Advertisement

Indian circus: ಜೆಮಿನಿ ಸರ್ಕಸ್ ಸಂಸ್ಥಾಪಕ ಎಂವಿ ಶಂಕರನ್ ನಿಧನ

02:44 PM Apr 24, 2023 | Suhan S |

ಕಣ್ಣೂರು: ಜೆಮಿನಿ ಸರ್ಕಸ್ ಸಂಸ್ಥಾಪಕ ಜೆಮಿನಿ ಶಂಕರನ್ ಅಲಿಯಾಸ್ ಎಂವಿ ಶಂಕರನ್ (99)  ಅವರು ಭಾನುವಾರ ಕಣ್ಣೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Advertisement

ಭಾರತೀಯ ಸರ್ಕಸ್‌ನ ಪ್ರವರ್ತಕರಾಗಿದ್ದ ಜೆಮಿನಿ ಶಂಕರನ್, ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಭಾನುವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.

1924 ರಲ್ಲಿ ಹುಟ್ಟಿದ ಅವರು, ಮೂರು ವರ್ಷಗಳ ಕಾಲ ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರಲ್ಲಿ ತರಬೇತಿ ಪಡೆದು, ನಂತರ ಮಿಲಿಟರಿಗೆ ಸೇರಿ, ಎರಡನೇ ಮಹಾಯುದ್ದದ ನಂತರ ನಿವೃತ್ತರಾಗಿದ್ದರು.

ನ್ಯಾಷನಲ್ ಸರ್ಕಸ್ ಮತ್ತು ಗ್ರೇಟ್ ಬಾಂಬೆ ಸರ್ಕಸ್‌ ಸೇರಿದಂತೆ ದೇಶದ ನಾನಾ ಸರ್ಕಸ್‌ ಕಂಪೆನಿಗಳಲ್ಲಿ ಕೆಲಸ ಮಾಡಿದ ಅವರು, ಸ್ನೇಹಿತನೊಂದಿಗೆ ಸೇರಿ 1951 ರಲ್ಲಿ ವಿಜಯ ಸರ್ಕಸ್‌ ಕಂಪೆನಿಯನ್ನು ಖರೀದಿಸಿದ್ದರು. ಬಳಿಕ ಅದನ್ನೇ ಜೆಮಿನಿ ಸರ್ಕಸ್‌ ಎಂದು ನಾಮಕರಣ ಮಾಡಿದ್ದರು. ಇದಾದ ನಂತರ ಜಂಬೋ ಸರ್ಕಸ್ ಕಂಪೆನಿಯನ್ನೂ ಶುರು ಮಾಡಿದ್ದರು.

ಇದನ್ನೂ ಓದಿ: Mangaluru ಪಕ್ಷದ ನಾಯಕರಿಗೆ ತಿಳಿಸದೆ ನಾಮಪತ್ರ ಹಿಂಪಡೆದ ಜೆಡಿಎಸ್‌ ಅಭ್ಯರ್ಥಿ !

Advertisement

ಭಾರತದಲ್ಲಿ ಸರ್ಕಸ್‌ ಗೆ ಹೊಸ ರೂಪ ಕೊಟ್ಟಿದ್ದ ಶಂಕರನ್ ಅವರ ಸಾಧನೆಯನ್ನು ಗುರುತಿಸಿ ಅಂದಿನ ಕೇಂದ್ರ ಸರ್ಕಾರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಅವರು ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿಯವರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು.

ದೇಶದ ಅತ್ಯಂತ ಹಿರಿಯ ಸರ್ಕಸ್ ಕಲಾವಿದರಾಗಿರುವ ಶಂಕರನ್ ಅವರು ಇಂಡಿಯಾ ಸರ್ಕಸ್ ಫೆಡರೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ಅಂತ್ಯಕ್ರಿಯೆ ಮಂಗಳವಾರ ಕಣ್ಣೂರಿನ ಪಯ್ಯಂಬಳಂನಲ್ಲಿ ನಡೆಯಲಿದೆ. ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅವರು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next