Advertisement

ಸರ್ಕಲ್‌ ಬದಿ ವಾಹನ ನಿಲುಗಡೆ : ಅಪಘಾತಕ್ಕೆ ರಹದಾರಿ

03:13 PM Dec 28, 2017 | |

ಕಾಸರಗೋಡು: ದಿನದಿಂದ ದಿನಕ್ಕೆ ಕಾಸರಗೋಡು ನಗರ ಅವೈಜ್ಞಾನಿಕವಾಗಿ ಬೆಳೆಯುತ್ತಲೇ ಇದೆ. ಆದರೆ ನಗರ ಬೆಳೆದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟವರಿಗೆ ಸಾಧ್ಯವಾಗಿಲ್ಲ. ಹೊಸ ಹೊಸ ಕಟ್ಟಡಗಳು ತಲೆಯೆತ್ತುತ್ತಿವೆ. ಅದರ ಜೊತೆಯಲ್ಲಿ ವಾಹನಗಳ ಸಂಖ್ಯೆ ಕೂಡ ವರ್ಧಿಸುತ್ತಿದೆ. ವಾಹನ ಸಂಖ್ಯೆ ಹೆಚ್ಚುತ್ತಿರುವಂತೆ ಅದಕ್ಕನುಗುಣವಾಗಿ ರಸ್ತೆ ವ್ಯವಸ್ಥೆಯಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಓಬಿರಾಯನ ರಸ್ತೆ ಬಿಟ್ಟರೆ ರಸ್ತೆಯನ್ನು ಅಗಲಗೊಳಿಸುವ ಪ್ರಕ್ರಿಯೆಯೂ ಸಾಕಷ್ಟು ನಡೆಯಲಿಲ್ಲ. ಕೆಲವೆಡೆ ಕಾಂಕ್ರೀಟ್‌ ರಸ್ತೆಯಾಗಿದ್ದರೂ, ಅವುಗಳಲ್ಲಿ ಬಹುತೇಕ ಕಳಪೆ.

Advertisement

ಹೀಗಿರುವಂತೆ ವಾಹನ ಪಾರ್ಕಿಂಗ್‌ ವ್ಯವಸ್ಥೆಯಿಲ್ಲದೆ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗುತ್ತದೆ. ನಗರದ ಅಂಗಡಿಗಳ ಮುಂದೆ ಅವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆಯಲ್ಲಿ ಸುಗುಮವಾಗಿ ವಾಹನಗಳಿಗೆ ಸಾಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಾಸರಗೋಡು ನಗರದಲ್ಲಿ ಪದೇ ಪದೇ ರಸ್ತೆ ಬ್ಲಾಕ್‌ ಆಗುತ್ತಿದೆ. ಇಂತಹ ಸಂದರ್ಭದಲ್ಲೇ ಕರಂದಕ್ಕಾಡ್‌ ಸರ್ಕಲ್‌ನಲ್ಲಿ ಭೀಮ ಗಾತ್ರದ ಲಾರಿಗಳ ಸಹಿತ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ಕಲ್‌ನಲ್ಲಿ ಸಾಲಾಗಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ನಗರದ ಬ್ಯಾಂಕ್‌ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕಾಣಿಸದೆ ವಾಹನ ಅಪಘಾತ ನಿತ್ಯ ಸಂಭವವಾಗಿದೆ. ಸರ್ಕಲ್‌ನಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೂ ಕಾಣಿಸುವುದಿಲ್ಲ. ಇದರಿಂದಾಗಿ ವೇಗದಲ್ಲಿ ಸಾಗುವ ವಾಹನಗಳು ಢಿಕ್ಕಿ ಹೊಡೆಯುತ್ತಿರುವುದು ಸಾಮಾನ್ಯವಾಗಿದೆ. ಈಗಾಗಲೇ ಹಲವು ವಾಹನ ಅಪಘಾತಗಳು ಸಂಭವಿಸಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ಬಹುತೇಕ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಸವಾರರಿಗೆ ಅಪಾಯ ಹೆಚ್ಚು. ದ್ವಿಚಕ್ರ ವಾಹನ ಸವಾರರು ಹಲವು ಮಂದಿ ಅಪಘಾತಕ್ಕೆ ತುತ್ತಾಗಿ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡದ್ದೂ ಇದೆ.

ಕರಂದಕ್ಕಾಡ್‌ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು ರಾಷ್ಟ್ರೀಯ ಹೆದ್ದಾರಿಯಿಂದ ಮಧೂರು ರಸ್ತೆಗೆ, ಬ್ಯಾಂಕ್‌ ರಸ್ತೆಗೆ ಸಾಗುವಾಗ ಅಪಘಾತಗಳು ಸಂಭವಿಸುತ್ತವೆ. ಮಧೂರು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವಾಗಲೂ ವಾಹನ ದಟ್ಟಣೆಯಿಂದಾಗಿ ಅಪಘಾತ ನಿತ್ಯ ಘಟನೆಯೆಂಬಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲಿ ಕಿರಿದಾಗಿರುವುದು ಸುಗಮವಾಗಿ ವಾಹನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳು ಸೇರುವುದರಿಂದಾಗಿ ವಾಹನ ದಟ್ಟಣೆ ಮಿತಿಮೀರುತ್ತದೆ. ಇದರಿಂದಾಗಿ ಕರಂದಕ್ಕಾಡ್‌ ಜಂಕ್ಷನ್‌ನಿಂದ ಸಾಗಬೇಕಾದರೆ ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.

ಈ ರಸ್ತೆ ಪದೇ ಪದೇ ಕೆಟ್ಟು ಹೋಗುತ್ತಿರು ವುದು ಇನ್ನೊಂದು ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಸಹಿತ ನಗರವನ್ನು ಪ್ರವೇಶಿಸುವ ರಸ್ತೆಯಲ್ಲಿ ಜಲ್ಲಿ ಮೇಲೆ ಬಿದ್ದು ಹೊಂಡ ನಿರ್ಮಾಣ ಸಾಮಾನ್ಯವಾಗಿದೆ. ಇದು ಕೂಡ ವಾಹನ ಅಪಘಾತಕ್ಕೆ ರಹದಾರಿಯಾಗುತ್ತದೆ.

Advertisement

ಕರಂದಕ್ಕಾಡ್‌ ಸರ್ಕಲ್‌ನೊಳಗೆ ವಾಹನ ಗಳನ್ನು ನಿಲುಗಡೆ ಮಾಡುವುದಕ್ಕೆ ನಿಷೇಧ ಹೇರಬೇಕು. ಆ ಮೂಲಕ ಸಾಕಷ್ಟು ವಾಹನ ಅಪಘಾತಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದುದು ಅತೀ ಅಗತ್ಯ. ವಾಹನ ಚಾಲಕರ ಅಜಾಗ್ರ ತೆ ಕೂಡ ವಾಹನ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂಬುದಂತೂ ಸತ್ಯ. ಅಮಿತ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿರುವುದು, ಮದ್ಯಪಾನಗೈದು ವಾಹನ ಚಲಾಯಿಸುವುದು, ವಾಹನ ದಟ್ಟಣೆಯಿದ್ದರೂ ಸಿಕ್ಕ ಸ್ಥಳದಲ್ಲಿ ವಾಹನವನ್ನು ನುಗ್ಗಿಸಿ ಅಪಘಾತಕ್ಕೆ ಕಾರಣವಾಗುತ್ತಿರುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ದ್ವಿಚತ್ರ ವಾಹನ ಸವಾರರು ಅಮಿತ ವೇಗದಲ್ಲಿ ಸಾಗುತ್ತಿರುವುದರಿಂದಾಗಿ ಇತರ ಘನ ವಾಹನಗಳಿಗೆ ಏನು ಮಾಡಲೂ ಸಾಧ್ಯವಾಗದೆ ಅಪಘಾತ ಸಂಭವಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next