Advertisement

ಪೌರತ್ವಕ್ಕೆ ಧರ್ಮದ ದಾಖಲೆ ಕಡ್ಡಾಯ ; ಅರ್ಜಿ ಸಲ್ಲಿಸುವವರು ಪುರಾವೆ ನೀಡಬೇಕು

09:59 AM Jan 29, 2020 | Hari Prasad |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ವಯ ಪೌರತ್ವಕ್ಕೆ ಅರ್ಜಿಸಲ್ಲಿಸುವ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಮುಸ್ಲಿಮೇತರ ವಲಸಿಗರು, ತಮ್ಮ ಧಾರ್ಮಿಕ ನಂಬಿಕೆಗಳ ಕುರಿತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ಹಿಂದೂ, ಸಿಕ್ಖ್, ಕ್ರಿಶ್ಚಿಯನ್‌, ಬೌದ್ಧ, ಜೈನ ಅಥವಾ ಪಾರ್ಸಿ ಅರ್ಜಿದಾರರು ತಾವು 2014ರ ಡಿಸೆಂಬರ್‌ 31ಕ್ಕೂ ಮುನ್ನ ಭಾರತವನ್ನು ಪ್ರವೇಶಿಸಿದ್ದೇವೆ ಎನ್ನುವುದನ್ನು ಸಾಬೀತುಪಡಿಸುವ ಮತ್ತು ತಮ್ಮ ಧರ್ಮವನ್ನು ತಿಳಿಸುವ ದಾಖಲೆಗಳನ್ನು ಒದಗಿಸಿದರಷ್ಟೇ ಪೌರತ್ವ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಭಾರತದ ಪೌರತ್ವವನ್ನು ಬಯಸುವವರಿಗೆ ಅದಕ್ಕಾಗಿ ಅರ್ಜಿ ಸಲ್ಲಿಸಲು ಕೇವಲ 3 ತಿಂಗಳ ಕಾಲಾವಕಾಶವನ್ನಷ್ಟೇ ಸರಕಾರ ನೀಡಲಿದೆ ಎಂದೂ ಹೇಳಲಾಗಿದೆ. ಜತೆಗೆ, ಸಿಎಎ ಅನುಷ್ಠಾನದ ನಿಯಮಗಳಲ್ಲಿ ಅಸ್ಸಾಂ ಕೇಂದ್ರಿತ ಪ್ರತ್ಯೇಕ ನಿಬಂಧನೆಗಳನ್ನು ಸೇರಿಸಲು ಸರಕಾರ ಚಿಂತನೆ ನಡೆಸಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಇಮಾಮ್‌ ಮನೆಯಲ್ಲಿ ಶೋಧ: ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿ ಹಲವು ರಾಜ್ಯಗಳಲ್ಲಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಸಿಎಎ ವಿರೋಧಿ ಹೋರಾಟಗಾರ ಶರ್ಜೀಲ್‌ ಇಮಾಮ್‌ ಅವರ ಬಿಹಾರದ ಮನೆ ಮೇಲೆ ಪೊಲೀಸರು ಸೋಮವಾರ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ.

ಮುಂಬಯಿನಲ್ಲೂ ಪ್ರತಿಭಟನೆ: ಸಿಎಎ ವಿರೋಧಿಸಿ ಮುಂಬಯಿನಲ್ಲೂ ಮಹಿಳೆ ಯರು ಪ್ರತಿಭಟನೆ ಆರಂಭಿಸಿದ್ದಾರೆ. ದಿಲ್ಲಿಯ ಶಹೀನ್‌ ಬಾಘ್ ನ ಪ್ರತಿಭಟನೆ ಯಿಂದ ಸ್ಫೂರ್ತಿ ಪಡೆದಿರುವ ಇವರು, ಗಣರಾಜ್ಯ ದಿನದ ರಾತ್ರಿಯಿಂದ ಧರಣಿ ಆರಂಭಿಸಿದ್ದಾರೆ.

Advertisement

ಬಂಗಾಲದಲ್ಲೂ ನಿರ್ಣಯ: ಪೌರತ್ವ ಕಾಯ್ದೆ ವಿರುದ್ಧ ಸೋಮವಾರ ಪಶ್ಚಿಮ ಬಂಗಾಲ ಅಸೆಂಬ್ಲಿ ಕೂಡ ನಿರ್ಣಯ ಕೈಗೊಂಡಿದೆ.

ಶಹೀನ್‌ ಬಾಘ್ ಪ್ರತಿಭಟನೆಯು ಮೌನವಾಗಿರುವ ಬಹುಸಂಖ್ಯೆಯ ಜನರನ್ನು ಕೆಲವೇ ಕೆಲವು ಮಂದಿ ತುಳಿಯುತ್ತಿರುವಂಥ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಇದು ಸಿಎಎ ವಿರುದ್ಧದ ಪ್ರತಿಭಟನೆಯಲ್ಲ, ಮೋದಿ ವಿರುದ್ಧದ ಪ್ರತಿಭಟನೆ.
– ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ಮಹಾತ್ಮ ಗಾಂಧಿಯನ್ನು ತುಚ್ಛವಾಗಿ ನೋಡುವವರು ಮಾತ್ರವೇ ಶಹೀನ್‌ಬಾಘ್ ಪ್ರತಿಭಟನಾಕಾರರನ್ನು ನಿಂದಿಸಲು ಸಾಧ್ಯ. ಏಕೆಂದರೆ, ಶಹೀನ್‌ಬಾಘ್ ಮಹಾತ್ಮನನ್ನು ಪ್ರತಿಬಿಂಬಿಸುತ್ತಿದೆ. ಅವರ ಪ್ರತಿಭಟನೆಯನ್ನು ವ್ಯಂಗ್ಯವಾಡಿದರೆ ಅಹಿಂಸೆ ಮತ್ತು ಸತ್ಯಾಗ್ರಹವನ್ನು ನಿಂದಿಸಿದಂತೆ.
– ಪಿ. ಚಿದಂಬರಂ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next