ಇತ್ತ ಕಡೆ ನಿಧಾನವಾಗಿ ಸಿನಿಮಾ ಮುಹೂರ್ತಗಳು ಕೂಡಾ ಆರಂಭವಾಗುತ್ತಿವೆ. ಸುಮಾರು ನಾಲ್ಕು ತಿಂಗಳ ಬಳಿಕ ಸಿನಿಮಾವೊಂದು ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಸಿನಿಮಾಗಳ ಅಧಿಕೃತ ಮುಹೂರ್ತಕ್ಕೆ ಚಾಲನೆ ಸಿಕ್ಕಂತಾಗಿದೆ.
ಎಷ್ಟು ದಿನಾಂತ ಹೆದರಿ ಕೂರೋದು, ಇನ್ನು ನಿಧಾನವಾಗಿ ಕೆಲಸ ಶುರು ಮಾಡಲೇಬೇಕು … – ಹೀಗೊಂದು ನಿರ್ಧಾರಕ್ಕೆ ಕನ್ನಡ ಚಿತ್ರರಂಗದ ಮಂದಿ ಬಂದಿದ್ದಾರೆ. ಅದರ ಪರಿಣಾಮವಾಗಿಯೇ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ.
ನಿಧಾನವಾಗಿ ಸಿನಿಮಾ ಮುಹೂರ್ತ, ಪೋಸ್ಟರ್ ರಿಲೀಸ್, ಬಾಕಿ ಇರುವ ಚಿತ್ರೀಕರಣಗಳು ನಡೆಯುತ್ತಿವೆ. ಈ ಮೂಲಕ ಚಿತ್ರರಂಗ ಮತ್ತೆ ತನ್ನ ಹಳೆಯ ಖದರ್‌ಗೆ ಮರಳುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ಸಿನಿಮಾಗಳು ಅರ್ಧಕ್ಕೆ ನಿಂತಿರುವ ಚಿತ್ರೀಕರಣ ಮಾಡಲು ಮುಂದಾಗಿವೆ. ಭಜರಂಗಿ 2, ಕೆಜಿಎಫ್-2, ಪೊಗರು, ಯುವರತ್ನ, ಕಬj.. ಅನೇಕ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದವು. ಈಗ ಚಿತ್ರೀಕರಣ ಪೂರೈಸಲು ಮುಂದಾಗಿವೆ. ಪೂರ್ವ ಸಿದ್ಧತೆಗಳೊಂದಿಗೆ ಬಾಕಿ ಉಳಿದಿರುವ ಚಿತ್ರೀಕರಣ ಪೂರೈಸಿ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.
ಇತ್ತ ಕಡೆ ನಿಧಾನವಾಗಿ ಸಿನಿಮಾ ಮುಹೂರ್ತಗಳು ಕೂಡಾ ಆರಂಭವಾಗುತ್ತಿವೆ. ಸುಮಾರು ನಾಲ್ಕು ತಿಂಗಳ ಬಳಿಕ ಸಿನಿಮಾವೊಂದು ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಸಿನಿಮಾಗಳ ಅಧಿಕೃತ ಮುಹೂರ್ತಕ್ಕೆ ಚಾಲನೆ ಸಿಕ್ಕಂತಾಗಿದೆ. “ಹೇ ರಾಮ್’ ಎಂಬ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ. ಇದಲ್ಲದೇ ಇನ್ನೊಂದಿಷ್ಟು ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಗಳು ಸ್ತಬ್ಧವಾಗಿದ್ದವು. ಅದರಂತೆ ಸಿನಿಮಾ ಕ್ಷೇತ್ರ ಕೂಡಾ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಈಗ ನಿಧಾನವಾಗಿ ಚಿತ್ರರಂಗ ತೆರೆದುಕೊಳ್ಳುತ್ತಿವೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ.
ಈ ಎಲ್ಲಾ ಚಟುವಟಿಕೆಗಳ ಮಧ್ಯೆಯೇ ಚಿತ್ರಮಂದಿರ ಯಾವಾಗ ತೆರೆಯುತ್ತದೆ ಎಂಬ ಪ್ರಶ್ನೆ ಸಿನಿಮಾ ಮಂದಿಯನ್ನು ಕಾಡುತ್ತಿದೆ. ಆದರೆ, ಇದಕ್ಕೆ ನಿಖರ ಉತ್ತರವಿಲ್ಲ. ಆದರೆ, ಶೀಘ್ರದಲ್ಲೇ ತೆರೆಯುತ್ತದೆ ಎಂಬ ಭರವಸೆಯಂತೂ ಇದೆ. ಏಕೆಂದರೆ ಒಂದೊಂದೇ ಕ್ಷೇತ್ರಗಳು ಕಾರ್ಯಾರಂಭಿಸಿವೆ. ಹಾಗಾಗಿ, ಚಿತ್ರಮಂದಿರಗಳು ಕೂಡಾ ಶೀಘ್ರವೇ ತೆರೆಯುವ ಭರವಸೆಯೊಂದಿಗೆ ಚಿತ್ರರಂಗ ಮತ್ತೆ ಗರಿಗೆದರುತ್ತಿದೆ.