ಹಿರಿಯ ನಿರ್ದೇಶಕ, ನಿರ್ಮಾಪಕ ಕಂ ನಟ ಎಸ್.ನಾರಾಯಣ್ ಪುತ್ರ ಪಂಕಜ್ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಎಸ್. ನಾರಾಯಣ್ ಮತ್ತೂಬ್ಬ ಪುತ್ರ ಪವನ್ ನಾರಾಯಣ್ ಕೂಡ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ಮತ್ತು ಚಿತ್ರರಂಗದಲ್ಲಿ ಪರದೆಯ ಹಿಂದಿನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪವನ್ ನಾರಾಯಣ್, ಒಂದಷ್ಟು ಅನುಭವ ಪಡೆದುಕೊಂಡು, ನಟನಾಗಲು ಒಂದಷ್ಟು ಸಿದ್ಧತೆ ಮಾಡಿಕೊಂಡು ಈಗ “ಚಿ.ರಾ. ಮುತ್ತು ಚಿ.ಸೌ.ರತ್ನ’ ಎಂಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಅಡಿಯಿಡುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಅವರೊಂದಿಗೆ ಮತ್ತು ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿದ ಅನುಭವವಿರುವ ಶ್ರೀಕಾಂತ್ ಹುಣಸೂರು ಮೊದಲ ಬಾರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಪವನ್ ನಾರಾಯಣ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ನಟಿ, ಸಂಸದೆ ಸುಮಲತಾ ಅಂಬರೀಶ್, ನಟ ಶ್ರೀಮುರಳಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಎಸ್.ಎ ಚಿನ್ನೇಗೌಡ ಮೊದಲಾದವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನವ ನಟ ಪವನ್, “ಹಳ್ಳಿಯಲ್ಲಿರುವ ನನಗೇ ಎಲ್ಲ ಗೊತ್ತಿದೆ ಅಂಥ ಅಂದುಕೊಂಡಿರುವ ಹುಡುಗನ ಪಾತ್ರ ನನ್ನದು. ಚಿತ್ರದ ಪಾತ್ರ ನೈಜವಾಗಿರುವುದರಿಂದ, ಪ್ರೇಕ್ಷಕರಿಗೆ ಹತ್ತಿರವಾಗುವುದೆಂಬ ನಂಬಿಕೆ ಇದೆ. ಚಿತ್ರದ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿದ್ದೇನೆ. ಇದೊಂದು ಹೊಸಥರದ ಚಿತ್ರವಾಗಲಿದೆ’ ಎಂದರು.
ಇನ್ನು ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಸ್ಟೋರಿ. ಚಿತ್ರದ ಬಗ್ಗೆ ಮಾತನಾಡುವ ನವ ನಿರ್ದೇಶಕ ಶ್ರೀಕಾಂತ್ ಹುಣಸೂರು, “ಕೆಲ ವರ್ಷಗಳ ಹಿಂದೆ ಮುತ್ತತ್ತಿ ಸಮೀಪ ನಡೆದ ನೈಜ ಘಟನೆಯ ಎಳೆಯನ್ನ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಇದರಲ್ಲಿ ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇದೆ. ಗೊತ್ತು ಗುರಿ ಇಲ್ಲದ, ಬದುಕಿನ ಬಗ್ಗೆ ಚಿಂತೆ ಇರದ ಅವಿದ್ಯಾವಂತ ಹುಡುಗನೊಬ್ಬನ ಜೀವನದಲ್ಲಿ ಹುಡುಗಿಯೊಬ್ಬಳು ಪ್ರವೇಶವಾದಾಗ ಏನೆಲ್ಲ ನಡೆಯುತ್ತದೆ ಅನ್ನೋದು ಚಿತ್ರದ ಕಥೆ. ಮೇಲ್ನೋಟಕ್ಕೆ ಸಾಮಾನ್ಯ ಕಥೆಯಂತೆ ಕಂಡರೂ, ತೆರೆಮೇಲೆ ಅದನ್ನು ಬೇರೆ ರೀತಿಯಲ್ಲಿ ಪ್ರಸೆಂಟ್ ಮಾಡುತ್ತೇವೆ. ನೋಡುಗರಿಗೆ ಹೊಸಥರದಲ್ಲಿ ಚಿತ್ರ ಕಾಣುತ್ತದೆ’ ಎಂದು ವಿವರಣೆ ನೀಡಿದರು.
“ಚಿ.ರಾ. ಮುತ್ತು ಚಿ.ಸೌ.ರತ್ನ’ ಚಿತ್ರದಲ್ಲಿ ಚಿಕ್ಕಮಗಳೂರು ಮೂಲದ ಅಂಜನಾ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಂಜನಾಗೆ ಇದು ಮೊದಲ ಚಿತ್ರ. ಇಲ್ಲಿ ಅವರು ರತ್ನ ಎನ್ನುವ ಹೆಸರಿನ ಹಳ್ಳಿಯ ಸಾಹುಕಾರನ ಮುದ್ದಿನ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಹಿರಿಯ ನಟ ಚರಣ್ ರಾಜ್ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದಂತೆ ನಾಗಾಭರಣ, ಸುಚೇಂದ್ರ ಪ್ರಸಾದ್, ರವಿಶಂಕರ್‌ಗೌಡ, ರಾಜೇಶ್ ನಟರಂಗ, ಗಿರಿ, ವೀಣಾ ಸುಂದರ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಮತಿ ದೇವಕಿ “ಚಿ.ರಾ. ಮುತ್ತು ಚಿ.ಸೌ.ರತ್ನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಕೃಷ್ಣ ಮಂಡ್ಯ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಲೋಕೇಶ್ ಸಂಗೀತವಿದ್ದು, ಚೇತನ್ ಕುಮಾರ್, ಅರಸು ಅಂತಾರೆ, ಸಂತೊಷ್ ನಾಯಕ್ ಸಾಹಿತ್ಯವಿದೆ. ಚಿತ್ರಕ್ಕಿದೆ. ಸುಮಾರು 45 ದಿನಗಳ ಕಾಲ ಕೊಳ್ಳೆಗಾಲ, ಚಾಮರಾಜನಗರ, ತಿಪಟೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.