ಗಜೇಂದ್ರಗಡ: ಉಚಿತ ಕೋವಿಡ್ ಲಸಿಕೆ ಪೂರೈಕೆ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸುವಂತೆ ಒತ್ತಾಯಿಸಿ ಸಿಐಟಿಯು, ಕೆಪಿಆರ್‌ಎಸ್, ಕಟ್ಟಡ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಶುಕ್ರವಾರ ತಮ್ಮ ತಮ್ಮ ಮನೆ ಮುಂದೆ ನಿಂತು ಬೇಡಿಕೆಗಳ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ನಂತರ ಸಹಿ ಸಂಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಪೀರು ರಾಠೊಡ ಹಾಗೂ ಸಿಪಿಎಂ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ರಾಜ್ಯದಲ್ಲಿ ಕೃಷಿ ಕೂಲಿಕಾರರು ಸೇರಿದಂತೆ 3 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ಕೆಲಸವಿದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಖಾಸಗಿ ವಾಹನ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಮುಂತಾದವರು ಆದಾಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.ನಂತೆ 3 ತಿಂಗಳು ನೇರ ಹಣ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಮಾತನಾಡಿ, ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಹಾಗೂ ಪರೀಕ್ಷೆಯನ್ನು ಹೆಚ್ಚಿಸಬೇಕು. ಅಗತ್ಯ ಬೆಡ್, ಔಷ ಧಗಳು, ಇಂಜೆಕ್ಷನ್, ಆಮ್ಲಜನಕ, ವೆಂಟಿಲೇಟರ್‌ಗಳನ್ನು ಸಮರೋಪಾದಿಯಲ್ಲಿ ಒದಗಿಸಬೇಕು. ಇದಕ್ಕೆ ಅಗತ್ಯವಾದ ಹಣ ಕ್ರೋಢೀಕರಿಸಲು, ತುರ್ತಲ್ಲದ ಬಂಡವಾಳ ವೆಚ್ಚದ ಯೋಜನೆಗಳನ್ನು ಮುಂದೂಡಬೇಕು. ಲಸಿಕೆಯನ್ನು ಸಾರ್ವತ್ರಿಕವಾಗಿ ಹಾಗೂ ಉಚಿತವಾಗಿ ನೀಡಬೇಕು. ಕೋವಿಡ್ ಆತಂಕದ ಸಂದರ್ಭಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಳ ಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕೋವಿಡ್ ಯೋಧರಿಗೂ ಕಡ್ಡಾಯ 30 ಲಕ್ಷ ರೂ. ವಿಮೆ ಖಾತ್ರಿಪಡಿಸಬೇಕೆಂದು ಒತ್ತಾಯಿಸಿದರು.
ರೈತ ಕಾರ್ಮಿಕ ಮುಖಂಡ ಬಾಲು ರಾಠೊಡ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಕೂಲಿಕಾರರಿಗೆ ಕನಿಷ್ಟ 200 ದಿನಗಳ ಉದ್ಯೋಗ ಹೆಚ್ಚಿಸಬೇಕು. ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು 6 ತಿಂಗಳ ಕಾಲ ಪಡಿತರ ವ್ಯವಸ್ಥೆ ಮೂಲಕ ಉಚಿತವಾಗಿ ನೀಡಬೇಕು. ಕೋವಿಡ್ ಪರಿಹಾರ ಸಾಮಗ್ರಿ ಖರೀದಿಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರು, ಹಡಪದ ಸಮುದಾಯ, ನೇಕಾರರು, ಮಡಿವಾಳರು, ಖಾಸಗಿ ವಾಹನ ಚಾಲಕರು, ಎಲೆಕ್ಟ್ರಿಷಿಯನ್, ಬೀದಿ ಬದಿ ವ್ಯಾಪಾರಸ್ಥರು ತಮ್ಮ ತಮ್ಮ ಮನೆ ಮುಂದೆ ನಿಂತು ಬೇಡಿಕೆಗಳ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.