Advertisement
ಸರಿಯಾಗಿ 50 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ ದಿ. ಅಜಯ್ ಮುಖರ್ಜಿ ತಮ್ಮದೇ ಸರಕಾರದಿಂದ ಕಾನೂನು ಸುವ್ಯವಸ್ಥೆಗೆ ಭಂಗವಾಗಿದ್ದನ್ನು ಖಂಡಿಸಿ 3 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು!ಇದನ್ನು ನಂಬಲು ಕಷ್ಟವಾದರೂ, ಸತ್ಯ ಸಂಗತಿಯಾಗಿತ್ತು. ಬಾಂಗ್ಲಾ ಕಾಂಗ್ರೆಸ್ ಎಂಬ ಪಕ್ಷದ ಮುಖ್ಯಸ್ಥರಾಗಿದ್ದ ಅಜಯ್ ಮುಖರ್ಜಿ ಅವರು ಸಿಪಿಐಎಂ ಪ್ರಮುಖ ಪಾಲುದಾರನಾಗಿದ್ದ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ ಭುಗಿಲೆದ್ದಿದ್ದ ದಂಗೆಯನ್ನು ನಿಯಂತ್ರಿಸಲು ಗೃಹ ಸಚಿವರಾಗಿದ್ದ ಸಿಪಿಎಂ ಮುಖಂಡ ಜ್ಯೋತಿ ಬಸು ಅವರು ಸಹಕರಿಸಿಲ್ಲ ಎಂಬುದನ್ನು ಖಂಡಿಸಿ ಅಜಯ್ ಮುಖರ್ಜಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಮೈತ್ರಿಪಕ್ಷದ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಹರೇಕೃಷ್ಣ ಕೋನಾರ್ ಮತ್ತು ಕಾರ್ಮಿಕ ಸಚಿವರಾಗಿದ್ದ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ನಾಯಕರಾಗಿದ್ದ ಸುಬೋಧ್ ಬ್ಯಾನರ್ಜಿ ಅವರು ಭೂಮಾಲಕರಿಂದ ಬಲವಂತವಾಗಿ ಭೂಸ್ವಾಧೀನ ಮಾಡಲು, ಕೈಗಾರಿಕೋದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಘೇರಾವ್ ಹಾಕಲು ಬಹಿರಂಗವಾಗಿಯೇ ಸಹಕಾರ ನೀಡಿದ್ದರು. ಈ ಕಾರಣದಿಂದ ಎದ್ದಿದ್ದ ದಂಗೆಯನ್ನು ನಿಯಂತ್ರಿಸಲು ಪೊಲೀಸರಿಗೆ ಸೂಚನೆ ನೀಡಲು ಗೃಹಸಚಿವರಿಗೆ ಮುಖ್ಯಮಂತ್ರಿ ಸಲಹೆ ನೀಡಿದರೂ ಅದನ್ನು ಗೃಹ ಸಚಿವರಾಗಿದ್ದ ಜ್ಯೋತಿಬಸು ತಿರಸ್ಕರಿಸಿದ್ದರು. ಈ ಕಾರಣದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟದ್ದನ್ನು ಖಂಡಿಸಿ ಅಜಯ್ ಮುಖರ್ಜಿ ಉಪವಾಸ ಕೂತಿದ್ದರು.
Related Articles
Advertisement
ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರÂಪೂರ್ವದಲ್ಲೂ ಇಂಥ ಹಲವು ಸರಕಾರಿ ಪ್ರಾಯೋಜಿತ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. 1946ರಲ್ಲಿ ಇಲ್ಲಿನ ಮುಖ್ಯಮಂತ್ರಿಯಾಗಿದ್ದ ಮುಸ್ಲಿಂ ಲೀಗಿನ ಎಚ್. ಎಸ್. ಸುಹ್ರಾವರ್ಡಿ ಅವರು, ದೇಶ ವಿಭಜನೆಯ ಗುರಿ ಸಾಧನೆಗಾಗಿ ಮಹಮ್ಮದ್ ಅಲಿ ಜಿನ್ನಾ ಅವರು ಕರೆ ನೀಡಿದ್ದ ನೇರ ಕ್ರಮಕ್ಕೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದರ ಪರಿಣಾಮವಾಗಿ ಕೋಲ್ಕತಾದಲ್ಲಿ 1946ರ ಆ. 16ರಂದು ಹಿಂದೂಗಳ ದೊಡ್ಡ ಹತ್ಯಾಕಾಂಡ ನಡೆದಿತ್ತು. ಅದರ ಮುಂದಿನ ವರ್ಷ ಇಂಥ ಹಿಂದೂಗಳ ಹತ್ಯಾಕಾಂಡವು ನೋಖಲಿ ನಗರದಲ್ಲಿ ನಡೆದಿತ್ತು. ಈ ಅಮಾನವೀಯ ಮತ್ತು ಅತಿ ಕ್ರೂರ ಕೃತ್ಯಕ್ಕೆ ದೇವರು ಕೂಡ ಕೋಪಗೊಂಡಿದ್ದರು ಹಾಗೂ ಆ ಕೋಪವನ್ನು 1951ರಲ್ಲಿ ಮೇಘನಾ ನದಿಯನ್ನು ಉಕ್ಕಿ ಹರಿಯಿಸಿ ಮಹಾನೆರೆಯ ಮೂಲಕ ನೋಖಲಿ ನಗರವನ್ನು ಧ್ವಂಸ ಮಾಡುವ ಮೂಲಕ ತೋರಿಸಿದ್ದರು ಎಂಬ ಮಾತು ಜನರಿಂದ ಕೇಳಿ ಬಂದಿತ್ತು. ಈ ಪ್ರದೇಶವು ಈಗ ಬಾಂಗ್ಲಾದಲ್ಲಿದೆ. ಸುಹ್ರಾವರ್ಡಿ ಅವರು ಬಳಿಕ (1956-57)ಪಾಕಿಸ್ತಾನದ ಪ್ರಧಾನಿಯಾಗಿದ್ದರು. ನಂತರ ನಮ್ಮ ದೇಶದ ಪ್ರಮುಖ ನಾಯಕರೊಂದಿಗೆ ನೋಖಲಿಗೆ ತೆರಳಿ ಹಿಂದೆ ನಡೆದಿದ್ದ ಹಿಂದೂಗಳ ಮಹಾ ಹತ್ಯಾಕಾಂಡಕ್ಕೆ ಮೊಸಳೆ ಕಣ್ಣೀರು ಹಾಕಿದ್ದರು.
ಮಮತಾ ಬ್ಯಾನರ್ಜಿ ಹೋರಾಟಗಾರ್ತಿ50 ವರ್ಷಗಳ ಹಿಂದೆ ಅಜಯ್ ಮುಖರ್ಜಿ ನಡೆಸಿದ್ದ ಉಪವಾಸ ಆಗಿನ ಸ್ಥಿತಿಯನ್ನು ಗಮನಿಸಿದಾಗ ಅಗತ್ಯವಿತ್ತು ಎನ್ನಬಹುದು. ಆದರೆ ಈಗಿನ ಮಮತಾ ಬ್ಯಾನರ್ಜಿ ಪ್ರತಿಭಟನೆಯ ವಿಷಯದಲ್ಲಿ ಅಂಥ ಸಮರ್ಥನೆ ಕಷ್ಟ. ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಪ್ರಗತಿಗಾಗಿ ದುಡಿಯಬೇಕು. ಈಗ ದೇಶ ಪ್ರಕ್ಷುಬ್ಧವಾಗಿದ್ದು, ಸಣ್ಣ ಪ್ರಚೋದನೆಯೂ ಹಿಂಸಾರೂಪ ತಾಳಬಹುದು. ಮಮತಾ ಬ್ಯಾನರ್ಜಿ ಅವರ ಒಂದು ಸಮಸ್ಯೆ ಏನೆಂದರೆ, ಅವರು ಈಗಲೂ ಉತ್ತಮ ಹೋರಾಟಗಾರರಾಗಿದ್ದಾರೆಯೇ ಹೊರತು ಆಡಳಿತಗಾರರಲ್ಲ. ತಾನೀಗಲೂ ಛಾತ್ರ ಪರಿಷತ್ (ಪಶ್ಚಿಮ ಬಂಗಾಳದ ಹಿಂದಿನ ಕಾಂಗ್ರೆಸ್ ವಿದ್ಯಾರ್ಥಿ ಘಟಕ) ನಾಯಕಿಯಾಗಿದ್ದೇನೆ ಎಂಬಂತಿದೆ ಮಮತಾರ ವರ್ತನೆ. ತಾನು ಈಗ ಹೊಂದಿರುವ ಹುದ್ದೆಯ ಘನತೆಗೆ ತಕ್ಕುದಲ್ಲದ ಭಾಷೆ, ವರ್ತನೆ, ಹಾವಭಾವವನ್ನು ಅವರು ತೋರಿಸುತ್ತಿದ್ದಾರೆ. ಬಂಗಾಳ ಪರವಾದ ಸಂಕುಚಿತ ಭಾವನೆ ಹೊಂದಿರುವ ಮಮತಾ ಅವರು ತೀಸ್ತಾ ನದಿ ವಿವಾದವನ್ನು ಪರಿಹರಿಸಲು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಜತೆಗೆ ಬಾಂಗ್ಲಾಕ್ಕೆ ಹೋಗಲೂ ನಿರಾಕರಿಸಿದ್ದರು. ಈಚೆಗೆ ಪ್ರಕರಣವೊಂದರಲ್ಲಿ ಕೋಲ್ಕತಾದ ಪೊಲೀಸ್ ಕಮಿಷನರ್‌ನನ್ನು ಬಂಧಿಸಲು ಬಂದಿದ್ದ ಸಿಬಿಐ ಅಧಿಕಾರಿಗಳಿಗೂ ತಡೆಯೊಡ್ಡಿ ಮಮತಾ ಸುದ್ದಿಯಾಗಿದ್ದರು. ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗಲೂ ಕೆಲವು ಸಂಕುಚಿತ ವರ್ತನೆಯಿಂದ ಸುದ್ದಿಯಾಗಿದ್ದರು. ಆಕೆ ತನ್ನ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯದತ್ತ ದೃಷ್ಟಿ ಹರಿಸಿರಲೇ ಇಲ್ಲ. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ಮಮತಾ ಬ್ಯಾನರ್ಜಿ ಅವರ ವಿರೋಧಕ್ಕೆ ಕಾರಣವೇನು ಎಂಬುದಕ್ಕೆ ತುಂಬಾ ಆಲೋಚಿಸುವ ಅಗತ್ಯವೇನೂ ಇಲ್ಲ. ಅವರಿಗೆ ತನ್ನ ರಾಜ್ಯದಲ್ಲಿರುವ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಪಶ್ಚಿಮ ಬಂಗಾಳದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 27ರಷ್ಟಿದೆ. ಅಲ್ಲಿನ 19 ಜಿಲ್ಲೆಗಳ ಪೈಕಿ 3ರಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಆ ಮೂರು ಜಿಲ್ಲೆಗಳೆಂದರೆ ಮಾಲ್ಡ (ಶೇ. 51), ಮುರ್ಶಿದಾಬಾದ್ (ಶೇ. 66) ಮತ್ತು ಉತ್ತರ ದಿನಾಜ್‌ಪುರ್ (ಶೇ. 50). ಅಲ್ಲದೆ ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಈ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯೂ ವೇಗವಾಗಿ ವರ್ಧಿಸುತ್ತಿದೆ. ಬಾಂಗ್ಲಾದಲ್ಲಿ ಮುಸ್ಲಿಮರನ್ನು ದಮನ ಮಾಡುವ ಯಾವ ಶಕ್ತಿಯೂ ಇಲ್ಲ. ಅವರಿಗೆ ಅಲ್ಲಿ ಬದುಕಲು ಯಾವುದೇ ಕಷ್ಟವಿಲ್ಲ. ಆದರೆ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಸಂಕಷ್ಟದಿಂದಿದೆ. ಅವರನ್ನು ಅಲ್ಲಿಂದ ಹೊರದಬ್ಬುವ, ಶೋಷಿಸುವ ಕೆಲಸಗಳಾಗುತ್ತಿವೆ. ಪಾಕಿಸ್ಥಾನದ ವಿಷಯ ಬಿಡಿ, ಬಾಂಗ್ಲಾದಲ್ಲಿ ಎಷ್ಟು ಹಿಂದೂ ನಾಯಕರು ಮಂತ್ರಿಯಾಗಿದ್ದಾರೆ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳುತ್ತಿದ್ದಾರೆಯೇ? ಅಲ್ಲಿನ ಏಕೈಕ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹ ಎಂಬವರನ್ನು 2017ರಲ್ಲಿ ಕಾನೂನು ತಿದ್ದುಪಡಿ ಮಾಡಿ, ನ್ಯಾಯಮೂರ್ತಿಗಳನ್ನು ಬದಲಾಯಿಸಲು ಸಂಸತ್ತಿಗೆ ವಿಶೇಷ ಅಧಿಕಾರ ನೀಡಿ ರಾಜೀನಾಮೆ ಕೊಡಿಸಿ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಗಾಂಧೀಜಿ ಕಾಲದ ಮೊದಲು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಅಂಬಿಕಾ ಚರಣ್ ಮುಜುಂದಾರ್ ಎಂಬುವರ ಸಂಬಂಧಿಯಾಗಿದ್ದ ಬಾಬು ಫಣಿಭೂಷಣ್ ಮುಜುಂದಾರ್ ಬಾಂಗ್ಲಾದ ಪ್ರಮುಖ ಹಿಂದೂ ರಾಜಕಾರಣಿಯಾಗಿದ್ದರು. – ಅರಕೆರೆ ಜಯರಾಮ್