Advertisement

ತಮಿಳರ ಚಿನ್ನಮ್ಮ, ಕರ್ನಾಟಕದಲ್ಲಿ ಜೈಲಮ್ಮ!

03:35 AM Feb 15, 2017 | Team Udayavani |

ದೆಹಲಿ: ಜಯಲಲಿತಾ ಚಿತ್ರನಟಿಯಾಗಿ ಜನಪ್ರಿಯ ಗೊಂಡಿದ್ದು, ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾಗಿದ್ದು, ಜನರಿಂದ ಆಮ್ಮ ಎಂದು ಕರೆಸಿಕೊಂಡಿದ್ದು, ¸‌ಭ್ರಷ್ಟಾಚಾರ ಎಸಗಿದ್ದು ಎಲ್ಲವೂ ತಮಿಳುನಾಡಿನಲ್ಲೇ. ಆದರೆ ಅವರು ಜೈಲು ಸೇರಿದ್ದು ಮಾತ್ರ ಕರ್ನಾಟಕದಲ್ಲಿ! 

Advertisement

ಈಗ ಚಿನ್ನಮ್ಮಾಳ ಸರದಿ. ಹೈಕೋರ್ಟ್‌ ಜಯಲಲಿತಾ ಮತ್ತವರ ಆಪ್ತ ರಾಗಿದ್ದ ಶಶಿಕಲಾ, ಇಳವರಸಿ, ಸುಧಾಕರನ್‌ ಅವರನ್ನು ಖುಲಾಸೆಗೊಳಿಸಿದ್ದ ತೀರ್ಪನ್ನು ಸುಪ್ರೀಂ ರದ್ದುಗೊಳಿಸಿದೆ. ಇವರನ್ನು ಅಪರಾಧಿಗಳೆಂದು ಘೋಷಿಸಿದ್ದ ವಿಚಾರಣಾ ಕೋರ್ಟಿನ ತೀರ್ಪನ್ನು ಎತ್ತಿ ಹಿಡಿದಿದೆ.

ಹಾಗೆ ನೋಡಿದರೆ, ಈ ಪ್ರಕರಣ ಕರ್ನಾಟಕಕ್ಕೆ ವರ್ಗಾವಣೆಗೊಂಡದ್ದೆ ಒಂದು ಕೌತುಕ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂದು ಆಗ ಜನತಾ ಪಕ್ಷದ ಅಧ್ಯಕ್ಷರಾಗಿದ್ದ, ಈಗ ಬಿಜೆಪಿ ಮುಖಂಡರಾಗಿರುವ ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್‌ ಸ್ವಾಮಿ 1996ರಲ್ಲಿ ಚೆನ್ನೈಯ ಪ್ರಿನ್ಸಿಪಲ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ನ್ಯಾಯಾಲಯ ಈ ಬಗ್ಗೆ ಎರಡು ತಿಂಗಳಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಈ ಆದೇಶವನ್ನು ಅಲ್ಲಿನ ಹೈಕೋರ್ಟ್‌ನಲ್ಲಿ ಜಯಲಲಿತಾ ಪ್ರಶ್ನಿಸಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ತಡೆಯಾಜ್ಞೆ ನೀಡಿದರೂ, ಬಳಿಕ ವಿಚಕ್ಷಣಾ ನಿರ್ದೇಶಕರು ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರಕರಣದ ತನಿಖೆ ನಡೆಸಲು 1996ರಲ್ಲಿ ಅವಕಾಶ ನೀಡಿತು. ತನಿಖೆ ಬಳಿಕ, ಜಯಾ ಜೊತೆಗೆ ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಅವರನ್ನು ಕೂಡ ಪ್ರಕರಣದಲ್ಲಿ ಸಹ ಆರೋಪಿಗಳೆಂದು ಹೆಸರಿಸಲಾಯಿತು.

ಆದರೆ, ಸಿಎಂ ಆಗಿರುವ ಜಯಲಲಿತಾ ತನಿಖೆ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿ, ಈ ಪ್ರಕರಣದಲ್ಲಿ ಇನ್ನೊಬ್ಬ ದೂರುದಾರರಾಗಿದ್ದ ಡಿಎಂಕೆಯ ಅನºಳಗನ್‌ ಈ ಪ್ರಕರಣವನ್ನು ತಮಿಳುನಾಡಿನಿಂದ ಹೊರಗೆ ವರ್ಗಾಯಿಸುವಂತೆ ಸುಪ್ರೀಂಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ 2003ರಲ್ಲಿ ಸುಪ್ರೀಂಕೋರ್ಟ್‌ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿತು. ಬಳಿಕ, ಕರ್ನಾಟಕ ಬಿಟ್ಟು ಬೇರೆ ಯಾವುದಾದರೂ ರಾಜ್ಯಕ್ಕೆ ಪ್ರಕರಣವನ್ನು ವರ್ಗಾಯಿಸಿ ಎಂದು ಜಯಲಲಿತಾ ಕೋರ್ಟ್‌ನ ಮೊರೆ ಹೋದರಾದರೂ ಕೋರಿಕೆ ಸಮ್ಮತಿಸಲಿಲ್ಲ.

ಸುಪ್ರೀಂ ಸೂಚನೆ ಮೇರೆಗೆ 2003ರಲ್ಲಿ ಕರ್ನಾಟಕ ಸರ್ಕಾರ, ವಿಶೇಷ ನ್ಯಾಯಾಲಯ ಸ್ಥಾಪಿಸಿತು. 2014ರ ಸೆಪ್ಟೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಜಯಲಲಿತಾ ಮತ್ತವರ ಮೂವರು ಸಂಗಡಿಗರನ್ನು ಅಪರಾಧಿಗಳೆಂದು ಘೋಷಿಸಿತು. ಜಯಲಲಿತಾ ತಮಿಳುನಾಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೈಲು ಸೇರಿದರು. ಆದರೆ, ಈ ತೀರ್ಪಿನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌, ಆರೋಪಿಗಳನ್ನು ಖುಲಾಸೆ ಮಾಡಿತು. ಕರ್ನಾಟಕ ಸರ್ಕಾರ ಸುಪ್ರೀಂನಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಕರ್ನಾಟಕಕ್ಕೆ ಈ ಪ್ರಕರಣವನ್ನು ಮುಂದುವರಿಸುವ ಅಧಿಕಾರವಿಲ್ಲ ಎಂದು ಜಯಾ ಕ್ಯಾತೆ ತೆಗೆದರೂ, ಅದಕ್ಕೆ ಮನ್ನಣೆ ನೀಡಿದ ನ್ಯಾಯಾಲಯ, ಈಗ ಮೂವರನ್ನೂ ಅಪರಾಧಿಗಳೆಂದು ತೀರ್ಪಿತ್ತಿದೆ. ಹೀಗಾಗಿ, ಈ ಪ್ರಕರಣದಲ್ಲಿನ ಅಪರಾಧಿಗಳು ಮತ್ತು ಅಪರಾಧ ತಮಿಳುನಾಡಿನಲ್ಲಿ ನಡೆದರೂ ಕರ್ನಾಟಕ ಈ ಪ್ರಕರಣವನ್ನು ಅಂತ್ಯಕ್ಕೆ ಕೊಂಡು ಹೋಗುವಲ್ಲಿ ಸಫ‌ಲವಾಗಿದೆ. ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಮತ್ತೆ ಪರಪ್ಪನ ಆಗ್ರಹಾರದಲ್ಲಿಯೇ ಜೈಲು ಶಿಕ್ಷೆ ಅನುಭವಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next