Advertisement

ಧರ್ಮದ ಆಧಾರದಲ್ಲಿ ಪೌರತ್ವ ಕಾನೂನು ಜಾರಿ

09:10 PM Dec 28, 2019 | Lakshmi GovindaRaj |

ಕುಣಿಗಲ್‌: ರಾಷ್ಟ್ರೀಯ ಪೌರತ್ವ ಕಾಯ್ದೆ ಹಾಗೂ ಪೌರತ್ವ ತಿದ್ದುಪಡಿ ಕಾನೂನು ವಾಪಸ್‌ಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು.

Advertisement

ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ನೇತೃತ್ವದಲ್ಲಿ ರಾಷ್ಟ್ರಧ್ವಜ, ಕನ್ನಡ ಬಾವುಟ ಹಾಗೂ ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್‌ ಭಾವಚಿತ್ರ ಹಿಡಿದು ಕೆ.ಎಸ್‌.ಆರ್‌.ಟಿ ಬಸ್‌ ನಿಲ್ದಾಣದಿಂದ ಹುಚ್ಚಮಾಸ್ತಿಗೌಡ ವೃತ್ತದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದೇಶ ಇಬ್ಭಾಗಕ್ಕೆ ಪಿತೂರಿ: ಶಾಸಕ ಡಾ.ರಂಗನಾಥ್‌ ಮಾತನಾಡಿ, ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕಾನೂನು ಜಾರಿಗೆ ತಂದು ರಾಷ್ಟ್ರದಲ್ಲಿ ಅಸಹನೆಯ ವಾತಾವರಣ ಸೃಷ್ಟಿಸುತ್ತಿದೆ. ಭಾರತದ ಒಕ್ಕೂಟ ರಾಷ್ಟ್ರದಲ್ಲಿ ಹಲವು ಜಾತಿ, ಧರ್ಮ ಹಾಗೂ ಭಾಷೆ ಮಾತನಾಡುವ ಜನರು ನೂರರು ವರ್ಷಗಳಿಂದ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಹಲವು ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಂಬೇಡ್ಕರ್‌ ಅವರು ಎಲ್ಲಾ ಧರ್ಮ ಹಾಗೂ ಸಮುದಾಯದ ಜನರಿಗೆ ಪೂರಕವಾಗುವಂತೆ ಸಾಮಾಜಿಕ ನ್ಯಾಯ ಕೊಡುವಂತಹ ಸಂವಿಧಾನ ಬರೆದಿದ್ದಾರೆ. ಇದಕ್ಕೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿಗೆ ತಂದು ದೇಶ ಇಬ್ಭಾಗ ಮಾಡಲು ಹೊರಟ್ಟಿದ್ದಾರೆ. ಇದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಹೋರಾಟ ಎಚ್ಚರಿಕೆ: ಎಲ್ಲಾ ಭಾರತೀಯರಿಗೂ ಸಾಮಾಜಿಕ ಹಾಗೂ ಸಮಾಜನತೆ ಹಕ್ಕು ಸಂವಿಧಾನ ಕಲ್ಪಿಸಿದೆ. ಇದಕ್ಕೆ ಧಕ್ಕೆ ಉಂಟು ಮಾಡಿದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಶಾಸಕರು ಎಚ್ಚರಿಸಿದರು. ಪುರಸಭಾ ಮಾಜಿ ಅಧ್ಯಕ್ಷ ರೆಹಮಾನ್‌ ಷರೀಪ್‌ ಮಾತನಾಡಿ, ಬಸವಣ್ಣ, ಸಿದ್ದಲಿಂಗೇಶ್ವರರಂತಹ ಮಹಾನ್‌ ಮಹನೀಯರು ಹುಟ್ಟಿದ ನಾಡು ಕರ್ನಾಟಕ.

Advertisement

ಸಿದ್ಧಗಂಗೆ, ಎಡಿಯೂರು, ಆದಿಚುಂಚನಗಿರಿ ಮೊದಲಾದ ಮಠ ಹಾಗೂ ದೇವಾಲಯಗಳಲ್ಲಿ ಜಾತಿ, ಧರ್ಮ ಎನ್ನದೇ ಹಸಿವಿನಿಂದ ಬರುವ ಸರ್ವ ಜನಾಂಗಕ್ಕೂ ದಾಸೋಹ ನಡೆಸುವ ಮೂಲಕ ಹೊಟ್ಟೆ ತುಂಬಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ಧರ್ಮದವರೂ ಸಹೋದರರಂತೆ ಬದುಕುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದು ಹಿಂದು, ಮುಸ್ಲಿಮರ ನಡುವೆ ವೈ ಮನಸ್ಸು ಉಂಟು ಮಾಡುತ್ತಿದೆ. ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರಗತಿ ಪರ ಚಿಂತಕ ಜಿ.ಕೆ.ನಾಗಣ್ಣ ಮಾತನಾಡಿ, ದೇಶದ ಜನರನ್ನು ಕಪಿ ಮುಷ್ಠಿಯಲ್ಲಿ ಇಟ್ಟುಕೊಳ್ಳುವ ದಿಸೆಯಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದು ಮುಸ್ಲಿಮರ ಟಾರ್ಗೆಟ್‌ ಮಾಡಿದ್ದಾರೆ. ಬಳಿಕ ಮುಂದಿನ ದಿನದಲ್ಲಿ ದಲಿತರು, ಒಕ್ಕಲಿಗರು, ಲಿಂಗಾಯತ ಹಾಗೂ ಹಿಂದುಳಿದ ವರ್ಗದವರ ಮೇಲೆ ದಬ್ಟಾಳಿಕೆ,ದೌರ್ಜನ್ಯ ನಡೆಸಿ ಜೀತದಾಳನ್ನಾಗಿ ಮಾಡಿಕೊಳ್ಳಲು ಸಂಚು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ರಂಗಸ್ವಾಮಿ, ಮಹಮದ್‌ ಸೆಮಿ, ಮಾಜಿ ಉಪಾಧ್ಯಕ್ಷ ಅಬ್ದುಲ್‌ ಅಮೀದ್‌, ಮುಖಂಡರಾದ ಸನಾವುಲ್ಲಾ, ಮುಮ್ತಾಜ್‌ ಅಹಮದ್‌, ಶಕೂರ್‌ ಇತರರಿದ್ದರು.

ಮೊಳಗಿದ ರಾಷ್ಟ್ರಗೀತೆ: ಮುಸ್ಲಿಮರು ರಾಷ್ಟ್ರಗೀತೆ ಹಾಡಿ ಭಾರತ ಮಾತಾಕೀ ಜೈ, ಒಂದೇ ಮಾತರಂ ಘೋಷಣೆ ಮೊಳಗಿಸಿ, ಹಿಂದು-ಮುಸ್ಲಿಮರೆಲ್ಲರೂ ಒಂದೇ ನಾವೆಲ್ಲರೂ ಭಾರತೀಯರು ಎಂಬ ಸಂದೇಶ ಸಾರಿದರು.

ಸಾಧನೆ ಶೂನ್ಯ: ಬಿಜೆಪಿ ಚುನಾವಣಾ ಪೂರ್ವದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ಕಪ್ಪುಹಣ ವಾಪಸ್‌ ತಂದು ದೇಶದ ಪ್ರತಿಯೊಬ್ಬರ ಖಾತೆಗೆ ಹಣ ಹಾಕುತ್ತೇವೆ, ಡಿಜಿಟಲ್‌ ಇಂಡಿಯಾ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. 20 ಕೋಟಿ ಉದ್ಯೋಗ ಸೃಷ್ಟಿಸುವ ಬದಲು 20 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ.

ಕಪ್ಪು ಹಣವೂ ತಂದಿಲ್ಲ. ಜನರ ಖಾತೆಗೆ ಹಣ ಹಾಕಿಲ್ಲ. ಇರುವ ಹಣ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಜ್ವಲಂತ ಸಮಸ್ಯೆಗಳ ನಿವಾರಣೆಗೆ ಚಿಂತಿಸದೆ ವಿವಾದಿತ ಮಸೂದೆ ಜಾರಿಗೆ ತರಲು ಮುಂದಾಗಿದೆ ಎಂದು ಶಾಸಕ ಡಾ.ರಂಗನಾಥ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next