ತುರುವೇಕೆರೆ: ಸಾರ್ವಜನಿಕರಿಗೆ ವಿನಾ ಕಾರಣ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಸಲೀಂ ಅಹಮದ್‌ನನ್ನು ಅಮಾನತು ಮಾಡಬೇಕೆಂದು ಶಾಸಕ ಮಸಾಲೆ ಜಯರಾಮ್ ಆಗ್ರಹಿಸಿದರು.
ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ ಎದುರು ನಾಗರಿಕ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಮರಳು ದಂಧೆಗೆ ಕುಮ್ಮಕ್ಕು ನೀಡಿ ಹಣ ವಸೂಲಿ ಮಾಡುತ್ತಿದ್ದು, ಜಮೀನುಗಳಿಗೆ ಕೆಲವು ರೈತರು ಕೆರೆಯಿಂದ ಹೂಳು ತೆಗೆದರೆ ದೌರ್ಜನ್ಯವೆಸಗಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಜಪ್ತಿ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾರೆ. ಪೊಲೀಸ್ ವಸತಿ ಗೃಹದ ಪಕ್ಕ ಸಾರ್ವಜನಿಕ ರಸ್ತೆಗೆ ತಂತಿ ಬೇಲಿ ನಿರ್ಮಿಸಿ ಇಂದಿರಾ ನಗರ, ಹಾಗೂ ಮೀನಾಕ್ಷಿನಗರದ ನಡುವೆ ಸಂಪರ್ಕ ಇಲ್ಲದಂತೆ ಮಾಡಿದ್ದಾರೆ. ನಾಗರಿಕರಿಗೆ ಮತ್ತು ಶಾಲಾ ಮಕ್ಕಳಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೂ ತೊಂದರೆ ನೀಡುತ್ತಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ದೈಹಿಕ ಹಲ್ಲೆ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದು, ಹೀಗೆ ಹತ್ತು ಹಲವು ಆರೋಪಗಳಿವೆ ಎಂದು ಹೇಳಿದರು.
ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು: ಹಿರಿಯ ಪೊಲೀಸ್ ಅಧಿಕಾರಿ ಸೂರ್ಯನಾರಾಯಣ್ ರಾವ್, ವೈಎಸ್‌ಪಿ ರಾಮಲಿಂಗೇಗೌಡ ಸ್ಥಳಕ್ಕೆ ಆಗಮಿಸಿ ಶಾಸಕರ ಜೊತೆ ಚರ್ಚಿಸಿದರು. ನಂತರ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡ ಲಾಯಿತು. ಇದಕ್ಕೆ ಸ್ಪಂದಿಸಿದ ಡಿಐಜಿ ಯವರು ವರ್ಗಾವಣೆ ಮಾಡಿ ಆದೇಶಿಸಿದರು.
ತಂತಿ ಬೇಲಿ ಹಾಕಿರುವ ಪೊಲೀಸ್ ವಸತಿ ಗೃಹದ ಜಾಗ ಪರಿಶೀಲಿಸಿದರು. ಸದ್ಯದಲ್ಲೇ ತಂತಿ ಬೇಲಿ ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ದುಂಡ ರೇಣುಕಯ್ಯ, ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್, ವಿ.ಬಿ. ಸುರೇಶ್, ದಲಿತ ಮುಖಂಡ ವಿ.ಟಿ. ವೆಂಕಟರಾಮ್, ಪಪಂ. ಸದಸ್ಯರಾದ ಚಿದಾನಂದ್, ಅಂಜನ್ ಕುಮಾರ್, ಬಡಗರಹಳ್ಳಿ ರಾಮೇಗೌಡ, ಅರಳೀಕೆರೆ ಲೋಕೇಶ್, ಎಪಿಎಂಸಿ ನಿರ್ದೇಶಕ ಗುಡ್ಡೇನಹಳ್ಳಿ ಕಾಂತಣ್ಣ, ಅರೇಮಲ್ಲೇನಹಳ್ಳಿ ಹೇಮಚಂದ್ರ, ಹೆಡಗೀಹಳ್ಳಿ ವಿಶ್ವನಾಥ್ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು, ರೈತ ಸಂಘಗಳು, ದಲಿತಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಾಹನ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.