Advertisement

ಉಡುಪಿ: ನಗರ ಅನಿಲ ಸಂಪರ್ಕಕ್ಕೆ ಶೋಭಾ ಶಂಕುಸ್ಥಾಪನೆ

09:39 AM Nov 23, 2018 | Team Udayavani |

ಉಡುಪಿ: ದೇಶಾದ್ಯಂತ ಜಾರಿಗೊಳ್ಳಲಿರುವ ನಗರ ಅನಿಲ ವಿತರಣೆ ಯೋಜನೆಗೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಂತೆ, ಉಡುಪಿ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿಯೂ ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ಸ್ಥಳೀಯವಾಗಿ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಯೋಜನೆ ಕಾರ್ಯಗತಗೊಳ್ಳುತ್ತಿರುವ ರಾಜ್ಯದ 13 ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ದೇಶದ 11 ಕೋಟಿ ಕುಟುಂಬಗಳಿಗೆ ಅನಿಲ ಸಿಲಿಂಡರ್‌ ಸಂಪರ್ಕವಿಲ್ಲ ಎಂದು ಗೊತ್ತಾದಾಗ ಪರಿಹಾರವಾಗಿ ಉಚಿತ ಅನಿಲ ಸಂಪರ್ಕ ಯೋಜನೆಗೆ ಪ್ರಧಾನಿ ಮುಂದಾದರು. ಮುಂದಿನ ಹೆಜ್ಜೆಯಾಗಿ ಪೈಪ್‌ಲೈನ್‌ ಮೂಲಕ ಮನೆಮನೆಗೆ ಅನಿಲ ಪೂರೈಕೆ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಜಿಲ್ಲೆಯ ಐದು ನಗರಗಳಿಗೂ ಲಾಭ ದೊರಕಲಿದೆ. ಏಳೆಂಟು ವರ್ಷಗಳಲ್ಲಿ ಜಾರಿಯಾಗಲಿದೆ ಎಂದು ಸಂಸದರು ಹೇಳಿದರು. 

ಕೇಂದ್ರೀಯ ವಿದ್ಯಾಲಯವು ತಾತ್ಕಾಲಿಕವಾಗಿ ಅಲೆವೂರು ಪ್ರಗತಿ ನಗರದಲ್ಲಿರುವ ಡಯಟ್‌ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕೊಂಕಣ ರೈಲ್ವೇಯಿಂದ ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ, ಉಡುಪಿಯಲ್ಲಿ ಸಂತ್ರಸ್ತ ಮಹಿಳೆಯರಿಗಾಗಿ ಸಖೀ ಕೇಂದ್ರ, ಸ್ವರ್ಣ ಕುಶಲಕರ್ಮಿಗಳಿಗೆ ಪ್ರಮಾಣಪತ್ರ ನೀಡುವ ಕೇಂದ್ರ, ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್‌ ಕಚೇರಿ ಆರಂಭಗೊಂಡಿದೆ. ರಾ.ಹೆ. ಮೇಲ್ದರ್ಜೆಗೇರುತ್ತಿದೆ ಎಂದರು. 

ಪ್ರಧಾನಿ ಮೋದಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಐದು ಕೋಟಿ ಕುಟುಂಬಗಳಿಗೆ ಇಂಧನ ಸಿಲಿಂಡರ್‌ ಪೂರೈಕೆಯಾಗಿದೆ. 70 ವರ್ಷಗಳಲ್ಲಿ 18,000 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ದೊರಕುವಂತೆ ಯೋಜನೆ ರೂಪಿಸಿದ್ದಾರೆ. ಮನೆಮನೆಗೆ ಪರಿಸರಸ್ನೇಹಿ ಅನಿಲ ಪೂರೈಕೆ ಇನ್ನೊಂದು ಮಹತ್ವದ ಯೋಜನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಶಾಸಕರಾದ ಲಾಲಾಜಿ ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ, ವಿಧಾನಸಭೆಯ ಮಾಜಿ ಉಪ ಸ್ಪೀಕರ್‌ ಯೋಗೀಶ ಭಟ್‌, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಸುಮಿತ್‌ ಶೆಟ್ಟಿ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಸೋಮಶೇಖರ ಭಟ್‌, ಗಣ್ಯರಾದ ಮಟ್ಟಾರು ರತ್ನಾಕರ ಹೆಗ್ಡೆ, ಗುರ್ಮೆ ಸುರೇಶ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರೇಶ್ಮಾ ಉದಯಕುಮಾರ ಶೆಟ್ಟಿ, ಉದಯಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಅದಾನಿ ಗ್ಯಾಸ್‌ ಲಿ. ಸಹ ಅಧ್ಯಕ್ಷ ಕಿಶೋರ್‌ ಆಳ್ವ ಸ್ವಾಗತಿಸಿ, ರಾಜೇಂದ್ರ ಭಟ್‌ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. 

Advertisement

ವರ್ಷದಲ್ಲಿ  ಉಡುಪಿಗೆ ಅನಿಲ ವಿತರಣೆ
ಒಟ್ಟು ಯೋಜನೆಗೆ ಏಳೆಂಟು ವರ್ಷ ಅಗತ್ಯವಾದರೂ ಒಂದು ವರ್ಷದಲ್ಲಿ ಉಡುಪಿಗೆ ಪಿಎನ್‌ಜಿ ವಿತರಣೆ ಕಾರ್ಯ ನಡೆಯಲಿದೆ ಎಂದು ಅದಾನಿ ಗ್ರೂಪ್‌ನವರು ಹೇಳಿದ್ದಾರೆ. ಮುಖ್ಯವಾಗಿ ರಿಕ್ಷಾ ಚಾಲಕರಿಗೆ ಅನುಕೂಲವಾಗಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್‌ ತಿಳಿಸಿದರು. 

1.1 ಲಕ್ಷ ಪಿಎನ್‌ಜಿ, 11 ಸಿಎನ್‌ಜಿ ಘಟಕಗಳು, 569 ಕಿ.ಮೀ. ಪೈಪ್‌ಲೈನ್‌ 
ಜಿಲ್ಲೆಯಲ್ಲಿ ಪಿಎನ್‌ಜಿ ಮತ್ತು ಸಿಎನ್‌ಜಿ ಜಾರಿಗೊಳಿಸಲು ಅದಾನಿ ಗ್ಯಾಸ್‌ ಲಿ. ಸಂಸ್ಥೆಗೆ ಹಂಚಿಕೆಯಾಗಿದೆ. ಜಿಲ್ಲೆಯಲ್ಲಿ 1.1 ಲಕ್ಷ ಪಿಎನ್‌ಜಿ, 11 ಸಿಎನ್‌ಜಿ ಘಟಕಗಳು, 569 ಕಿ.ಮೀ. ಪೈಪ್‌ಲೈನ್‌ ಕಾರ್ಯಗತಗೊಳ್ಳಲಿದೆ. ಮಹಾರಾಷ್ಟ್ರದ ರತ್ನಗಿರಿಯ ಜಯಗಢದಿಂದ ಮಂಗಳೂರು ವರೆಗೆ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ಉಡುಪಿಯಲ್ಲಿ ಸ್ವೀಕೃತಿ (ರಿಸೀವಿಂಗ್‌) ಟರ್ಮಿನಲ್‌ ಸ್ಥಾಪಿಸಲಾಗುವುದು. ಇಲ್ಲಿಂದ ಅದಾನಿ ಗ್ಯಾಸ್‌ ಲಿ. ಅನಿಲವನ್ನು ಪೈಪ್‌ ಮೂಲಕ ವಿತರಿಸಲಿದೆ.  

ದೇಶದ ಅನೇಕ ಮಹಿಳೆಯರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದು, ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಎಲ್‌ಪಿಜಿಗೆ ಹೋಲಿಸಿದರೆ ಪಿಎನ್‌ಜಿ ದರ ಕಡಿಮೆ, ಪಿಎನ್‌ಜಿ ಸಂಪರ್ಕದಿಂದ ಮನೆಗೆ ಬೇಕಾಗುವ ಅನಿಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು, ಸತತವಾಗಿ ವಿತರಣೆ ಮಾಡಬಹುದಾಗಿದೆ. ಸಿಎನ್‌ಜಿ ಬಳಕೆಯಿಂದ ಪರಿಸರದ ಮಾಲಿನ್ಯಕ್ಕೂ ಕಡಿವಾಣ ಹಾಕಬಹುದಾಗಿದೆ. ಸರಕಾರದ ಪ್ರಕಾರ ಸಿಎನ್‌ಜಿ ದರವು ಪೆಟ್ರೋಲ್‌ ದರಕ್ಕಿಂತ ಶೇ.60ರಷ್ಟು ಕಡಿಮೆ. ಅದಾನಿ ಗ್ಯಾಸ್‌ ಲಿಮಿಟೆಡ್‌ (ಎಜಿಎಲ್‌) ಕೈಗಾರಿಕೆ, ವಾಣಿಜ್ಯ, ಗೃಹಬಳಕೆ ಬೇಕಾಗುವ ಅನಿಲವನ್ನು ಪೂರೈಸಲು ಪಿಎನ್‌ಜಿ ಮತ್ತು ವಾಹನಗಳಿಗೆ ಬೇಕಾಗುವ ಅನಿಲವನ್ನು ಪೂರೈಸಲು ಸಿಎನ್‌ಜಿ ಸಿಟಿ ಗ್ಯಾಸ್‌ ಡಿಸ್ಟ್ರಿಬ್ಯೂಷನ್‌ ನೆಟ್‌ವರ್ಕ್‌ನ್ನು ಅಭಿವೃದ್ಧಿಪಡಿಸುತ್ತಿದೆ. ಎಜಿಎಲ್‌ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ ಮತ್ತು ವಡೋದರಾ, ಹರಿಯಾಣದ ಫ‌ರೀದಾಬಾದ್‌ ಮತ್ತು ಉತ್ತರ ಪ್ರದೇಶದ ಖುರ್ಜಾದಲ್ಲಿ ಸುಮಾರು 3.50 ಲಕ್ಷ ಮನೆಗಳಿಗೆ ಅನಿಲ ವಿತರಿಸುತ್ತಿದೆ. ಅದಾನಿ ಸಂಸ್ಥೆಯು ಸುಮಾರು 8,000 ಕೋ.ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ಅನೇಕ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ.
 ಕಿಶೋರ್‌ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು, ಅದಾನಿ ಸಮೂಹ

Advertisement

Udayavani is now on Telegram. Click here to join our channel and stay updated with the latest news.

Next