Advertisement
ಫಸ್ಟ್ ಸೀನ್: ಕಥಾನಾಯಕ ದೇವರ ಮುಂದೆ ಕೈ ಮುಗಿದು ನಿಂತಿರುತ್ತಾನೆ. ಹಿಂದಿನಿಂದ “ಆ್ಯಕ್ಷನ್’ ಎಂಬ ಧ್ವನಿ. “ದೇವರೇ ಎಲ್ಲರನ್ನೂ ಚೆನ್ನಾಗಿಡು, ನನ್ನನ್ನು ಮಾತ್ರ ಸ್ವಲ್ಪ ಹೆಚ್ಚೇ ಚೆನ್ನಾಗಿಡು’ ಎಂದು ನಾಯಕ ಮನಸ್ಸಲ್ಲೇ ಬೇಡಿಕೊಳ್ಳುತ್ತಾನೆ. ಶಾಟ್ ಕಟ್ ಆಗುತ್ತದೆ. ಅರ್ಚಕರು ಸ್ಕ್ರಿಪ್ಟ್ ಅನ್ನು ದೇವರ ಬಳಿ ಇಟ್ಟು ಪೂಜೆ ಮಾಡಿ, ಚಿತ್ರತಂಡದ ಕೈಗಿಡುತ್ತಾರೆ.
ಸಿನಿಮಾ ಮಂದಿ ಜ್ಯೋತಿಷ್ಯ, ಭವಿಷ್ಯ, ದೇವರನ್ನು ಸ್ವಲ್ಪ ಹೆಚ್ಚೇ ನಂಬುತ್ತಾರೆಂಬ ಮಾತಿದೆ. ಚಿತ್ರತಂಡದವರು ಜ್ಯೋತಿಷಿಗಳನ್ನು ಕೇಳಿ ಸಿನಿಮಾ ಬಿಡುಗಡೆ ಮಾಡುವುದರಿಂದ ಕೆಲವೊಮ್ಮೆ ಯಾವುದೇ ಪ್ರಮೋಶನ್ ಇಲ್ಲದೇ ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತು. ಅದು ಅವರವರ ನಂಬಿಕೆ. ಸಿನಿಮಾ ಮಂದಿ ತಮ್ಮ ಇಷ್ಟಾರ್ಥ ಸಿದ್ಧಿಸಿದ ದೇವಸ್ಥಾನಗಳಲ್ಲಿ ತಮ್ಮ ಸಿನಿಮಾಗಳ ಮುಹೂರ್ತ ಮಾಡುತ್ತಾರೆ. ಇದೇ ಕಾರಣದಿಂದ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಸಿನಿಮಾ ಮುಹೂರ್ತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕೆಲವು ದೇವಸ್ಥಾನಗಳಲ್ಲಿ ತಿಂಗಳಿಗೆ ಮೂರ್‍ನಾಲ್ಕು ಸಿನಿಮಾಗಳ ಮುಹೂರ್ತ ನಡೆಯುವ ಮೂಲಕ, ಮತ್ತಷ್ಟು ಮಂದಿ ಆ ದೇವಸ್ಥಾನದಲ್ಲಿ ಮುಹೂರ್ತ ಮಾಡುವುದಕ್ಕೆ ಪ್ರೇರಣೆಯಾಗುತ್ತಿರುವುದು ಸುಳ್ಳಲ್ಲ. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಶ್ರೀನಿವಾಸ ಮಂದಿರ, ಬನಶಂಕರಿಯ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನ, ಬಸವನಗುಡಿಯ ದೊಡ್ಡ ಗಣಪತಿ, ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ, ಆರ್.ಟಿ.ನಗರದ ಸಾಯಿಬಾಬಾ ಮಂದಿರ, ಮಹಾಲಕ್ಷ್ಮೀ ಲೇಔಟ್‌ನ ಆಂಜನೇಯ ಸ್ವಾಮಿ ದೇವಸ್ಥಾನ, ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ … ಹೀಗೆ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಸಿನಿಮಾ ಮುಹೂರ್ತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕಾರ್ಡ್ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಶ್ರೀನಿವಾಸ ಮಂದಿರ ಚಿತ್ರತಂಡದವರ ಇಷ್ಟದ ಜಾಗ ಎಂದರೆ ತಪ್ಪಲ್ಲ. ಅದೇ ಕಾರಣದಿಂದ ಆ ಮಂದಿರದಲ್ಲಿ ಸೆಟ್ಟೇರುವ ಸಿನಿಮಾಗಳ ಸಂಖ್ಯೆಯೂ ಹೆಚ್ಚಿದೆ. ಈ ಮಂದಿರ ಆರಂಭವಾಗಿ 32 ವರ್ಷಗಳಾಗಿವೆ. ಈ 32 ವರ್ಷದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಮುಹೂರ್ತ ಕಂಡಿವೆ.
Related Articles
Advertisement
ಇನ್ನು ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ಅನೇಕ ಸಿನಿಮಾಗಳ ಮುಹೂರ್ತ ನಡೆಯುತ್ತವೆ. ಅದರಲ್ಲೂ ರಕ್ಷಿತ್ ಶೆಟ್ಟಿ ನಿರ್ಮಾಣದ ಹಾಗೂ ನಟನೆಯ ಸಿನಿಮಾಗಳ ಮುಹೂರ್ತ ಖಾಯಂ ಆಗಿ ಇಲ್ಲೇ ನಡೆಯುತ್ತವೆ. “ಕಿರಿಕ್ ಪಾರ್ಟಿ’ ಚಿತ್ರದ ಮುಹೂರ್ತ ಇಲ್ಲೇ ಆಗಿದ್ದು. ಆ ಚಿತ್ರ ಹಿಟ್ ಆಗಿದ್ದೇ ತಡ, ರಕ್ಷಿತ್ ಮತ್ತು ಪುಷ್ಕರ್ ನಿರ್ಮಾಣದ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’, “ಕಥೆಯೊಂದು ಶುರುವಾಗಿದೆ’, “ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಮುಹೂರ್ತಗಳು ಅಲ್ಲೇ ನಡೆದಿವೆ. ಇತ್ತೀಚೆಗೆ “ಪಡ್ಡೆಹುಲಿ’, “ನಾತಿಚರಾಮಿ’ ಚಿತ್ರಗಳು ಕೂಡಾ ಇಲ್ಲೇ ಸೆಟ್ಟೇರಿವೆ. ರಾಜಾಜಿನಗರದ ಶಿವನ ದೇವಸ್ಥಾನದಲ್ಲೂ ಸಾಕಷ್ಟು ಸಿನಿಮಾಗಳ ಮುಹೂರ್ತ ನಡೆಯುತ್ತವೆ. ಕಳೆದ ವರ್ಷ ಶಿವರಾತ್ರಿಯಂದು ರವಿಚಂದ್ರನ್ ಅವರ ಮೂರು ಸಿನಿಮಾಗಳು ಅಲ್ಲಿ ಮುಹೂರ್ತ ಆಚರಿಸಿಕೊಂಡಿದ್ದವು. ಇನ್ನು, ಬಸವಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲೂ “ಮೆರವಣಿಗೆ’, “ಮಿಲನ’, “ಶಿವ’, “ಟೋನಿ’, “ಬರ್ಫಿ’, “ಮರಿ ಟೈಗರ್’, “ಕಲ್ಪನಾ-2′ ಹೀಗೆ ಅನೇಕ ಸಿನಿಮಾಗಳು ಮುಹೂರ್ತ ಕಾಣುತ್ತಲೇ ಇರುತ್ತವೆ.
ಹಾಗಂತ ಸಿನಿಮಾ ಮುಹೂರ್ತವನ್ನು ದೇವಸ್ಥಾನದಲ್ಲೇ ಮಾಡಬೇಕೆಂಬ ಯಾವ ನಿಯಮವೂ ಇಲ್ಲ. ಮುಹೂರ್ತವನ್ನು ಅದ್ಧೂರಿಯಾಗಿ, ಆಪ್ತವರ್ಗವನ್ನು ಕರೆದು ಮಾಡಬೇಕೆಂದು ಕನಸು ಕಾಣುವವರು ಕಂಠೀರವ ಸ್ಟುಡಿಯೋ ಅಥವಾ ಇನ್ಯಾವುದೋ ಜಾಗದಲ್ಲಿ ಮಾಡುತ್ತಾರೆ. ದೇವರ ಫೋಟೋ ಮುಂದೆ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗುತ್ತದೆ. ಕೆಲವರು ದೊಡ್ಡ ಹೋಟೆಲ್‌ಗಳಲ್ಲಿ ಸರಳ ಪೂಜೆಯೊಂದಿಗೆ ಚಿತ್ರ ಪ್ರಾರಂಭಿಸಿದ ಉದಾಹರಣೆಗಳೂ ಇವೆ.
ರವಿಪ್ರಕಾಶ್ ರೈ