ಹೊಸದಿಲ್ಲಿ : ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.
ದೇಶದ ಜನರ ಹಿತಾಸಕ್ತಿಯನ್ನು ಕಾಪಿಡುವ ದಿಶೆಯಲ್ಲಿ ಈ ಮಸೂದೆಯು ಅತ್ಯಂತ ಮಹತ್ವದ್ದಾಗಿದೆ ಎಂದು ರಾಜನಾಥ್ ಹೇಳಿದರು.
2016ರ ಪೌರತ್ವ ತಿದ್ದುಪಡಿ ಮಸೂದೆಯು 1955ರ ಪೌರತ್ವ ಕಾಯಿದೆಗೆ ತಿದ್ದುಪಡಿ ತರುವ ಉದ್ದೇಶ ಹೊಂದಿದೆ. ಈ ಕಾಯಿದೆಯು ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ 2014ರ ಡಿಸೆಂಬರ್ 31ಕ್ಕೆ ಮುನ್ನ ಧಾರ್ಮಿಕ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಓಡಿ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ಮಂಜೂರು ಮಾಡುತ್ತದೆ.
ಪ್ರಸ್ತಾವಿತ ಮಸೂದೆಯ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಅಸ್ಸಾಂನ ಹೊರೆ ಇಡಿಯ ದೇಶದ ಹೊರೆಯಾಗಿದೆ. ಅಕ್ರಮ ವಲಸಿಗರನ್ನು ನಿಭಾಯಿಸುವುದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದು ಅಸ್ಸಾಮಿಗೆ ಮಾತ್ರವಲ್ಲ; ಅಥವಾ ಯಾವುದೇ ನಿರ್ದಿಷ್ಟ ದೇಶದಿಂದ ಬರುವ ವಲಸಿಗರ ಕಲ್ಯಾಣಕ್ಕೂ ಅಲ್ಲ; ಈ ಮಸೂದೆ ದೇಶದ ಪಶ್ಚಿಮದ ಗಡಿಗಳಿಂದ ಬಂದು ರಾಜಸ್ಥಾನ, ಪಂಜಾಬ್ ಮತ್ತು ದಿಲ್ಲಿಯಲ್ಲಿ ನೆಲೆಸಿರುವ ವಲಸಿಗರಿಗೆ ಸಂಬಂಧಿಸಿಯೂ ಇದೆ ಎಂದು ಹೇಳಿದರು.
ರಾಜನಾಥ್ ಸಿಂಗ್ ಮುಂದುವರಿದು “ಸರಕಾರ ಎನ್‌ಆರ್‌ಸಿಗೆ ಬದ್ಧವಿದೆ; ಸರಕಾರ ಯಾರ ವಿರುದ್ಧವೂ ತಾರತಮ್ಯ ಎಸಗುವುದಿಲ್ಲ; ನೈಜ ಭಾರತೀಯರನ್ನು ಎಷ್ಟು ಮಾತ್ರಕ್ಕೂ ಕೈಬಿಡುವುದಿಲ್ಲ’ ಎಂದು ಹೇಳಿದರು. ಅಕ್ರಮ ವಲಸಿಗರ ವಿರುದ್ದ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದವರು ಹೇಳಿದರು.