ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಮಂದಿ ನಟಿಯರಿದ್ದಾರೆ. ತಮಗೆ ಸಿಕ್ಕ ಪಾತ್ರಗಳಲ್ಲಿ ಖುಷಿ ಕಾಣುತ್ತಾ, ಆ ಪಾತ್ರಕ್ಕೆ ನ್ಯಾಯ ಕೊಡುತ್ತಾ ಮುಂದೆ ಸಾಗುತ್ತಿರುತ್ತಾರೆ. ಆ ಸಾಲಿಗೆ ಸೇರುವ ನಟಿಯರಲ್ಲಿ ಸೋನು ಗೌಡ ಕೂಡಾ ಇದ್ದಾರೆ. ಕೇವಲ ನಾಯಕಿ ಅಥವಾ ಗ್ಲಾಮರಸ್ ಪಾತ್ರಗಳಿಗಷ್ಟೇ ಸೀಮಿತವಾಗದೇ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಸೋನು ಈಗ ಹೊಸ ವರ್ಷದ ಹೊಸ ಕನಸಿನಲ್ಲಿದ್ದಾರೆ. ಅವರಿಗೆ 2019 ಕೂಡಾ ಒಳ್ಳೆಯ ವರ್ಷವಾಗಿತ್ತಂತೆ. ಈ ಬಗ್ಗೆ ಮಾತನಾಡುವ ಸೋನು, ನನ್ನ ಮಟ್ಟಿಗೆ ಹೇಳುವುದಾದರೆ, ಕಳೆದ ವರ್ಷ ಚೆನ್ನಾಗಿತ್ತು. ನಾನು ಅಭಿನಯಿಸಿದ್ದ “ಫಾರ್ಚುನರ್’, “ಚಂಬಲ್’, “ಐ ಲವ್ ಯು’ ಸೇರಿದಂತೆ ಒಟ್ಟು ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಮೂರು ಕೂಡ ಬೇರೆ ಬೇರೆ ಜಾನರ್ ಸಿನಿಮಾಗಳಾಗಿದ್ದು ವಿಶೇಷ. ಮೂರು ಸಿನಿಮಾಗಳಿಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ವರ್ಷ ಪೂರ್ತಿ ಕೆಲಸವಿದ್ದಿದ್ದರಿಂದ ನಾನು ಕೂಡ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಮನೆಯಲ್ಲೂ ಫ್ರೆಂಡ್ಸ್, ಫ್ಯಾಮಿಲಿ ಜೊತೆ ಒಂದಷ್ಟು ಖುಷಿಯ ಸಮಯ ಕಳೆದಿದ್ದೇನೆ. ಒಟ್ಟಿನಲ್ಲಿ ಸಿನಿಮಾ ಲೈಫ್, ಪರ್ಸನಲ್ ಲೈಫ್ ಎರಡೂ ಚೆನ್ನಾಗಿತ್ತು’ ಎನ್ನುತ್ತಾರೆ.
2020ರಲ್ಲೂ ಸೋನು ನಟಿಸಿರುವ ಕೆಲವು ಸಿನಿಮಾಗಳು ಬಿಡುಗಡೆಯಾಗಲಿವೆ. “ನಾನು ನಟಿಸಿರುವ “ಯುವರತ್ನ’, “ಶಾಲಿನಿ ಐಎಎಸ್’, “ಶಬ್ಧ’. ಈ ಮೂರು ಕೂಡ ಮೂರು ಬೇರೆ ಬೇರೆ ಜಾನರ್‌ನಲ್ಲಿ ಇರುವುದರಿಂದ ಇವುಗಳ ಮೇಲೆ ನನಗೂ ಸಾಕಷ್ಟು ನಿರೀಕ್ಷೆ ಇದೆ. ಇದರ ನಡುವೆ ಕೆಲವು ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದ್ದು, ಅವು ಕೂಡ ಅಂದುಕೊಂಡಂತೆ ಮುಗಿದರೆ, ಇದೇ ವರ್ಷ ತೆರೆಗೆ ಬರಬಹುದು. ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ಕೈ ತುಂಬಾ ಕೆಲಸವಿದೆ’ ಎನ್ನುತ್ತಾರೆ.
ಕೆಲವು ನಟ-ನಟಿಯರು ಕೇವಲ ಸಿನಿಮಾದಲ್ಲೇ ನಟಿಸಬೇಕೆಂದು ಬೌಂಡರಿ ಹಾಕಿಕೊಂಡಿರುತ್ತಾರೆ. ಆದರೆ, ಸೋನು ಮಾತ್ರ ಆ ಬೌಂಡರಿಯಿಂದ ಮುಕ್ತ. ಈ ಬಗ್ಗೆ ಮಾತನಾಡುವ ಸೋನು, “ನನಗೆ ಕೇವಲ ಸಿನಿಮಾಗಳಲ್ಲಿ ಮಾತ್ರ ಆ್ಯಕ್ಟಿಂಗ್ ಮಾಡ್ಬೇಕು. ಸಿನಿಮಾಗಳಲ್ಲಿ ಮಾತ್ರ ಗುರುತಿಸಿಕೊಳ್ಳಬೇಕು ಅಂತೇನೂ ಇಲ್ಲ. ಸಿನಿಮಾದ ಜೊತೆಗೆ ವೆಬ್ ಸೀರೀಸ್, ಶಾರ್ಟ್ ಫಿಲಂಸ್ ಯಾವುದಾದ್ರೂ ಓ.ಕೆ. ಆದ್ರೆ ಒಂದೇ ಒಂದು ಕಂಡಿಷನ್ ಅಂದ್ರೆ, ಅದು ಹೊಸ ಥರದಲ್ಲಿ ಇರಬೇಕು. ಏನಾದ್ರೂ ಹೊಸ ವಿಷಯ ಹೇಳುವಂತಿರಬೇಕು. ಒಂದೇ ಥರದ ಪಾತ್ರಗಳನ್ನು ಹತ್ತು ಸಲ ಮಾಡೋದಕ್ಕಿಂತ ಹತ್ತು ಥರದ ಪಾತ್ರಗಳನ್ನ ಒಂದೊಂದು ಸಲ ಮಾಡೋದು ಒಳ್ಳೆಯದು. ಅದು ನನಗೂ ಬೇರೆ ಬೇರೆ ಅನುಭವಗಳನ್ನ ಕೊಡುತ್ತದೆ. ಹಾಗಾಗಿ ಆ್ಯಕ್ಟಿಂಗ್ ವಿಷಯ ಬಂದಾದ ಸಿನಿಮಾ, ವೆಬ್ ಸೀರಿಸ್, ಶಾರ್ಟ್ ಫಿಲಂ ಅಂಥ ಭೇದ-ಭಾವ ಮಾಡಲಾರೆ’ ಎನ್ನುವುದು ಸೋನು ಮಾತು.