ಗುಂಡ್ಲುಪೇಟೆ: ಪಟ್ಟಣದ ಹಲವು ಬಡಾವಣೆಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ನಾಗರಿಕರಿಗೆ ಕಿರಿಕಿರಿಯುಂಟಾಗುತ್ತಿದ್ದು ಹಂದಿ ಹಾವಳಿಗೆ ಬ್ರೇಕ್ ಹಾಕುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ.
ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು ಅಶುಚಿತ್ವ ತಾಂಡವವಾಡುತ್ತಿದೆ. ಪ್ರಮುಖ ಬಡಾವಣೆಗಳಾದ ಕೆ.ಎಸ್.ನಾಗರತ್ನಮ್ಮ ಬಡಾವಣೆ, ದ.ರಾ.ಬೇಂದ್ರೆ ನಗರ, ಅಶ್ವಿನಿ ಬಡಾವಣೆ, ವೆಂಕಟೇಶ್ವರ ಚಿತ್ರಮಂದಿರ, ಹಳೇ ಆಸ್ಪತ್ರೆ ರಸ್ತೆ, ಪೊಲೀಸ್ ಠಾಣೆ ರಸ್ತೆಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, ಪಾದಾಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಮಿತಿ ಮೀರಿದ ಹಂದಿಗಳು: ಪ್ರತಿ ನಿತ್ಯ ಮುಂಜಾನೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ. ಪ್ರಮುಖವಾಗಿ ಕುರುಬಗೇರಿಯ ಶಾಲೆಯ ಮುಂಭಾಗದ ರಸ್ತೆ, ಕೆ.ಎಸ್.ನಾಗರತ್ನಮ್ಮ ಬಡಾವಣೆಯ ಅಡ್ಡರಸ್ತೆಗಳು ಮತ್ತು ಪೊಲೀಸ್‌ಠಾಣೆಯ ಮುಂಭಾಗದ ರಸ್ತೆ ಸೇರಿದಂತೆ ದ.ರಾ.ಬೇಂದ್ರೆ ನಗರದಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದೆ.
ಸಾಂಕ್ರಾಮಿಕ ರೋಗದ ಭೀತಿ: ಎಲ್ಲೆಂದರಲ್ಲಿ ಕೊಳಕು ಮಾಡುತ್ತಾ ಓಡಾಡುವ ಹಂದಿಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭಯ ಜನರಲ್ಲಿ ಮೂಡಿದೆ. ಪ್ರತಿನಿತ್ಯ ಶಾಲಾಮಕ್ಕಳು ಮತ್ತು ಪಾದಾಚಾರಿಗಳು ಭಯದಿಂದಲೇ ಓಡಾಡ ಬೇಕಾದ ಪರಿಸ್ಥಿತಿ ಇದೆ.
ಮನವಿ ಮಾಡಿದ್ರು ಕ್ರಮ ಕೈಗೊಂಡಿಲ್ಲ: ಈ ಬಗ್ಗೆ ಪುರಸಭೆ ಸದಸ್ಯರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಪುರಸಭೆ ಆರೋಗ್ಯ ನಿರೀಕ್ಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ನಾಗರಿಕರು ಮನವಿ ಮಾಡಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂದಿಯ ಮಾಲೀಕರಿಗೆ ನೋಟಿಸ್ ನೀಡಿ ಅಡ್ಡಾದಿಡ್ಡಿಯಾಗಿ ಹಂದಿಗಳು ಬಡಾವಣೆಯ ಸುತ್ತಲೂ ಓಡಾಡುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಿ.
ಪ್ರತಿನಿತ್ಯ ನಮ್ಮ ಬಡಾವಣೆಯಲ್ಲಿ ಹಂದಿಗಳು ರಸ್ತೆಯಲ್ಲಿ ಮಲಗಿರುತ್ತವೆ. ಅವುಗಳನ್ನು ಓಡಿಸಲು ಹೋದರೆ ನಮ್ಮ ಮೇಲೆಯೇ ಎರಗಲು ಬರುತ್ತವೆ. ಇದರಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರೊಂದಿಗೆ ಸಾಂಕ್ರಾಮಿಕ ಕಾಯಿಲೆಯ ಭೀತಿ ನಮ್ಮಲ್ಲಿ ಆವರಿಸುತ್ತಿದೆ. ಈ ಬಗ್ಗೆ ಪುರಸಭೆ ತುರ್ತು ಕ್ರಮ ಕೈಗೊಳ್ಳಲಿ.
-ಶ್ರೀನಿವಾಸ್, ಕೆಎಸ್‌ಎನ್ ಬಡಾವಣೆ
ಹಂದಿಗಳ ಹಾವಳಿ ಬಗ್ಗೆ ನಮಗೆ ದೂರು ಬಂದಿದ್ದು, ತುರ್ತಾಗಿ ಹಂದಿ ಮಾಲೀಕರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು.
-ರಮೇಶ್, ಮುಖ್ಯಾಧಿಕಾರಿ, ಪುರಸಭೆ
* ಸೋಮಶೇಖರ್.ಎಸ್