ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ಅಧೀಕ್ಷಕರನ್ನು ನೇಮಿಸಿ: ತಿಲಕ್‌ನಗರದಲ್ಲಿರುವ ಸರ್ಕಾರಿ ಅಂಧಮಕ್ಕಳ ಶಾಲಾ ಆವರಣದಲ್ಲಿ ತಮ್ಮ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಈ ಹಿಂದೆ ಶಾಲೆಯ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಸತೀಶ್ ಅವರನ್ನೇ ಅಧೀಕ್ಷಕರನ್ನಾಗಿ ಮರು ನೇಮಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪರಿಸರವಾದಿ ಸಿ.ನಾಗಣ್ಣ, ಮಕ್ಕಳ ಹಕ್ಕುಗಳ ಹೋರಾಟಗಾರ ಈ.ಧನಂಜಯ ಎಲಿಯೂರು, ಪೋಷಕರಾದ ನಾಗಮ್ಮ, ಗೋಪಾಲ್, ನಾಗೇಂದ್ರ, ಮರಿಯಪ್ಪ, ಸುಮಾ, ಸಿದ್ದರಾಮ, ವಿದ್ಯಾರ್ಥಿಗಳಾದ ಧನುಷ್, ನವೀನ, ಅಶೋಕ, ಮನುಕುಮಾರ್, ಅಭಿಷೇಕ್, ಪ್ರಜ್ವಲ್, ಮಂಜಪ್ಪ, ಶಿವು, ಮಂಜುನಾಥ್, ಮಣಿಕಂಠ, ಧರ್ಮ, ವಿಜಯ, ಶಿವುಮೂರ್ತಿ, ಮಂಜುನಾಥ್, ಗಂಗಾಧರ, ಮಂಜಪ್ಪ ಇತರರಿದ್ದರು.
ಮಾಲಿಕರ ವಿರುದ್ಧ ಕಿಡಿ: ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ಗುತ್ತಿಗೆ ಆಧಾರದಲ್ಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸದೆ ವಿನಾಕಾರಣ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಕಾರ್ಖಾನೆ ಮಾಲಿಕರುಗಳ ವರ್ತನೆಯನ್ನು ಖಂಡಿಸಿ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದರು.
ನಗರದ ಯಾದವಗಿರಿ, ಹೆಬ್ಟಾಳು, ಹೂಟಗಳ್ಳಿ, ಮೇಟಗಳ್ಳಿ, ಕೂರ್ಗಳ್ಳಿ ಮತ್ತು ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಸಮಸ್ಯೆಗಳು ಹಾಗೂ ಕಷ್ಟಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಸಂಘವನ್ನು ರಚಿಸಿಕೊಂಡಿದ್ದಾರೆ. ಆದರೆ ಇದನ್ನು ಸಹಿಸದ ಕೆಲವು ಕಾರ್ಖಾನೆಗಳ ಮಾಲಿಕರು ಕಾರ್ಮಿಕ ಸಂಘದಲ್ಲಿ ಗುರುತಿಸಿಕೊಂಡಿರುವ ಕಾರ್ಮಿಕರನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕುತ್ತಿರುವುದು ಖಂಡನೀಯ.
ಇನ್ನೂ ಕೆಲವು ಕಾರ್ಮಿಕರನ್ನು ಬೇಕಂತಲೇ ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೊಂದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನ್ಯಾಯ ಕೊಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.