Advertisement

ಪೌರತ್ವ ಕಾಯ್ದೆ ದೇಶದ ಅಗತ್ಯ : ಸಚಿವ ಸಿ.ಟಿ.ರವಿ

10:18 AM Dec 15, 2019 | Sriram |

ಬೆಂಗಳೂರು: ನಮ್ಮ ದೇಶದಲ್ಲಿ ಎಲ್ಲವನ್ನೂ ರಾಜಕೀಕರಣಗೊಳಿಸಲಾಗುತ್ತದೆ. ಕಾಂಗ್ರೆಸ್‌ ಮಾಡಿದ ಎರಡು ಪ್ರಮಾದದಿಂದ ಇಷ್ಟೆಲ್ಲ ಸಮಸ್ಯೆ ಎದುರಾಗಿದೆ. ಹತ್ತಾರು ವರ್ಷಗಳಿಂದ ನಿರಾಶ್ರಿತರಾಗಿರುವ ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ಥಾನದ ಅಲ್ಪಸಂಖ್ಯಾಕರಿಗೆ ಭಾರತದ ಪೌರತ್ವ ನೀಡುವುದು ಅಗತ್ಯ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ದೇಶ ವಿಭಜನೆಗೆ ವಿರುದ್ಧವಾಗಿದ್ದ ಕಾಂಗ್ರೆಸ್‌ ಅನಂತರ ವಿಭಜನೆಗೆ ಒಪ್ಪಿತು. ದೇಶ ವಿಭಜನೆಯ ವಿರುದ್ಧ ಹೋರಾಟವನ್ನು ಮಾಡಿಲ್ಲ. ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಆಶಯದಂತೆ ಸಂಪೂರ್ಣ ವಿಭಜನೆಗೂ ಅವಕಾಶ ನೀಡಿಲ್ಲ. ಪಾಕಿ ಸ್ಥಾನದಲ್ಲಿದ್ದ ಶೇ.23ರಷ್ಟು ಹಿಂದೂಗಳು ಈಗ ಶೇ.2ಕ್ಕೆ ಇಳಿದಿದ್ದಾರೆ. ಅಲ್ಲಿರುವ ಅಲ್ಪಸಂಖ್ಯಾಕರ ಮುಂದಿರುವುದು ಮತಾಂತರ, ಸಾವು ಅಥವಾ ದೇಶ ಬಿಟ್ಟು ಬರುವುದು. ಈ ಮೂರು ದಾರಿ ಬಿಟ್ಟರೆ ಬೇರೆ ಗತಿಯಿಲ್ಲ. ಮತೀಯ ಕಾರಣಕ್ಕೆ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ಸೃಷ್ಟಿಯಾಗಿದೆ. ಹಿಂದೂ, ಬೌದ್ಧ, ಸಿಕ್ಖ್ ಮತೀಯ ಕಾರಣಕ್ಕೆ ಅಲ್ಲಿ ಟಾರ್ಗೆಟ್‌ ಆಗಿದ್ದಾರೆ. ತಮ್ಮನ್ನು ತಾವು ನಿರಾಶ್ರಿತರು ಎಂದು ಘೋಷಣೆ ಮಾಡಿಕೊಂಡಿರುವವರಿಗೆ ಪೌರತ್ವ ಕೊಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಅಕ್ರಮ ನುಸುಳುಕೋರರಿಗೆ ಆಧಾರ್‌ ಕಾರ್ಡ್‌, ಮತದಾರರ ಚೀಟಿ, ರೇಷನ್‌ ಕಾರ್ಡ್‌ ನೀಡಲಾಗಿದೆ. ನಿರಾಶ್ರಿತರಿಗೆ ಪೌರತ್ವ ನೀಡದೇ ಇರುವುದು ಮಾನವೀಯತೆ ಅಲ್ಲ. ಇಲ್ಲಿ ಹುಟ್ಟಿ ಬದುಕಿ, ಬಾಳಿದ ಮುಸ್ಲಿಂ, ಕ್ರಿಶ್ಚಿಯನ್‌ ಅಥವಾ ಹಿಂದೂಗಳ ಹಕ್ಕನ್ನು ಇದು ಕಿತ್ತುಕೊಂಡಿಲ್ಲ. ಸಂವಿಧಾನ ಏನೇನು ನೀಡಿದೆಯೋ ಅವೆಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮತ್ತು ಬಲೂಚಿಸ್ಥಾನದಿಂದ ಮತೀಯ ಕಾರಣಕ್ಕೆ ನಿರಾಶ್ರಿತರಾಗಿ ಬಂದಿರುವ ಆ ದೇಶಗಳ ಅಲ್ಪಸಂಖ್ಯಾಕರಿಗೆ ಪೌರತ್ವ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಅಲ್ಲಿನ ಮುಸ್ಲಿಮರು ಮತೀಯ ಕಾರಣದಿಂದ ಅಥವಾ ನಿರಾಶ್ರಿತರಾಗಿ ಬಂದಿಲ್ಲ. ನುಸುಳುಕೋರರಾಗಿ ಬಂದಿದ್ದಾರೆ. ಹೀಗಾಗಿ ಅವರಿಗೆ ಪೌರತ್ವ ನೀಡುವ ಪ್ರಶ್ನೆ ಬರುವುದಿಲ್ಲ. ನಿರಾಶ್ರಿತರಿಗೂ ನುಸುಳುಕೋರರಿಗೂ ವ್ಯತ್ಯಾಸವಿದೆ ಎಂದರು.

ಅಲ್ಲಿನವರು ಅಲ್ಪಸಂಖ್ಯಾಕರ ಮೇಲೆ ಸಾಮೂಹಿಕವಾಗಿ ಕ್ರೂರ ವರ್ತನೆ ನಡೆಸಿದ್ದಾರೆ(ಎಲ್ಲೋ ಕೆಲವರು ಒಳ್ಳೆಯವರು ಇರಬಹುದು). ಇಲ್ಲೂ ಕ್ರೂರಿಯಾಗಿ ವರ್ತನೆ ಮಾಡಿದ್ದಾರೆ. ಆದರೆ ಭಾರತದಲ್ಲಿ ಅಲ್ಪಸಂಖ್ಯಾಕರ ಮೇಲೆ ಸಾಮೂಹಿಕವಾಗಿ ನಿರಂತರ ಕ್ರೂರತನದ ಪ್ರವೃತ್ತಿ ನಡೆದಿಲ್ಲ. ಇದು ಭಾರತ ಮತ್ತು ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ಥಾನಕ್ಕೆ ಇರುವ ವ್ಯತ್ಯಾಸವಾಗಿದೆ. ಈ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುತ್ತೇವೆ ಮತ್ತು ಕಾಂಗ್ರೆಸ್‌ನ ಸಂಚನ್ನು ಬಯಲಿಗೆ ಎಳೆಯುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next