ಬೆಂಗಳೂರು: ನೆರೆ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರು ನಗರ ಪ್ರದಕ್ಷಿಣೆ ನಿಲ್ಲಿಸಲಾಗಿತ್ತು. ಮುಂದಿನ ವಾರದಿಂದ ನಗರ ಪ್ರದಕ್ಷಿಣೆಯನ್ನು ಮತ್ತೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನಲ್ಲಿ ನಿರ್ಮಿಸಿರುವ ಪ್ರಕೃತಿ ವನ ಹಾಗೂ ಪ್ರಕೃತಿ ದೇವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,ದೇಶದಲ್ಲಿಯೇ ಪ್ರಥಮ ಬಾರಿಗೆ ವಿನೂತನ ಪರಿಕಲ್ಪನೆಯಲ್ಲಿ ಪ್ರಕೃತಿ ವನವನ್ನು ಯಡಿಯೂರು ವಾರ್ಡ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಾನವನ ಮಿತಿಮೀರಿದ ದೌರ್ಜನ್ಯದಿಂದ ಪ್ರಕೃತಿಗೆ ಹಾನಿಯಾಗುತ್ತಿದ್ದು, ಇದನ್ನು ತಪ್ಪಿಸಲು ಅರಣ್ಯ ಹಾಗೂ ಉದ್ಯಾನಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಪರಿಸರದ ಮೇಲೆ ಆಗುವ ಹಾನಿ ತಪ್ಪಲಿದ್ದು, ಪ್ರಾಕೃತಿಕ ವಿಕೋಪಗಳು ಕೂಡಾ ಕಡಿಮೆಯಾಗಲಿವೆ ಎಂದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ , ನಮ್ಮದು ಸಿದ್ದರಾಮಯ್ಯ ಅವರು ನೀಡಿದಂತಹ ನಿದ್ದೆಗೆ ಜಾರಿರುವ ಸರ್ಕಾರವಲ್ಲ. ನಗರ ಪ್ರದಕ್ಷಿಣೆ ಸಂಬಂಧ ಈಗಾಗಲೇ ಯೋಜನೆ ರೂಪಿಸಲಾಗುತ್ತಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.
ಮೇಯರ್ ಎಂ. ಗೌತಮ್ ಕುಮಾರ್ ಮಾತನಾಡಿ,ಯಡಿಯೂರು ವಾರ್ಡ್ ಮಾದರಿಯ ಉದ್ಯಾನವನ್ನು ನಗರದ ವಿವಿಧ ವಾರ್ಡ್‌ಗಳಲ್ಲೂ ನಿರ್ಮಿಸಲಾಗುವುದು ಎಂದು ಹೇಳಿದರು.