ಚಾಮರಾಜನಗರ: ನಗರದಲ್ಲಿ ಕೋವಿಡ್‌ಗೂ ಮುಂಚಿನವರೆಗೂ ಇದ್ದ ನಗರ ಸಾರಿಗೆ ಬಸ್ ಸಂಚಾರ ನಂತರ ಸ್ಥಗಿತಗೊಂಡಿದ್ದು, ಪುನಾರಂಭಗೊಳ್ಳದ ಕಾರಣ ನಗರದ ಸುತ್ತಮುತ್ತ ಸಂಚರಿಸುವ ಜನರಿಗೆ ತೀವ್ರ ತೊಂದರೆಯಾಗಿದೆ.
ಜಿಲ್ಲಾ ಕೇಂದ್ರವಾದ ನಗರದ ವ್ಯಾಪ್ತಿ ದೊಡ್ಡದಾಗುತ್ತಿದ್ದು, ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಇದನ್ನು ಮನಗಂಡು ಕೆಲವು ವರ್ಷಗಳ ಹಿಂದೆ ಕೆಎಸ್‌ಆರ್‌ಟಿಸಿಯಿಂದ ನಗರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ನ್ಯಾಯಾಲಯ ರಸ್ತೆ ಮೂಲಕ ಕರಿನಂಜನಪುರಕ್ಕೆ ನಿತ್ಯ ಹತ್ತಾರು ಟ್ರಿಪ್ ಗಳ ಸಿಟಿ ಬಸ್ ಸೇವೆ ಆರಂಭಿಸಲಾಗಿತ್ತು. ಮಧ್ಯಮ, ಬಡ ವರ್ಗದ ಜನರಿಗೆ ಇದರಿಂದ ಬಹಳ ಅನುಕೂಲವಾಗಿತ್ತು.
ನ್ಯಾಯಾಲಯ ರಸ್ತೆ ಅಗಲೀಕರಣ, ಕೋವಿಡ್ ಇತ್ಯಾದಿ ಕಾರಣಗಳಿಂದ ಈ ಸಿಟಿ ಬಸ್ ಸಂಚಾರವನ್ನು ನಿಲ್ಲಿಸಲಾಯಿತು. ಈಗ ನ್ಯಾಯಾಲಯ ರಸ್ತೆ ಸುಗಮವಾಗಿದ್ದರೂ ಸಿಟಿ ಬಸ್ ಸೇವೆಯನ್ನು ಪುನಾರಂಭಿಸಿಲ್ಲ. ಜಿಲ್ಲಾ ಕೇಂದ್ರ ಚಾಮರಾಜನಗರ ವರ್ಷ ದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು, ಬಡಾವಣೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 90 ಸಾವಿರದಿಂದ ಒಂದು ಲಕ್ಷ ಜನಸಂಖ್ಯೆ ಇದೆ. ನಗರ ಸುತ್ತಮುತ್ತ ಮೂಡ್ಲುಪುರ, ಉತ್ತುವಳ್ಳಿ, ರಾಮ ಸಮುದ್ರ, ಕೋಡಿಮೋಳೆ, ಕರಿನಂಜನಪುರ, ಗಾಳೀಪುರ ಗ್ರಾಮಗಳು ಸಹ ನಗರಕ್ಕೆ ಹೊಂದಿಕೊಂಡಂತೆಯೇ ಇವೆ. ಹಾಗಾಗಿ ನಗರ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದರೆ ನಾಗರಿಕರಿಗೆ ಬಹಳ ಅನುಕೂಲವಾಗುತ್ತದೆ.
ನಗರ ಬೆಳೆದಂತೆ ವೈದ್ಯಕೀಯ ಕಾಲೇಜು, ಆಸ್ಪತ್ರೆ, ವೈದ್ಯಕೀಯ ಕಾಲೇಜು ಇರುವ ಯಡಬೆಟ್ಟ, ಕೈಗಾರಿಕಾ ಪ್ರದೇಶ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಚಾ.ನಗರ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಈ ಎಲ್ಲ ಕೇಂದ್ರಗಳು ನಗರದ ಹೊರ ವಲಯದಲ್ಲಿವೆ. ಹೀಗಾಗಿ ಈ ಪ್ರದೇಶಗಳಿಗೆ ತೆರಳಬೇಕಾದರೆ ಖಾಸಗಿ ವಾಹನಗಳು ಅಥವಾ ಆಟೋರಿಕ್ಷಾಗಳನ್ನು ಅವಲಂಬಿಸಬೇಕಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ನಗರ ಬಸ್ ವ್ಯವಸ್ಥೆ ಇದ್ದರೆ ಅನುಕೂಲವಾಗಲಿದೆ. ಸಿಮ್ಸ್ ಆಸ್ಪತ್ರೆ ಹಾಗೂ ವಿವಿ, ಎಂಜಿನಿಯರಿಂಗ್ ಕಾಲೇಜು ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದೆ. ಆದರೆ, ಅದು ಬಡಾವಣೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದಲೂ ಹೊರಡುವಂಥ ವ್ಯವಸ್ಥೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇದರಿಂದ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಅವರ ಕಡೆಯವರಿಗೆ ಸಾಕಷ್ಟು ಅನುಕೂಲವಾಗಲಿದೆ.
ಹಿಂದೆ ಇಡೀ ದಿನ ಟ್ರಿಪ್ ಹೊಡೆಯುತ್ತಿದ್ದ ಬಸ್: ಈ ಹಿಂದೆ ಬಸ್ ನಿಲ್ದಾಣ, ಜೋಡಿರಸ್ತೆ , ಜೆಎಸ್‌ಎಸ್ ಆಸ್ಪತ್ರೆ ರಸ್ತೆ ಮಾರ್ಗವಾಗಿ ಕೆಎಚ್‌ಬಿ ಕಾಲೋನಿ, ಕರಿನಂಜನಪುರ, ರೈಲ್ವೆ ನಿಲ್ದಾಣಕ್ಕೆ ಒಂದು ಸಿಟಿ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಡೀ ದಿನ ಈ ಬಸ್ ಟ್ರಿಪ್ ಹೊಡೆಯುತ್ತಿತ್ತು. ಹೌಸಿಂಗ್ ಬೋರ್ಡ್, ಪಿಡಬ್ಲೂಡಿ ಕಾಲೋನಿ, ನ್ಯಾಯಾಲಯ ರಸ್ತೆ, ಕರಿನಂಜನಪುರಕ್ಕೆ ಹೋಗಬೇಕಾದ ಜನರು ಈ ಬಸ್‌ಗಾಗಿ ಕಾದು ಸಿಟಿಗೆ ಮತ್ತು ವಾಪಸ್ ಬಡಾವಣೆಗೆ ಮರಳುತ್ತಿದ್ದರು. ಆದರೆ, ಕೋವಿಡ್ ಬಳಿಕ ಕರಿನಂಜನಪುರ ಮಾರ್ಗಕ್ಕೆ ಎರಡು ಟ್ರಿಪ್ ಮಾತ್ರ ಬಸ್ ಓಡಾಡುತ್ತಿದೆ. ಬೆಳಗ್ಗೆ ಮತ್ತು ಸಂಜೆ ಹೊರತಾಗಿ ಇನ್ನುಳಿದ ವೇಳೆ ಸಂಚಾರ ಇಲ್ಲವಾಗಿದೆ. ಅದು ಸಹ ಈ ಹಿಂದಿನ ಮಾರ್ಗದಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಅನನುಕೂಲವೂ ಆಗಿದೆ. ಆದ್ದರಿಂದ ಈ ಹಿಂದಿನ ಮಾರ್ಗದಲ್ಲಿ ಈ ಹಿಂದಿನಂತೆಯೇ ಹೆಚ್ಚು ಬಾರಿ ಬಸ್ ಓಡಾಡುವಂತಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಚಾಮರಾಜನಗರ ಪಟ್ಟಣದಲ್ಲಿ ಕೆಎಸ್ ಆರ್‌ಟಿಸಿಯಿಂದ ಮತ್ತೆ ನಗರ ಸಾರಿಗೆ ಬಸ್ ಆರಂಭಿಸಲು ಅಭಿಪ್ರಾಯ ಸಂಗ್ರಹಿಸಲಾಗುವುದು. ಪುನಾರಂಭಿಸಲು ಕ್ರಮ ವಹಿಸಲಾಗುವುದು. ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೆ ಸಂಚಾರ ಮುಂದುವರಿಸಲಾಗುವುದು
. ● ಅಶೋಕ್‌ಕುಮಾರ್,ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ
ಹಿಂದೆ ಇದ್ದ ನಗರ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದರಿಂದ ಬಡ ಜನರಿಗೆ ಬಹಳ ಅನುಕೂಲವಾಗುತ್ತಿತ್ತು. ಜಿಲ್ಲಾ ಕೇಂದ್ರದಲ್ಲಿ ನಗರಸಾರಿಗೆ ಬಸ್ ಸೌಲಭ್ಯ ಇಲ್ಲದಿರುವುದು ಖಂಡನೀಯ. ಕೆಎಸ್ ಆರ್‌ಟಿಸಿಯಿಂದ ಮತ್ತೆ ನಗರ ಸಾರಿಗೆ ಸೌಲಭ್ಯ ನೀಡಬೇಕೆಂದು ಒತ್ತಾಯಿಸುತ್ತೇನೆ.
– ಸಿ.ಎಂ.ಕೃಷ್ಣಮೂರ್ತಿ,ಅಧ್ಯಕ್ಷ, ಪ್ರಗತಿಪರ ಸಂಘಟನೆಗಳ ಒಕ್ಕೂಟ
– ಕೆ.ಎಸ್. ಬನಶಂಕರ ಆರಾಧ್ಯ