Advertisement

ಕಾಮಗಾರಿ ವಿಳಂಬಕ್ಕೆ ನಾಗರಿಕರ ಆಕ್ರೋಶ

02:15 PM Oct 23, 2019 | Suhan S |

ತುಮಕೂರು: ನಗರದಲ್ಲಿ ಮುಖ್ಯರಸ್ತೆಗಳು ಸೇರಿ ವಿವಿಧ ವಾರ್ಡ್‌, ಬಡಾವಣೆಗಳಲ್ಲಿ ಸ್ಮಾರ್ಟ್‌ ಸಿಟಿಯಡಿ ನಡೆಯುತ್ತಿರುವ ವಿವಿಧ ಕಾಮಗಾರಿ ವಿಳಂಬಕ್ಕೆ ನಾಗರಿಕರು ಹಾಗೂ ಪಾಲಿಕೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಬೆಸ್ಕಾಂ, 24×7 ಕುಡಿಯುವ ನೀರಿನ ಸರಬ ರಾಜು, ಉಜ್ವಲ ಯೋಜನೆಯಡಿ ಮನೆಮನೆಗೆ ಗ್ಯಾಸ್‌ ಸಂಪರ್ಕ ಕಲ್ಪಿಸಲು ವಿವಿಧ ಭಾಗಗಳಲ್ಲಿ ಹಳ್ಳ ತೆಗೆದು ಹಾಗೆ ಬಿಡಲಾಗುತ್ತಿದೆ. ಅಲ್ಲದೆ ಒಂದು ಕಡೆ ಹಳ್ಳ ಮುಚ್ಚಿದರೆ ಇನ್ನೊಂದು ಕಡೆ ಹಳ್ಳ ತೆಗೆ ಯುತ್ತಾರೆ. ಯಾರು ಯಾವ ಕಾಮಗಾರಿ ಮಾಡು ತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು 15ನೇ ವಾರ್ಡ್‌ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಆರೋಪಿಸಿದ್ದಾರೆ.

ಗುಂಡಿ ಅಗೆಯುವುದೇ ಕೆಲಸ!: ಸ್ಮಾರ್ಟ್‌ಸಿಟಿ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆ, ಯಾವ ಹಂತದಲ್ಲಿದೆ. ಎಂಬುದು ಏನು ತಿಳಿಯದಾಗಿದೆ. ಒಂದು ಕಡೆ ಗುಂಡಿ ಅಗೆದು ಹೋಗಿರುತ್ತಾರೆ. ಮತ್ತೂಂದು ಕಡೆ ಪೈಪ್‌ಲೈನ್‌ ಹಾಕುತ್ತಿರುತ್ತಾರೆ. ಇನ್ನೊಬ್ಬರು ಗ್ಯಾಸ್‌ ಲೈನ್‌ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಒಬ್ಬರಿಗೊಬ್ಬರೂ ತಮ್ಮ ಪಾಡಿಗೆ ತಾವು ಬಂದು ಗುಂಡಿ ತೆಗೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಗಳಿಗೆ ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

15ನೇ ವಾರ್ಡ್‌ನ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದು ವಾರದಲ್ಲಿ ಒಳಚರಂಡಿ ಕಾಮಗಾರಿ ಮುಗಿಸುತ್ತೇವೆ ಹೇಳಿದ್ದ ಗುತ್ತಿಗೆದಾರರು ಒಂದು ತಿಂಗಳಾದರೂ ಮುಗಿಸಿಲ್ಲ. ವಾರದಲ್ಲಿ ಮುಗಿಯಬೇಕಿದ್ದ ಕಾಮಗಾರಿ ತಿಂಗಳಾದರೂ ನಡೆಯುತ್ತಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲೇ ಇರುವ ದೇವಸ್ಥಾನದ ಒಳಕ್ಕೆ ಮಳೆ ನೀರು, ಚರಂಡಿನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಈ ಬಗ್ಗೆ ನಾವು ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ಸಬೂಬು ನೀಡುತ್ತಾರೆ. ಆದರೆ ಜನರು ನಮ್ಮ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ ಎಂದು ಗಿರಿಜಾ ಧನಿಯಾಕುಮಾರ್‌ ಬೇಸರಿಸಿದರು.

ತಿಂಗಳಾದರೂ ಕಾಮಗಾರಿ ಮುಗಿದಿಲ್ಲ: ಅರ್ಚಕ ಮಾತನಾಡಿ, ದೇವಾಲಯಕ್ಕೆ ಹೆಚ್ಚು ಭಕ್ತರುಬರುತ್ತಾರೆ. ಈ ನಿಟ್ಟಿನಲ್ಲಿ ಕಾಮಗಾರಿ ಬೇಗ ಮುಗಿಸುವಂತೆ ಮನವಿ ಮಾಡಿದಾಗ ವಾರದಲ್ಲಿ ಮುಗಿಸುವ ಭರವಸೆ ಕೊಟ್ಟಿದ್ದರು. ಆದರೆ ಒಂದು ತಿಂಗಳಾದರೂ ಕಾಮಗಾರಿ ಮುಗಿದಿಲ್ಲ. ಮಳೆಯಿಂದ ದೇವಾಲಯದ ಒಳಗೆ ಮಳೆ ನೀರು ನುಗ್ಗುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next