ಬೆಂಗಳೂರು: ಸಾಲದ ಆಮಿಷವೊಡ್ಡಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಗುರುವಾರ ಸಿಸಿಬಿ ಪೊಲೀಸರಿಗೆ ಮೂವರು ಆರೋಪಿಗಳು ಖೋಟಾ ನೋಟು ಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ತಮಿಳುನಾಡಿನ ಪಿಚ್ಚಮುತ್ತು (48), ನಲ್ಲಕಣಿ (53), ಸುಬ್ರ ಹ್ಮಣ್ಯನ್ (60) ಸಿಸಿಬಿಯಿಂದ ಬಂಧನಕ್ಕೊಳಗಾದ ವರು. ತಮಿಳುನಾಡಿನಲ್ಲಿ ಖೋಟಾ ನೋಟು ಮುದ್ರಣ ಮಾಡಿಕೊಂಡು ಬಸ್‌ನಲ್ಲಿ ಬೆಂಗಳೂ ರಿಗೆ ತರುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಿಂದ 2 ಸಾವಿರ ಮುಖ ಬೆಲೆಯ 6,203 (1,24,06,000 ರೂ.) ಹಾಗೂ 500ರ ಮುಖಬೆಲೆಯ 174 (87 ಸಾವಿರ ರೂ.) ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ತಮಿಳುನಾಡಿನಲ್ಲಿ ಖೋಟಾ ನೋಟು ಮುದ್ರಣ ಮಾಡಿಕೊಂಡು ತಮಿಳು ನಾಡಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಈ ಮೂಲಕ ಕರ್ನಾಟಕದಲ್ಲಿ ಖೋಟಾ ನೋಟು ಚಲಾವಣೆ ಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಇವರು ಬಸ್‌ನಲ್ಲಿ ಬರುತ್ತಿರುವ ಸಂಗತಿ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿತ್ತು. ಬೆಂಗಳೂರಿಗೆ ಬಂದು ಕಾಲಿಡುತ್ತಿದ್ದಂತೆ ಆರೋಪಿ ಗಳನ್ನು ಸಿಸಿಬಿ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಬೆಂಗಳೂರಿಗೆ ಖೋಟಾ ನೋಟು ತಂದಿರುವುದಾಗಿ ಪಿಚ್ಚು ಮುತ್ತು ತಂಡ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದೆ ಎಂದು ತಿಳಿದು ಬಂದಿದೆ.
ವಂಚನೆ ಹೇಗೆ?: ಆರೋಪಿಗಳಾದ ಪಿಚ್ಚಮುತ್ತು ಹಾಗೂ ನಲ್ಲಕಣಿ ಫೈನಾನ್ಸಿಯರ್‌ಗಳೆಂದು ಬಿಂಬಿಸಿಕೊಳ್ಳುತ್ತಿದ್ದರು. ಸುಬ್ರಹ್ಮಣಿ ಯನ್ ಆಡಿಟರ್ ಸೋಗಿನಲ್ಲಿ ಸಾಲ ಅಗತ್ಯವಿರುವವರ ಬಳಿ 3-4 ಬಾರಿ ಮೀಟಿಂಗ್ ಮಾಡಿ ವ್ಯವಹಾರ ಕುದುರಿಸುತ್ತಿದ್ದ. ನಂತರ ಇವರಿಂದ ಸಾಲ ಪಡೆಯಲು ಇಚ್ಛಿಸುವವರಿಗೆ ಸಾಲ ಮಂಜೂರಾಗಿರುವುದಾಗಿ ಅಗ್ರಿಮೆಂಟ್ ಮಾಡಿಸಬೇಕೆಂದು ಉಪ ನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅಗ್ರಿಮೆಂಟ್ ಚಾರ್ಜ್ ಶೇ.1ರಂತೆ ನಗದು ರೂಪದಲ್ಲಿ ಅವರಿಂದಲೇ ಹಣ ಪಡೆದುಕೊಳ್ಳುತ್ತಿದ್ದರು. ಸಾಲ ಮಂಜೂರಾಗಿರುವ ಬಗ್ಗೆ ಒಂದು ಅಗ್ರಿಮೆಂಟ್ ಪತ್ರವನ್ನು ಮಾಡಿಸಿ, ಜೊತೆಗೆ ಲೋನ್ ಬೇಕೆಂದ ವರು ಈಗಾಗಲೇ ಕೈ ಸಾಲ ಪಡೆದುಕೊಂಡಿರುವುದಾಗಿ ಒಂದು ಅಗ್ರಿಮೆಂಟ್ ಪತ್ರ ತಯಾರು ಮಾಡುತ್ತಿದ್ದರು.
ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಎರಡೂ ಅಗ್ರಿಮೆಂಟ್ ಪತ್ರಗಳಿಗೆ ಸಹಿ ಮಾಡಿ ಸಿಕೊಳ್ಳುತ್ತಿದ್ದರು. ಈ ಪ್ರಕ್ರಿಯೆ ಬಳಿಕ ಆರೋಪಿಗಳು ಕೆಲ ದಿನಗಳಲ್ಲಿ ಸಾಲ ಕೊಡುವುದಾಗಿ ನಂಬಿಸು ತ್ತಿದ್ದರು. ಹಲವು ದಿನ ಕಳೆದರೂ ಆರೋಪಿಗಳು ಲೋನ್ ಕೊಡಿಸದಿದ್ದಾಗ ಸಾಲ ಪಡೆಯಲು ಇಚ್ಛಿಸಿದವರು ಆರೋಪಿಗಳನ್ನು ಸಂಪರ್ಕಿಸಿ ಲೋನ್‌ಗೆ ಒತ್ತಡ ಹಾಕುತ್ತಿದ್ದರು. ಆ ವೇಳೆ ಆರೋಪಿಗಳು ತಮ್ಮ ವರಸೆ ಬದಲಿಸಿ ಈಗಾಗಲೇ ಸಹಿ ಮಾಡಿಸಿಕೊಂಡಿದ್ದ ಅಗ್ರಿಮೆಂಟ್ ತೋರಿಸುತ್ತಿದ್ದರು.
ಇದರ ಪ್ರಕಾರ “ನೀವು ಈಗಾ ಗಲೇ ಲೋನ್ ಪಡೆದುಕೊಂಡಿದ್ದೀರಿ. ಲೋನ್ ಪಡೆದು ಕೊಂಡಿರುವ ಹಣ ವಾಪಸ್ ಕೊಡು ವಂತೆ ಹೆದರಿಸಿ ಮೋಸ ಮಾಡುತ್ತಿದ್ದರು. ಇದರ ಜತೆಗೆ 2000 ಮತ್ತು 500 ರೂ.ಮುಖ ಬೆಲೆಯ ಖೋಟಾ ನೋಟುಗಳನ್ನು ತಯಾರಿಸಿ ಅವುಗಳನ್ನು ಅಸಲಿ ನೋಟುಗಳೆಂದು ಬಿಂಬಿಸಿ ಸಾಲ ಬೇಕಾ ಗಿರುವವರಿಗೆ ಕೊಡುತ್ತಿದ್ದರು. ಇವರು ಕೊಟ್ಟಿರುವುದು ನಕಲಿ ನೋಟು ಎಂಬ ವಿಚಾರ ಸಾಲ ಪಡೆದವರಿಗೆ ಗೊತ್ತಾಗುತ್ತಿ ದ್ದಂತೆ ಮತ್ತೆ ಆರೋಪಿಗಳನ್ನು ಸಂಪರ್ಕಿಸಿ ದರೆ ಬೆದರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಹಲವಾರು ಖೋಟಾ ನೋಟು ಚಲಾವಣೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸೂಕ್ತ ರೀತಿಯಲ್ಲಿ ಪರಿಶೀಲಿಸಿ 2 ಸಾವಿರ ರೂ., 500 ರೂ. ನೋಟು ಪಡೆಯುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.