Advertisement

ಮನೆ ಮನೆಗೆ ಸಿಟಿ ಗ್ಯಾಸ್‌; ವರ್ಷದೊಳಗೆ ಪೂರೈಕೆ ಸಾಧ್ಯತೆ

06:52 PM Dec 08, 2021 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿಯಾಗುತ್ತಿರುವ ನಗರದಲ್ಲಿ ಮನೆಮನೆಗೆ ಅಡುಗೆ ಅನಿಲವನ್ನು ಕೊಳವೆಯ ಮೂಲಕ ವಿತರಿಸುವ ಯೋಜನೆಯೂ ಭರದಿಂದ ಜಾರಿಗೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಅನಿಲ ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

Advertisement

ಪ್ರಾಯೋಗಿಕವಾಗಿ 2 ತಿಂಗಳೊಳಗೆ ಸುರತ್ಕಲ್‌ ಭಾಗದ ಆಯ್ದ ಜನವಸತಿ ಪ್ರದೇಶಗಳ 200 ರಿಂದ 500 ವಸತಿ, ಉದ್ಯಮಗಳಿಗೆ ಅನಿಲ ಪೂರೈಕೆಗೆ ಸಿದ್ಧತೆ ನಡೆದಿದೆ. ಎಂಸಿಎಫ್‌, ಎಂಆರ್‌ಪಿಎಲ್‌ಗೆ ಈಗಾಗಲೇ ಗೈಲ್‌ನಿಂದ ಗ್ಯಾಸ್‌ ವಿತರಿಸುತ್ತಿದ್ದು, ಈ ಮೂಲಕವೇ ಮನೆ, ಉದ್ಯಮ ಗಳಿಗೂ ಅನಿಲ ಪೂರೈಸಲು ಉದ್ದೇಶಿಸಲಾಗಿದೆ. ಡಿಸೆಂಬರ್‌ ಒಳಗೆ ಸಿಎನ್‌ಜಿ ಸ್ಟೇಶನ್‌ ತೆರೆಯಲು ಸಿದ್ಧತೆ ನಡೆದಿದೆ.

ಆರಂಭಿಕವಾಗಿ ನಗರದ 148 ಕಿ.ಮೀ. ವ್ಯಾಪ್ತಿಯಲ್ಲಿ ಗ್ಯಾಸ್‌ ಪೂರೈಕೆಯ ಉದ್ದೇಶವಿದೆ. ಸ್ಮಾರ್ಟ್‌ಸಿಟಿ ಕಾಮ ಗಾರಿ ನಡೆಯುವ ಸ್ಥಳದಲ್ಲಿ ಆದ್ಯತೆಯ ಮೇರೆಗೆ ಕಾಮ ಗಾರಿ ಕೈಗೊಳ್ಳಲಾಗಿದೆ. ಜತೆಗೆ ದೇರೆಬೈಲ್‌ ದಕ್ಷಿಣ, ಪಶ್ಚಿಮ, ನೈಋತ್ಯ, ಬೋಳೂರು, ಮಣ್ಣಗುಡ್ಡ, ಕಂಬÛ, ಕೊಡಿಯಾಲಬೈಲ್‌, ಬಿಜೈ, ಕದ್ರಿ ದಕ್ಷಿಣ, ಬೆಂದೂರು, ಕೋರ್ಟ್‌, ಡೊಂಗರಕೇರಿ, ಮರೋಳಿ ವಾರ್ಡ್‌ಗಳ ಕೆಲವು ಭಾಗದಲ್ಲಿ ಮನೆಗಳನ್ನು ಸಂಪರ್ಕಿಸಲು ಒಳ ಪೈಪ್‌ಲೈನ್‌ ಹಾಕಲಾಗುತ್ತಿದೆ. ಇಲ್ಲಿಯವರೆಗೆ 11 ಸಾವಿರಕ್ಕೂ ಅಧಿಕ ಮನೆಯವರು ಗ್ಯಾಸ್‌ ಸಂಪರ್ಕಕ್ಕೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಬಹುತೇಕರಿಗೆ ಪೈಪ್‌/ಮೀಟರ್‌ ಅಳವಡಿಸಲಾಗಿದೆ ಎಂದು ಗೈಲ್‌ ಸಂಸ್ಥೆ ಮೂಲಗಳು ತಿಳಿಸಿವೆ.

2030; ನಗರದೊಳಗೆ ಪೂರ್ಣ :
ಕೊಚ್ಚಿನ್‌ನಿಂದ ಮಂಗಳೂರಿನವರೆಗಿನ 430 ಕಿ.ಮೀ. ಅನಿಲ ಪೂರೈಕೆ ಕೊಳವೆ ಅಳವಡಿಸಲಾಗಿದೆ. 2030 ರೊಳಗೆ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ ಪೂರ್ಣಗೊಳಿಸಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಿರ್ಧರಿಸಿದೆ.

ನಳ್ಳಿ ಅನಿಲ: ಲಾಭವೇನು?
ಪಿಎನ್‌ಜಿ (ಗೃಹ ಬಳಕೆ)ಯಲ್ಲಿ ಪರಿಸರಕ್ಕೆ ಇಂಗಾಲ ಬಿಡುಗಡೆ ಪ್ರಮಾಣ ಎಲ್‌ಪಿಜಿಗಿಂತ ಶೇ. 50ರಷ್ಟು ಕಡಿಮೆ. ಸೋರಿಕೆ ಆದರೂ ವಾತಾವರಣದಲ್ಲಿ ಆವಿಯಾಗುತ್ತದೆ. ಜತೆಗೆ ಗ್ರಾಹಕರು ಬಳಸುವ ಅನಿಲಕ್ಕಷ್ಟೇ ಹಣ ಪಾವತಿಸಬೇಕು. ಸಿಲಿಂಡರ್‌ ಮರು ಪೂರಣ, ಬುಕಿಂಗ್‌ ಇತ್ಯಾದಿ ಅಗತ್ಯವಿಲ್ಲ. ಸಿಲಿಂಡರ್‌ನಷ್ಟೇ ಪ್ರಮಾಣದ ಅನಿಲ ಶೇ. 20 ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ. ಎಲ್‌ಪಿಜಿಗೆ ಬಳಸುವ ಸ್ಟೌ ಪಿಎನ್‌ಜಿಗೂ ಬಳಸಬಹುದು. ಆದರೆ ಬರ್ನರ್‌ ಬದಲಿಸಬೇಕು. ಅನಿಲ ಸೋರಿಕೆಗೆ ಆಸ್ಪದ ಇಲ್ಲದಂತೆ ಕೊಳವೆ ಸಂಪರ್ಕ ನಿರ್ಮಿ ಸಲಾಗುತ್ತದೆ ಎನ್ನುತ್ತವೆ ಗೈಲ್‌ ಸಂಸ್ಥೆಯ ಮೂಲಗಳು.

Advertisement

ನೆಲದಡಿ ಕಾಮಗಾರಿ!
ಕೆಲವೆಡೆ ರಸ್ತೆಯ ಒಂದು ಬದಿಯ ಕೆಲವು ಮೀಟರ್‌ಗಳ ಅಂತರದಲ್ಲಿ ಕಾಂಕ್ರೀಟ್‌ ರಸ್ತೆ ಕತ್ತರಿಸಿ ಗುಂಡಿ ನಿರ್ಮಿಸಿ, ಅಡ್ಡಲಾಗಿ ಪೈಪ್‌ ಅಳವಡಿಸಲಾಗುತ್ತಿದೆ. ಒಂದು ಗುಂಡಿ ಮಾಡಿ ನೆಲದ ಅಡಿಯಿಂದಲೇ ನಿರ್ದಿಷ್ಟ ದೂರದವರೆಗೆ ಡ್ರಿಲ್‌ ಮಾಡಿ ಪೈಪ್‌ ಅನ್ನು ದೂಡಲಾಗುತ್ತಿದ್ದು, ಎಚ್‌ಡಿಡಿ (ಹೊರಿಝಾಂಟಲ್‌ ಡೈರೆಕ್ಷನ್‌ ಡ್ರಿಲ್ಲಿಂಗ್‌) ಯಂತ್ರ ಬಳಸಲಾಗುತ್ತಿದೆ. ಎಂ.ಜಿ. ರಸ್ತೆ, ಜ್ಯೋತಿ, ಬಲ್ಮಠ, ಕಂಕನಾಡಿ ಸಹಿತ ವಿವಿಧೆಡೆ ಕೆಲಸ ನಡೆದಿದೆ. ಜನವಸತಿ ಪ್ರದೇಶದಲ್ಲಿ ರಸ್ತೆಯನ್ನು ಉದ್ದಕ್ಕೆ ಅಗೆದು ಕಾಮಗಾರಿ ನಡೆಸುತ್ತಿದ್ದು, ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಈ ಮಧ್ಯೆ ಕಂಕನಾಡಿ ಸಹಿತ ಕೆಲವು ಭಾಗದಲ್ಲಿ ಕಾಮಗಾರಿ ಮುಗಿಸಿ ಗುಂಡಿ ಮುಚ್ಚುತ್ತಿಲ್ಲ. ಇನ್ನು ಕೆಲವೆಡೆ ಮನೆಗೆ ಹೋಗುವ ದಾರಿಯ ಭಾಗದಲ್ಲೇ ಹೊಂಡ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ.

ಸವಾಲಿನ ಕೆಲಸ
ಸಿಟಿ ಗ್ಯಾಸ್‌ ವಿತರಣೆ ಸಂಬಂಧ ಪ್ರಾರಂಭಿಕವಾಗಿ ಪೈಪ್‌ಲೈನ್‌ ಹಾಕುವ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಆದರೆ ನಗರದಲ್ಲಿ ನೀರು, ಚರಂಡಿ, ಒಎಫ್ಸಿ ಸೇರಿದಂತೆ ಇತರ ಪೈಪ್‌ಲೈನ್‌ ಇರುವ ಕಾರಣ ಅನಿಲ ಕೊಳವೆ ಅಳವಡಿಕೆ ಸವಾಲಿನ ಕೆಲಸ. ಸದ್ಯ 11 ಸಾವಿರ ಸಂಪರ್ಕ ಮಾಡಲು ಅರ್ಜಿ ಬಂದಿವೆ. ಇದರಲ್ಲಿ ಬಹುತೇಕ ಮನೆಗೆ ಮೀಟರ್‌, ಸಣ್ಣ ಪೈಪ್‌ ಅಳವಡಿಕೆ ನಡೆಸಲಾಗಿದೆ.
– ಯು.ಸಿ. ಸಿಂಗ್‌, ಮಹಾಪ್ರಬಂಧಕರು, ಗೈಲ್‌ ಗ್ಯಾಸ್‌-ಮಂಗಳೂರು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next