Advertisement

ಕಿಚ್ಚಿಗೆ ಕರಗಿದ ಕೇಂದ್ರ? ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿಗೆ ಕೇಂದ್ರ ಚಿಂತನೆ

12:09 PM Dec 16, 2019 | sudhir |

– ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುಳಿವು
– ಜಾರ್ಖಂಡ್‌ ಚುನಾವಣಾ ರ್ಯಾಲಿಯಲ್ಲಿ ಮಾಹಿತಿ
– ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಗೃಹ ಸಚಿವರು

Advertisement

ಧನಬಾದ್‌/ರಾಂಚಿ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳು, ದೆಹಲಿ, ಪಶ್ಚಿಮ ಬಂಗಾಳ, ಬಿಹಾರ ಮುಂತಾದ ಕಡೆ ಭುಗಿಲೆದ್ದಿರುವ ಉಗ್ರ ಪ್ರತಿಭಟನೆಗಳಿಗೆ ಕೊಂಚ ಮೆದುವಾಗಿರುವ ಕೇಂದ್ರ ಸರ್ಕಾರ, ಅಗತ್ಯ ಬಿದ್ದಲ್ಲಿ ಕಾಯ್ದೆಯಲ್ಲಿನ ಕೆಲವು ಅಂಶಗಳನ್ನು ಬದಲಿಸುವುದಾಗಿ ಹೇಳಿದೆ. ಕಾಯ್ದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡ ನಂತರ, ಇದೇ ಮೊದಲ ಬಾರಿಗೆ ಕಾಯ್ದೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ವಿಷಯ ತಿಳಿಸಿದ್ದಾರೆ.

ಜಾರ್ಖಂಡ್‌ನ‌ ಗಿರಿಬಂದ್‌ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, “”ಮೇಘಾಲಯದ ಮುಖ್ಯಮಂತ್ರಿ ಕನ್ರಾಡ್‌ ಸಂಗ್ಮಾ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ನನ್ನನ್ನು ಭೇಟಿಯಾಗಿ ಕಾಯ್ದೆಯಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು. ಆಗ ನಾನು ಅವರಿಗೆ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಬಿಡಿಸಿ ಹೇಳಿದೆ. ಆದರೆ, ಅವರು ಕಾಯ್ದೆಯ ಕೆಲವು ಅಂಶಗಳಲ್ಲಿ ಬದಲಾವಣೆಯಾಬೇಕೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಮೇಘಾಲಯದ ಜನರ ಹಿತರಕ್ಷಣೆಗಾಗಿ ಕೆಲವಾರು ಬದಲಾವಣೆಗಳನ್ನು ಮಾಡುವ ಬಗ್ಗೆ ವಿಚಾರ ಮಾಡುವುದಾಗಿ ಆಶ್ವಾಸನೆ ನೀಡಿದ್ದೇನೆ” ಎಂದು ತಿಳಿಸಿದರು.

ಈ ರ್ಯಾಲಿಯ ನಂತರ ಧನ್‌ಬಾದ್‌ನಲ್ಲಿ ನಡೆದ ಮತ್ತೂಂದು ಚುನಾವಣಾ ರಾಲಿಯಲ್ಲಿ ಪೌರತ್ವ ಕಾಯ್ದೆಯ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು. “”ಪೌರತ್ವ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ನಾವು ಸಂಸತ್ತಿನಲ್ಲಿ ಮಂಡಿಸಿದ ಕೂಡಲೇ ಕಾಂಗ್ರೆಸ್ಸಿಗೆ ಹೊಟ್ಟೆಯುರಿ ಶುರುವಾಯಿತು. ದಶಕಗಳಿಂದ ನಿರಾಶ್ರಿತರಾಗಿ ನಮ್ಮ ನಡುವೆಯೇ ಬದುತ್ತಿರುವ ಜನರಿಗೆ ಪೌರತ್ವ ನೀಡುವುದು ತಪ್ಪೇ? ಇದರಿಂದ ರೊಚ್ಚಿಗೆದ್ದಿರುವ ಕಾಂಗ್ರೆಸ್‌ ಕಾಯ್ದೆಯನ್ನು ಮುಸ್ಲಿಂ ವಿರೋಧಿ ಎಂದು ಕೂಗಿಟ್ಟಿತು. ಈಶಾನ್ಯ ರಾಜ್ಯಗಳಲ್ಲಿ ಅಶಾಂತಿ ಸೃಷ್ಟಿಸಿತು” ಎಂದರು.

ಬೆಂಕಿ ಇಡುವವರನ್ನು ಅವರ ಬಟ್ಟೆಯಿಂದ ಗುರುತಿಸಬಹುದು
– ಜಾರ್ಖಂಡ್‌ನ‌ಲ್ಲಿ ವಿಪಕ್ಷಗಳ ಮೇಲೆ ಪ್ರಧಾನಿ ಮೋದಿ ಗುಡುಗು
– ಪೌರತ್ವ ವಿರೋಧಿ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಪ್ರಧಾನಿ
– ಕಾಂಗ್ರೆಸ್ಸಿಗರು, ವಿಪಕ್ಷಗಳಿಂದಲೇ ಸಮಾಜಕ್ಕೆ ಕೊಳ್ಳಿ ಎಂದ ಮೋದಿ

Advertisement

ಪೌರತ್ವ ಕಾಯ್ದೆ ವಿಚಾರವಾಗಿ ವಿವಾದ ಸೃಷ್ಟಿಸಿ, ಆ ಮೂಲಕ ಸಮಾಜದ ಶಾಂತಿಗೆ ಕೊಳ್ಳಿಯಿಡಲು ಯತ್ನಿಸುತ್ತಿರುವವರನ್ನು ಅವರು ಧರಿಸಿರುವ ಬಟ್ಟೆಗಳಿಂದಲೇ ಗುರುತಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ, ಮಾರ್ಮಿಕವಾಗಿ ಹೇಳಿದ್ದಾರೆ.

ಜಾರ್ಖಂಡ್‌ನ‌ ದುಮ್ಕಾದಲ್ಲಿ ಭಾನುವಾರ ನಡೆದ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳು ಇನ್ನಿತರೆಡೆ ಬಸ್ಸುಗಳಿಗೆ, ವಾಹನಗಳಿಗೆ ಇನ್ನಿತರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕೆಲವರು ಬೆಂಕಿ ಇಡುತ್ತಿರುವ ದೃಶ್ಯಗಳನ್ನು ಟಿವಿಗಳಲ್ಲಿ ಎಲ್ಲರೂ ನೋಡಿರುತ್ತೀರಿ. ಅವರು ಯಾರು ಎಂಬುದನ್ನು ಅವರು ಧರಿಸಿರುವ ಬಟ್ಟೆಗಳಿಂದ ತಿಳಿದುಬರುತ್ತದೆ” ಎಂದು ಕಾಂಗ್ರೆಸ್‌ ಹಾಗೂ ವಿಪಕ್ಷಗಳ ವಿರುದ್ಧ ನೇರವಾಗಿ ವಾಗ್ಧಾಳಿಗೆ ಇಳಿದರು.

“”ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಪೌರತ್ವ ಕಾಯ್ದೆ ಬಗ್ಗೆ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಎಲ್ಲೆಡೆ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿವೆ. ಆದರೆ, ಈಶಾನ್ಯ ರಾಜ್ಯಗಳ ಜನತೆ ಇವರ ಇಂಥ ಪ್ರಯತ್ನವನ್ನು ತಿರಸ್ಕರಿಸಿವೆ. ಸಂಸತ್ತಿನಲ್ಲಿ ಕಾಯ್ದೆಗೆ ಒಪ್ಪಿಗೆ ಸಿಕ್ಕ ಮೇಲೆ ಏನಾಗುತ್ತಿದೆ ಎಂದು ಇಡೀ ದೇಶವೇ ನೋಡುತ್ತಿದೆ. ಈಗ ವಿರೋಧ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿಯಿಂದ ಈ ಕಾಯ್ದೆಯು ಶೇ. 1000ದಷ್ಟು ಸರಿಯಾಗಿದೆ ಎಂಬುದನ್ನು ದೇಶದ ಜನತೆ ಅರಿತಿದ್ದಾರೆ” ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, “”ಪಾಕಿಸ್ತಾನಿಗಳು ದಶಕಗಳಿಂದ ಮಾಡುತ್ತಿರುವುದನ್ನು ಕಾಂಗ್ರೆಸ್ಸಿಗರು ಈಗ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ತಮ್ಮ ಮಾತುಗಳನ್ನು ಮುಂದುವರಿಸಿ, 370ನೇ ಕಲಂ ಹಿಂಪಡೆದಾಗ, ರಾಮಜನ್ಮಭೂಮಿ ತೀರ್ಪು ಬಂದಾಗ ಲಂಡನ್‌ನಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯ ಮುಂದೆ ಹಲವಾರು ಮಂದಿ ಬಂದು ಪ್ರತಿಭಟನೆ ನಡೆಸಿದರು. ಅವರಲ್ಲಿ ಒಬ್ಬೇ ಒಬ್ಬ ಭಾರತೀಯನನ್ನು ನೀವು ನೋಡಿದ್ದೀರಾ? ಇಲ್ಲ. ಅವರೆಲ್ಲರೂ, ಭಾರತದ ಹಿರಿಮೆಯನ್ನು ನೆಲಸಮ ಮಾಡಲು ಬಂದಿದ್ದವರು ಎಂದರು.

ಕಾಯ್ದೆ ಅರಿವಿಗಾಗಿ ದೇಶವ್ಯಾಪಿ ರ್ಯಾಲಿ: ಬಿಜೆಪಿ
ಪೌರತ್ವ ನಿಷೇಧ ಕಾಯ್ದೆಯನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ದೊಡ್ಡ ಮಟ್ಟದ ರಾಲಿಗಳನ್ನು ನಡೆಸಿ, ಪೌರತ್ವ ಕಾಯ್ದೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಬಿಜೆಪಿ ಘೋಷಿಸಿದೆ.

ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಭಿತ್‌ ಪಾತ್ರ, “”ಅಸಲಿಗೆ, ಪೌರತ್ವ ಕಾಯ್ದೆಯು ಪಾಕಿಸ್ತಾನ, ಅಪಾ^ನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ನೀಡುತ್ತದೆ. ದೇಶದಲ್ಲಿ ಈಗ ಮುಸ್ಲಿಮರಿಗೆ ಇರುವ ಹಕ್ಕುಗಳಲ್ಲಿ ಒಂದೇ ಒಂದು ಹಕ್ಕನ್ನೂ ಹೊಸ ಪೌರತ್ವ ಕಾಯ್ದೆ ಕಿತ್ತುಕೊಳ್ಳುವುದಿಲ್ಲ. ಅವರಿಗೆ ಇನ್ನೂ ಹೆಚ್ಚಿನ ಹಕ್ಕುಗಳನ್ನು ಕೊಡುತ್ತದೆ. ಹೀಗಿದ್ದರೂ, ಕಾಯ್ದೆಯ ಬಗ್ಗೆ ಅಪಪ್ರಚಾರ, ತಪ್ಪು ಕಲ್ಪನೆ ಹಾಗೂ ಅಪನಂಬಿಕೆಗಳು ಜನರನ್ನು ಕಾಡುತ್ತಿವೆ. ಹಾಗಾಗಿ, ಎಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಲಿಗಳನ್ನು ನಡೆಸಿ ಜನರಲ್ಲಿ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುತ್ತದೆ” ಎಂದು ತಿಳಿಸಿದರು.

ಬಸ್‌ಗಳಿಗೆ ಬೆಂಕಿ:
ಪೌರತ್ವ ಕಾಯ್ದೆ ಬೆಂಕಿ ರಾಜಧಾನಿ ದೆಹಲಿಯಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಥುರಾ ರಸ್ತೆಯ ಎದುರುಗಡೆಯ ನ್ಯೂ ಫ್ರೆಂಡ್ಸ್‌ ಕಾಲೋನಿಯಲ್ಲಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು ಮೂರು ಸರ್ಕಾರಿ ಬಸ್‌ಗಳಿಗೆ ಹಾಗೂ ಒಂದು ಅಗ್ನಿಶಾಮಕ ದಳದ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್‌ ಹಾಗೂ ಅಶ್ರುವಾಯು ಸೆಲ್‌ ಸಿಡಿಸಿದ್ದರ ಪರಿಣಾಮ ಕ್ಯಾಂಪಸ್‌ನಿಂದ ಹೊರಗೋಡಿ ಬಂದ ವಿದ್ಯಾರ್ಥಿಗಳು ನ್ಯೂ ಫ್ರೆಂಡ್ಸ್‌ ಕಾಲೋನಿಯಲ್ಲಿ ದಾಂದಲೆ ನಡೆಸಿ, ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಶಾಂತಿಗಾಗಿ ಮನವಿ ಮಾಡಿದ್ದಾರೆ.

ಅತ್ತ ಪಶ್ಚಿಮ ಬಂಗಾಳದಲ್ಲೂ ಹಿಂಸೆ ಮುಂದುವರಿದಿದೆ. ಐದು ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ ಮಾಡಲಾಗಿದೆ. ಈ ಮಧ್ಯೆ ಅಸ್ಸಾಂನಲ್ಲಿ ಪೊಲೀಸ್‌ ಗೋಲಿಬಾರ್‌ಗೆ ಸತ್ತವರ ಸಂಖ್ಯೆ 6ಕ್ಕೇರಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿರುವ ಜಾಮಿಯಾ ವಿವಿಯೊಳಗೆ ಪೊಲೀಸರು ನುಗ್ಗಿದ್ದಾರೆ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next