ಅಂಬರೀಶ್ ಎಂದರೆ ಪತ್ರಕರ್ತರಿಗೆ ಅಚ್ಚುಮೆಚ್ಚು. ಅಂಬರೀಶ್ ಕೂಡಾ ಪತ್ರಕರ್ತರ ಜೊತೆ ಪ್ರೀತಿಯಿಂದ ಹರಟುತ್ತಿದ್ದರು. “ಅಂಬಿ ನಿಂಗೆ ವಯಸ್ಸಾಯೊ¤à’ ಸಿನಿಮಾ ಬಿಡುಗಡೆ ಪೂರ್ವದಲ್ಲಿ ಅಂಬರೀಶ್ ತಮ್ಮ ಸಿನಿಮಾ, ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಅಂದು ಅವರು ಮಾತನಾಡಿದ ಮಾತನ್ನು ಇಲ್ಲಿ ಯಥಾವತ್ ನೀಡುತ್ತಿದ್ದೇವೆ…..
ಎಲ್ಲವನ್ನು ಒಬ್ಬನೇ ಮಾಡಬಾರದು: ಇನ್ನು, ಚಿತ್ರರಂಗಕ್ಕೆ ಸಾಕಷ್ಟು ಮಂದಿ ಹೊಸಬರು ಬರುತ್ತಿರೋದನ್ನು ಕೂಡಾ ಅಂಬರೀಶ್ ಗಮನಿಸುತ್ತಿದ್ದಾರೆ. ಅದರಲ್ಲೂ ಕೆಲವು ಸಿನಿಮಾದ ನಿರ್ಮಾಣದಿಂದ ಹಿಡಿದು ನಾಯಕ ನಟರಾಗಿ ಒಬ್ಬರೇ ಇರುವುದನ್ನು ಕೂಡಾ ಗಮನಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಅಂಬರೀಶ್ ಅವರ ಸಲಹೆ. “ಕೆಲವರು ನನ್ನ ಮನೆಗೆ ಮುಹೂರ್ತದ ಆಹ್ವಾನ ಪತ್ರಿಕೆ ಹಿಡಿದು ಬರುತ್ತಾರೆ. ಯಾರಪ್ಪಾ ಪ್ರೊಡ್ನೂಸರ್ ಅಂದ್ರೆ, ನಾನೇ ಸಾರ್ ಅಂತಾರೆ.
ಹೋಗ್ಲಿ ನಿರ್ದೇಶಕ ಯಾರೆಂದರೆ ಅದು ನಾನೇ ಎಂಬ ಉತ್ತರ ಬರುತ್ತದೆ. ಸರಿ ಹೀರೋ ಯಾರು ಎಂದು ಕೇಳಿದರೆ ಅದಕ್ಕೂ “ನಾನೇ ಸಾರ್’ ಎಂಬ ಉತ್ತರ ಬರುತ್ತದೆ. ಹೀಗೆ ಚಿತ್ರರಂಗಕ್ಕೆ ಯಾವುದೇ ಅನುಭವವಿಲ್ಲದೇ ಬರುವ ಮಂದಿ ಒಮ್ಮೆಲೇ ಎಲ್ಲವನ್ನು ಮಾಡ ಹೊರಟಾಗ ಸೋಲಬೇಕಾಗುತ್ತದೆ. ಸಿನಿಮಾ ಎಂಬುದು ಟೀಂ ವರ್ಕ್. ಅಲ್ಲಿ ಎಲ್ಲಾ ಕೆಲಸವನ್ನು ಒಬ್ಬನೇ ಮಾಡಲು ಹೊರಟಾಗ ಸಿನಿಮಾವನ್ನು ಕೂಡಾ ಒಬ್ಬನೇ ನೋಡಬೇಕಾಗುತ್ತದೆ’ ಎಂದು ಹೊಸಬರ ಬಗ್ಗೆ ಹೇಳುತ್ತಾರೆ ಅಂಬಿ.
ಚಿತ್ರರಂಗದ ಇಂಚಿಂಚು ಗೊತ್ತು: “ನಾನು ಚಿತ್ರರಂಗದಲ್ಲಿ 49 ವರ್ಷ ಕಳೆದಿದ್ದೇನೆ. ಇಲ್ಲಿನ ಸಣ್ಣ ಸಣ್ಣ ಅಂಶಗಳೂ ಗೊತ್ತು. ಚಿತ್ರರಂಗದ ಒಂದೊಂದು ಸೆಂಟಿಮೀಟರ್ ಕೂಡಾ ಗೊತ್ತು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಲಾವಿದರಿಂದ ಹಿಡಿದು ಸಿನಿಮಾ ಬಿಡುಗಡೆವರೆಗೆ ಸಮಸ್ಯೆ ಇದೆ’ ಎಂದ ಅಂಬಿ ಹಿಂದೆ ಕೆ.ಜಿ.ರಸ್ತೆಯಲ್ಲಿದ್ದ ಚಿತ್ರಮಂದಿರಗಳನ್ನು ನೆನಪಿಸುತ್ತಾ, “ಆಗ ಕೆ.ಜಿ.ರಸ್ತೆಯಲ್ಲಿ ಅಷ್ಟೊಂದು ಚಿತ್ರಮಂದಿರಗಳಿದ್ದರೂ ಸರಿಯಾಗಿ ಕನ್ನಡಕ್ಕೆ ಥಿಯೇಟರ್ ಸಿಗುತ್ತಿರಲಿಲ್ಲ.
ಒಂದರಲ್ಲಿ ಹಿಂದಿ ಸಿನಿಮಾ ಹಾಕಿದರೆ, ಇನ್ನೊಂದರೆ ಸೆಕ್ಸ್ ಪಿಕ್ಚರ್ ಹಾಕುತ್ತಿದ್ದರು. ಮತ್ತೂಂದರಲ್ಲಿ ತಮಿಳು .. ಈ ತರಹದ ಸ್ಪರ್ಧೆಯಲ್ಲೇ ಬಿಡುಗಡೆ ಮಾಡಬೇಕಿತ್ತು. ಮೂರನೇ ಕ್ಲಾಸ್ ಓದಿದ ಡಾ.ರಾಜ್‌ಕುಮಾರ್ ಇತಿಹಾಸನೇ ಬರೆದುಬಿಟ್ಟರು. ಆದರೆ, ಕರ್ನಾಟಕದ, ಈ ಬೆಂಗಳೂರಿನ ಹೃದಯ ಭಾಗವಾಗಿದ್ದ ಎಂ.ಜಿ.ರಸ್ತೆಯಲ್ಲಿ ಅವರ ಒಂದು ಪೋಸ್ಟರ್ ಹಾಕಲಾಗಲಿಲ್ಲ. ಆ ತರಹದ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗ ಬೆಳೆದು ಬಂದಿದೆ’ ಎನ್ನುತ್ತಾ ಚಿತ್ರರಂಗ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು.