Advertisement

ಪೌರತ್ವ ಕಾಯಿದೆ: ಪರ-ವಿರೋಧ ಸಮಾವೇಶಗಳ ಮುಂದೂಡಿಕೆ

09:58 AM Jan 01, 2020 | Team Udayavani |

ಮಂಗಳೂರು: ಶಾಂತಿ ಸೌಹಾರ್ದ ನೆಲೆಸಿರುವ ಮಂಗಳೂರಿನಲ್ಲಿ ಸದ್ಯ ಪೌರತ್ವ(ತಿದ್ದುಪಡಿ) ಕಾಯಿದೆಯ ಪರ ಅಥವಾ ವಿರೋಧ ಯಾವುದೇ ಸಮಾವೇಶವನ್ನು ನಡೆಸದಂತೆ ವಿವಿಧ ಸಂಘಟನೆಗಳಿಗೆ ಮನವಿ ಮಾಡಿಕೊಂಡಿದ್ದು ಸಂಘಟನೆಗಳು ಸಕಾರಾತ್ಮಕ ಸ್ಪಂದನೆ ನೀಡಿವೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಸಮುದಾಯಗಳ ಮುಖಂಡರ ಜತೆಗೆ ಶಾಂತಿ ಸಭೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಡಿ.19ರಂದು ಹಿಂಸಾತ್ಮಕ ಪ್ರತಿಭಟನೆ, ಗೋಲಿಬಾರ್‌ ಘಟನೆಗಳು ಸಂಭವಿಸಿದ್ದವು. ಆದರೆ ಅನಂತರದ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನೀಡಿಲ್ಲ. ಎಲ್ಲ ಸಂಘಟನೆ, ಸಮುದಾಯ, ಸಾರ್ವಜನಿಕರ ಸಹಕಾರದಿಂದ ಶಾಂತಿ ಸೌಹಾರ್ದತೆ ನೆಲೆಸಿದೆ. ಇದು ಮುಂದುವರಿಯಬೇಕು. ಈ ನಡುವೆ ಜ.4ರಂದು ಪೌರತ್ವ(ತಿದ್ದುಪಡಿ) ಕಾಯಿದೆ ವಿರೋಧಿಸಿ ಮುಸ್ಲಿಂ ಸೆಂಟ್ರಲ್‌ ಕಮಿಟಿ ವತಿಯಿಂದ ನಗರದಲ್ಲಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ಸ್ಥಳೀಯ ಬಿಜೆಪಿ ನೇತೃತ್ವದಲ್ಲಿ ಜ.12ರಂದು ಪೌರತ್ವ ಕಾಯಿದೆ ಕುರಿತು ಜನಜಾಗೃತಿ ಸಮಾವೇಶ ನಿಗದಿಯಾಗಿದೆ. ಇವೆರಡೂ ಸಮಾವೇಶಗಳನ್ನು ನಗರದ ನೆಹರೂ ಮೈದಾನದಲ್ಲಿ ನಡೆಸಲು ಪೊಲೀಸ್‌ ಪರವಾನಿಗೆ ಕೇಳಲಾಗಿದೆ. ಆದರೆ ಈ ಎರಡೂ ಸಮಾವೇಶಗಳನ್ನು ಕೂಡ ನಿಗದಿತ ದಿನಾಂಕಗಳಿಗಿಂತ ಕನಿಷ್ಠ 8ರಿಂದ 10 ದಿನಗಳ ಕಾಲವಾದರೂ ಮುಂದೂಡಬೇಕು. ಉತ್ತಮ ವಾತಾವರಣ ನಿರ್ಮಾಣವಾದಾಗ ಸಮಾವೇಶ ನಡೆಸಬಹುದು ಎಂದು ಎರಡೂ ಕಡೆಯವರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ಚರ್ಚಿಸಿ ಮನವಿಯನ್ನು ಪರಿಗಣಿಸುವುದಾಗಿ ಸಂಘಟನೆಯವರು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಮಾವೇಶ ನೆಹರೂ ಮೈದಾನದಲ್ಲಿ ನಡೆಸುವಾಗ ಸಾರ್ವಜನಿಕರು, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಮಾವೇಶ ಸ್ಥಳವನ್ನು ಕೂಡ ಬೇರೆಡೆಗೆ ಸ್ಥಳಾಂತರಿಸುವುದು ಉತ್ತಮ. ಈ ಬಗ್ಗೆ ಪರವಾನಿಗೆ ನೀಡುವಾಗ ಪೊಲೀಸ್‌ ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗೃಹಸಚಿವರು ತಿಳಿಸಿದರು.

ಅಮಾಯಕರ ವಿರುದ್ಧ ಕ್ರಮವಿಲ್ಲ
ಸಭೆಯಲ್ಲಿ ಅಲ್ಪಸಂಖ್ಯಾಕ ಸಮುದಾಯದವರು ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಮಾಯಕರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದಾರೆ. ಹಿಂಸೆಯಲ್ಲಿ ತೊಡಗಿದವರ ವಿರುದ್ಧ ಮಾತ್ರವೇ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಮಾಯಕರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದೇನೆ. ನ್ಯಾಯಸಮ್ಮತ ತನಿಖೆ ನಡೆಯುತ್ತಿದೆ. ಮ್ಯಾಜಿಸ್ಟ್ರೇಟ್‌ ಮತ್ತು ಸಿಐಡಿ ತನಿಖೆ ನಡೆಯುತ್ತಿದೆ. ಗೋಲಿಬಾರ್‌ ಘಟನೆ ಸಂದರ್ಭ ಪ್ರತ್ಯೇಕವಾದ ಪೊಲೀಸ್‌ ವಿಭಾಗದಿಂದ ತನಿಖೆ ನಡೆಯಬೇಕೆಂಬುದು ಮಾನವ ಹಕ್ಕುಗಳ ಆಯೋಗದ ನಿಯಮಾವಳಿಯಲ್ಲಿಯೂ ಇದೆ. ಹಾಗಾಗಿ ಸಿಐಡಿಯಿಂದಲೂ ತನಿಖೆ ನಡೆಯುತ್ತಿದೆ. ಸಿಐಡಿ ತಂಡ ಈಗಾಗಲೇ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ ಎಂದು ಗೃಹಸಚಿವ ಬೊಮ್ಮಾಯಿ ತಿಳಿಸಿದರು.

ತನಿಖೆ ಅನಂತರ ಪರಿಹಾರ ನಿರ್ಧಾರ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹಸಚಿವರು, “ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ ಅನಂತರ ಈ ಬಗ್ಗೆ ವರದಿಗಳು ಪ್ರಕಟವಾದಾಗ ಪ್ರತಿಕ್ರಿಯೆಗಳು ಬಂದವು.

Advertisement

ಇದಕ್ಕೆ ಮುಖ್ಯಮಂತ್ರಿಯವರು ಸ್ಪಷ್ಟೀಕರಣ ನೀಡಿದರು. ತನಿಖೆಯ ಅನಂತರವೇ ಪರಿಹಾರದ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದರು. ಈ ಹಿಂದೆ ಮುಲ್ಕಿಯಲ್ಲಿ ನಡೆದ ಗೋಲಿಬಾರ್‌ ಘಟನೆಯಲ್ಲಿಯೂ ಮೃತಪಟ್ಟವರಿಗೆ ಪರಿಹಾರ ನೀಡಿರಲಿಲ್ಲ. ತನಿಖೆಯ ಅನಂತರವೇ ಪರಿಹಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವರು ತಿಳಿಸಿದರು.

ವಾರ್ಡ್‌ ಮಟ್ಟದಲ್ಲಿ ಶಾಂತಿ ಸಮಿತಿ
ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಅಧಿಕೃತವಾದ ಶಾಂತಿ ಸಮಿತಿಗಳನ್ನು ವಾರ್ಡ್‌ ಮಟ್ಟದಲ್ಲಿ ರಚಿಸಲಾಗುವುದು. ಈ ಸಮಿತಿಗಳಿಗೆ ಜವಾಬ್ದಾರಿಯನ್ನು ಹಂಚಲಾಗುವುದು ಎಂದು ಸಚಿವರು ಹೇಳಿದರು. ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, “ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ನಿಷೇಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆಯೂ ತನಿಖೆಯ ಅನಂತರವೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಔರಾದ್ಕರ್‌ ವರದಿಯಿಂದ ಪೊಲೀಸರ ವೇತನದಲ್ಲಿ ಉಂಟಾಗುವ ತಾರತಮ್ಯ ಸಮಸ್ಯೆ ಮುಂದಿನ ವರ್ಷ ಬಗೆಹರಿಯಲಿದೆ’ ಎಂದು ತಿಳಿಸಿದರು.

ಶಾಂತಿಗೆ ಆದ್ಯತೆ
ಘಟನೆಗೆ ಸಂಬಂಧಿಸಿ ಇದುವರೆಗೆ ಎಷ್ಟ ಮಂದಿಯನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಅದು ನನ್ನ ಉದ್ದೇಶವಲ್ಲ, ಆ ಬಗ್ಗೆ ಮಾಹಿತಿಯನ್ನು ಕೂಡ ಪಡೆದಿಲ್ಲ. ತನಿಖೆ ನಡೆಯುತ್ತದೆ. ನಗರದಲ್ಲಿ ಶಾಂತಿ ಸೌಹಾರ್ದತೆಯನ್ನು ಮುಂದುವರಿಸುವುದಕ್ಕೆ ನನ್ನ ಆದ್ಯತೆ. ಇದಕ್ಕೆ ಎಲ್ಲರ ಸಹಕಾರ ಕೋರಿದ್ದೇನೆ. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ 28 ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಸಲಹೆ ನೀಡಿದ್ದಾರೆ. ಸಭೆ ಶಾಂತಿಯುತವಾಗಿ ನಡೆದಿದೆ. ಹಾಗಾಗಿ ನಗರದಲ್ಲಿ ಶಾಂತಿ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್‌, ಯು.ಟಿ.ಖಾದರ್‌, ಎಸ್‌.ಅಂಗಾರ, ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಸಂಜೀವ ಮಠಂದೂರು, ಐವನ್‌ ಡಿಸೋಜ, ಹರೀಶ್‌ ಕುಮಾರ್‌, ಹರೀಶ್‌ ಪೂಂಜ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next