Advertisement

ಸಿಟಿ ಬಸ್ಸನ್ನೇ ಎಗರಿಸಿದ ಭೂಪ ; ಒಬ್ಬನೇ ಬಸ್ಸು ಚಲಾಯಿಸಿಕೊಂಡು ಹೋಗಿದ್ದೆಲ್ಲಿಗೆ?

10:08 AM Oct 07, 2019 | Hari Prasad |

ಉಡುಪಿ: ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ ಸುದ್ದಿಯಾಗಿದ್ದಾನೆ.

Advertisement

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿರುವ 45ಸಿ ನಂಬರಿನ ಸಿಟಿ ಬಸ್ಸನ್ನು ನಿಫಾಝ್ ಎಂಬ ಹೆಸರಿನ ಯುವಕ ಉಳ್ಳಾಲದಿಂದ ಉಡುಪಿವರೆಗೆ ಬರೋಬ್ಬರಿ 90 ಕಿಲೋಮೀಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ ಇಲ್ಲಿ ಆತನ ನಸೀಬು ಕೈಕೊಟ್ಟಿದ್ದರಿಂದ, ಮಂಗಳೂರಿನ ಸಿಟಿ ಬಸ್ಸೊಂದು ಉಡುಪಿ ರಸ್ತೆಯಲ್ಲಿ ಖಾಲಿಯಾಗಿ ಹೋಗುತ್ತಿರುವುದನ್ನು ನೋಡಿ ಸಂಶಯಗೊಂಡವರೊಬ್ಬರು ಈ ಬಸ್ಸನ್ನು ತಡೆದು ನಿಲ್ಲಿಸಿ ಉಲ್ಲಾಳದಲ್ಲಿರುವ ತಮ್ಮ ಪರಿಚಿತರಿಗೆ ವಿಷಯ ತಿಳಿಸಿದಾಗ ಬಸ್ಸು ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ವಿವರ:
ಮಂಗಳೂರಿನ ಸ್ಟೇಟ್ ಬ್ಯಾಂಕ್ ಮತ್ತು ಉಳ್ಳಾಲ ನಡುವೆ ಸಂಚರಿಸುವ 44ಸಿ ನಂಬರಿನ ಎ.ಆರ್. ಟ್ರಾವೆಲ್ಸ್ ಹೆಸರಿನ ಸಿಟಿ ಬಸ್ಸನ್ನು ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಅದರ ಚಾಲಕ ಬಸ್ಸಿಗೆ ಡೀಸೆಲ್ ಭರ್ತಿಮಾಡಿ ತಾನು ಪ್ರತೀದಿನ ನಿಲ್ಲಿಸುವ ಜಾಗದಲ್ಲಿ ನಿಲ್ಲಿಸಿ ಹೋಗಿದ್ದಾನೆ. ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಈ ಬಸ್ಸಿನ ಕ್ಲೀನರ್ ಬಸ್ಸನ್ನು ಸ್ವಚ್ಛಗೊಳಿಸಲೆಂದು ಎಂದಿನಂತೇ ಬಂದು ನೋಡುವಾಗ ಆತನಿಗೆ ಆಶ್ಚರ್ಯ ಕಾದಿತ್ತು.

ಪ್ರತೀದಿನ ತಾನು ಸ್ವಚ್ಚಗೊಳಿಸಿ ಬಳಿಕ ‘ರೈಟ್ ರೈಟ್’ ಎಂದು ಹೇಳುವ ಬಸ್ಸೇ ಕಾಣುತ್ತಿಲ್ಲ, ಇನ್ನು ಅರ್ಧ ಗಂಟೆಯಲ್ಲಿ ಬಸ್ಸು ತನ್ನ ಟ್ರಿಪ್ ಪ್ರಾರಂಭಿಸಬೇಕು. ಕಂಗಾಲಾದ ಕ್ಲೀನರ್ ತಕ್ಷಣವೇ ಬಸ್ಸಿನ ಯಜಮಾನರಿಗೆ ವಿಷಯ ತಿಳಿಸುತ್ತಾನೆ. ವಿಷಯ ಕೇಳಿ ಗಾಬರಿಗೊಂಡ ಬಸ್ಸಿನ ಯಜಮಾನ ಆಶ್ರಫ್ ಅವರು ತಡಮಾಡದೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಮತ್ತು ತಮ್ಮ ಆಪ್ತರಿಗೂ ಈ ಮಾಹಿತಿಯನ್ನು ರವಾನಿಸುತ್ತಾರೆ.

ಉಳ್ಳಾಲದಲ್ಲಿ ಇಷ್ಟೆಲ್ಲಾ ಆಗುತ್ತಿರಬೇಕಾದರೆ ಈ ಬಸ್ಸು ಮಂಗಳೂರು ದಾಟಿ ಉಡುಪಿ ಕಡೆಗೆ ಹೆದ್ದಾರಿಯಲ್ಲಿ ತಣ್ಣಗೆ ಸಂಚರಿಸುತ್ತಿರುತ್ತದೆ! ಯುವಕನೊಬ್ಬ ಈ ಬಸ್ಸನ್ನು ಚಲಾಯಿಸಿಕೊಂಡು ಉಡುಪಿಯನ್ನೂ ದಾಟಿ ಸುಮಾರು ಹತ್ತು ಕಿಲೋಮೀಟರ್ ಸಾಗಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲೇ ಯಾವುದೋ ಕೆಲಸದಲ್ಲಿ ನಿರತರಾಗಿದ್ದವರು ಮಂಗಳೂರಿನ ಸಿಟಿ ಬಸ್ಸು ಇಲ್ಯಾಕಿದೆ ಎಂದು ಆಶ್ಚರ್ಯಗೊಂಡಿದ್ದಾರೆ. ತಕ್ಷಣವೇ ಮಂಗಳೂರಿನಲ್ಲಿರುವ ತಮ್ಮ ಪರಿಚಿತರಿಗೆ ಮಾಹಿತಿ ನೀಡಿ ಇತ್ತ ಬಸ್ಸನ್ನು ತಡೆದು ನಿಲ್ಲಿಸಿದ್ದಾರೆ. ಅಷ್ಟು ದೂರದಿಂದ ಬಸ್ಸನ್ನು ಚಲಾಯಿಸಿಕೊಂಡು ಬಂದ ನಿಫಾಝ್ ಸಹ ಬಸ್ಸನ್ನು ನಿಲ್ಲಿಸಿದ್ದಾನೆ.

Advertisement

ಇಷ್ಟು ಹೊತ್ತಿಗಾಗಲೇ ಉಳ್ಳಾಲದಿಂದ ಸಿಟಿ ಬಸ್ಸೊಂದು ಕಾಣೆಯಾಗಿರುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದವರು ಬಸ್ಸನ್ನು ಮತ್ತು ಅದನ್ನು ಚಲಾಯಿಸಿಕೊಂಡು ಬಂದಿದ್ದ ಯುವಕನನ್ನು ಉಡುಪಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ಇದೀಗ ಉಡುಪಿ ಪೊಲೀಸರಿಂದ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಬಸ್ಸಿನ ಮಾಲಿಕರ ಸಹಿತ ಉಡುಪಿಗೆ ಆಗಮಿಸಿ ಬಸ್ಸನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ಬಸ್ಸಿನ ಮಾಲಿಕರು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಉಳ್ಳಾಲದ ಸರ್ವಿಸ್ ಸ್ಟೇಷನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ನಿಫಾಝ್ ಅಸಲಿಗೆ ಈ ಸಿಟಿ ಬಸ್ಸನ್ನು ಏಕಾ ಏಕಿ ಎಗರಿಸಿದ್ಯಾಕೆ ಮತ್ತು ಅದನ್ನು ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದಿದ್ಯಾಕೆ ಎಂಬ ಪ್ರಶ್ನೆ ಇದೀಗ ಎಲ್ಲರ ಮನಸ್ಸಿನಲ್ಲಿ ಮೂಡಿದೆ. ಆದರೆ ಇದಕ್ಕೆಲ್ಲಾ ಉತ್ತರ ಪೊಲೀಸ್ ತನಿಖೆಯ ಬಳಿಕವಷ್ಟೇ ಲಭಿಸಬೇಕಿದೆ. ಒಟ್ಟಿನಲ್ಲಿ ಖಾಸಗಿ ಬಸ್ಸುಗಳ ತವರಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಸ್ಸು ಕಳವು ಪ್ರಕರಣ ಸಂಚಲನ ಸೃಷ್ಟಿಸಿದ್ದಂತೂ ಸುಳ್ಳಲ್ಲ.

ಉಳ್ಳಾಲದಿಂದ ಉಡುಪಿ ಕಡೆಗೆ ಸಾಗುವ ದಾರಿಯಲ್ಲಿ ಸಿಗುವ ಎರಡೂ ಟೋಲ್ ಗೇಟ್ ಗಳಲ್ಲೂ ಈತ ಬಸ್ಸನ್ನು ನಿಲ್ಲಿಸದೇ ಚಲಾಯಿಸಿದ ಪರಿಣಾಮ ಬಸ್ಸಿನ ಗಾಜುಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next