬಂದವು.
Related Articles
ಸೋಮವಾರ ಬೆಳಗ್ಗೆ 7ರಿಂದ 12 ಗಂಟೆಯ ವರೆಗೆ ಕೆಎಂ ಮಾರ್ಗದ ಎಲ್ಲ ತರಕಾರಿ ಅಂಗಡಿಗಳಲ್ಲಿ ಜನರು ಮುಗಿ ಬಿದ್ದು ತರಕಾರಿ ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದವು. ಬಿಗ್‌ಬಜಾರ್, ಸಿಟಿ ಸೆಂಟರ್‌ನಲ್ಲಿ ಜನರು ಕ್ಯೂ ನಿಂತು ದಿನ ಬಳಕೆ ವಸ್ತುಗಳನ್ನು ಖರೀದಿಸುತ್ತಿದ್ದರು.
Advertisement
ಅಂಗಡಿಗಳು ಬಂದ್ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗದ ಅಂಗಡಿಗಳನ್ನು ಸೋಮವಾರ ಬಂದ್ ಮಾಡಲಾಗಿತ್ತು. ನಗರದಲ್ಲಿ ಸಹ ಕೆಲವು ಹೊಟೇಲ್ ಸೇರಿದಂತೆ ಚಿನ್ನಾಭರಣ ಅಂಗಡಿಗಳು, ಸೆಲೂನ್‌ಗಳನ್ನು ಬಂದ್ ಮಾಡಲಾಗಿತ್ತು. ಸಂತೆಕಟ್ಟೆಯಲ್ಲಿ 200ಕ್ಕಿಂತ ಅಧಿಕ ಮಂದಿ ಕೆಲಸ ಮಾಡುವ ಕಂಪೆನಿಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದವು. ನೂರಾರು ಜನರು ಒಂದೆಡೆ ಸೇರುವ ಗೇರು ಬೀಜದ ಕಾರ್ಖಾನೆಗಳು ಗ್ರಾಮಾಂತರದಲ್ಲಿ ಕಾರ್ಯಾ ಚರಿಸುತ್ತಿದ್ದವು ಎಂದು ತಿಳಿದುಬಂದಿದೆ. ನಗರದ ವೈನ್‌ಶಾಪ್‌ಗ್ಳಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಸ್ಥಳಕ್ಕೆ ಆಗಮಿಸಿದ ಅಬಕಾರಿ ಅಧಿಕಾರಿಗಳು ಗ್ರಾಹಕರಿಗೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ವೈನ್‌ಶಾಪ್ ಮಾಲಕರಿಗೆ ಸೂಚನೆ ನೀಡಿದರು. ಜನ ಜಾಗೃತಿ
ನಗರ ಪ್ರದೇಶದಲ್ಲಿ ಅನಗತ್ಯವಾಗಿ ಓಡಾಟ ನಡೆಸದಂತೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಿದರು. ಅಧಿಕ ಜನಸಂದಣಿ ಸೇರುವ ಅಂಗಡಿಗಳಿಗೆ ತೆರಳಿ ಬಂದ್ ಮಾಡಿಸುತ್ತಿದ್ದರು. ಅದರಂತೆ 4.30ಗೆ ಅಂಗಡಿಗಳು ಸೇವೆಯನ್ನು ಸ್ಥಗಿತಗೊಳಿಸಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ವಾಹನಗಳ ಮೂಲಕ ಕೊರೊನಾ ವೈರಸ್ ಸೊಂಕು ಹರಡದಂತೆ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸಂದೇಶವನ್ನು ಧ್ವನಿವರ್ಧಕ ಹೇಳಲಾಗುತ್ತಿತ್ತು. ಇಂದು ಸಿಟಿ ಬಸ್ ಸೇವೆ ಪ್ರಾರಂಭ
ಉಡುಪಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಿಲುಗಡೆಯಾದ ಸಿಟಿ ಹಾಗೂ ಸರ್ವಿಸ್ ಬಸ್ ಮಂಗಳವಾರದಿಂದ ಕಾರ್ಯಾಚರಿಸಲಿದೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು. ದ.ಕ. ಜಿಲ್ಲೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರು ಮಾರ್ಗವಾಗಿ ಯಾವುದೇ ಬಸ್‌ಗಳು ಸಂಚರಿಸುವುದಿಲ್ಲ. ಅದರೆ ಕೆಲ ಸರ್ವೀಸ್ ಹಾಗೂ ಸಿಟಿ ಬಸ್‌ಗಳ ಸೇವೆ ಪ್ರಾರಂಭಿಸಲಿದೆ. ಜಿಲ್ಲೆಯ ಲಾಕ್‌ಡೌನ್ ಆಗದ ಹಿನ್ನೆಲೆಯಲ್ಲಿ ಬಸ್‌ಗಳು ಸಂಚಾರವಿರಲಿದೆ ಎಂದರು.
ಮಾ. 31ರ ವರೆಗೆ ಕೆಎಸ್ಸಾರ್ಟಿಸಿ ಹಾಗೂ ನರ್ಮ್ ಬಸ್ ಸಂಚಾರವಿರುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. ಕ್ಲಿನಿಕ್, ಆಸ್ಪತ್ರೆಗಳಲ್ಲಿ ಒಪಿಡಿ ಬಂದ್
ಉಡುಪಿ: ಆಲೋಪತಿ ವೈದ್ಯರು ಮಾ. 23ರಿಂದ 31ರ ವರೆಗೆ ಹೊರರೋಗಿ ವಿಭಾಗವನ್ನು (ಒಪಿಡಿ) ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಸ್ಥಗಿತಗೊಳಿಸಿದ್ದಾರೆ. ಆದರೆ ತುರ್ತು ಚಿಕಿತ್ಸೆ ಎಂದಿನಂತೆ ಮುಂದುವರಿಯುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ ಇದು ಸಾರ್ವಜನಿಕರು ಮತ್ತು ವೈದ್ಯಕೀಯ ಸಿಬಂದಿಗೆ ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಂಡ ಕ್ರಮವಾಗಿದೆ ಎಂದು ಭಾರತೀಯ ವೈದ್ಯ ಸಂಘದ ಉಡುಪಿ ಕರಾವಳಿಯ ಅಧ್ಯಕ್ಷ ಡಾ| ಉಮೇಶ ಪ್ರಭು ತಿಳಿಸಿದ್ದಾರೆ. ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ
ಉಡುಪಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳನ್ನು (ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸೇರಿದಂತೆ) ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಮಾ. 31ರ ವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ಖರ್ಚೇ ಅಧಿಕ
ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ನಿತ್ಯ 1,000 ರೂ.ಗಿಂತ ಅಧಿಕ ಖರ್ಚು ಬರುತ್ತದೆ. ಕೊರೊನಾ ಭೀತಿಯಿಂದ ಜನರು ಬಸ್ ಪ್ರಯಾಣ ನಿಲ್ಲಿಸಿದ್ದಾರೆ. ರೂಟ್ ಬಸ್‌ಗಳ ಸಂಖ್ಯೆಗಳು 15ಕ್ಕೆ ಇಳಿಕೆಯಾಗಿದೆ.
–ಕೃಷ್ಣ ಪ್ರಸಾದ್, ಬಸ್ ಏಜೆಂಟ್. ಶ್ಲಾಘನೀಯ
ಸಿಟಿ ಬಸ್ ಸೇವೆ ಸ್ಥಗಿತಗೊಳಿಸಿ ರುವ ಕುರಿತು ಮಾಹಿತಿ ಇರಲಿಲ್ಲ, ಹಾಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದೇನೆ. ಆದರೆ ಕೊರೊನಾ ವೈರಸ್ ತಡಗಟ್ಟುವ ನಿಟ್ಟಿನಲ್ಲಿ ಸಿಟಿ ಬಸ್ ಮಾಲಕರು ಹಾಗೂ ಚಾಲಕರು ತೆಗೆದುಕೊಂಡ ಕ್ರಮ ಶ್ಲಾಘನೀಯ. ಇಂತಹ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ.
-ಚಿತ್ರಾ ಶೆಣೈ, ಉಡುಪಿ