Advertisement
ಈಗ ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯ ನಂತರ ಚಿತ್ತರಂಗದ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಹೌದು, ಲಾಕ್ ಡೌನ್ ಪರಿಣಾಮ ಎಲ್ಲರ ಬದುಕು ಚೆಲ್ಲಾಪಿಲ್ಲಿಯಾಗಿದೆ. ಈ ನಿಟ್ಟಿನಲ್ಲಿ ಮೆಲ್ಲನೆ ಲಾಕ್ ಡೌನ್ ಸಡಿಲಿಕೆಯಾಗಿದೆ. ಸದ್ಯಕ್ಕೆ ಚಿತ್ರೋದ್ಯಮ ಉಸಿರಾಡುವಂತಾಗಿದೆ. ಹಾಗಂತ, ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಸಿಕ್ಕಿದೆ. ಇದೊಂದು ರೀತಿಯ ಸಮಾಧಾನದ ವಿಷಯ. ಆದರೆ, ನಿರ್ಮಾಪಕರೂ ಸೇರಿದಂತೆ ಸಿನಿಮಾ ಮಂದಿಗೆ ಈಗ ಭಯ ಕಾಡುತ್ತಿರುವುದಂತೂ ನಿಜ. ಅದಕ್ಕೆ ಕಾರಣ, ಮತ್ತದೇ ಕೋವಿಡ್ 19.
Related Articles
Advertisement
ಹಾಗಾಗಿಯೇ, ಕೆಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಚಿತ್ರಮಂದಿರ ನಂಬಿಕೊಂಡು ಅನೇಕ ಸಿನಿಮಾ ಮಂದಿ ಇದ್ದರೂ, ಇಂತಹ ಸಮಯದಲ್ಲಿ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಜನರು ಭಯ, ಭೀತಿ ಇಲ್ಲದೆ ಬಂದು ನೋಡುತ್ತಾರಾ ಎಂಬ ಸಣ್ಣದ್ದೊಂದು ಭಯ ಇದ್ದೇ ಇದೆ. ಅದೇನೆ ಇರಲಿ, ಕೋವಿಡ್ 19 ಸಾಕಷ್ಟು ಸಮಸ್ಯೆ ಹುಟ್ಟುಹಾಕಿದೆ. ಸರ್ಕಾರ ಚಿತ್ರೀಕರಣಕ್ಕೆ ಹಾಗೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೂ, ಆ ದಿನಗಳು ಮರುಕಳಿಸುತ್ತವಾ ಎಂಬ ಪ್ರಶ್ನೆಯಂತೂ ಇದೆ.
ಲಾಕ್ ಡೌನ್ ಸಂಪೂರ್ಣ ಸಡಿಲಗೊಂಡು ಮೊದಲಿನಂತೆ, ಎಲ್ಲವೂ ನಡೆದರೆ ಚಂದನವನ ಚೆನ್ನಾಗಿರುತ್ತೆ. ಇಲ್ಲವಾದರೆ ಕಷ್ಟ ಕಟ್ಟಿಟ್ಟ ಬುತ್ತಿ. ಮಾಹಿತಿ ಪ್ರಕಾರ ಸಿನಿಮಾರಂಗ ಚೇತರಿಕೆಗೆ ವರ್ಷವೇ ಬೇಕಿದೆ. ಅದರಲ್ಲೂ ಚಿತ್ರಮಂದಿರಗಳ ಪ್ರಾರಂಭ ಕೂಡ ಹೇಳುವಷ್ಟು ಸುಲಭವಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಹಲವು ವರ್ಷಗಳಿಂದಲೂ ಚಿತ್ರರಂಗ ಒಂದಷ್ಟು ಸಮಸ್ಯೆ ಎದುರಿಸುತ್ತಲೇ ಬಂದಿದೆ.ಆ ಸಾಲಿಗೆ ಕೋವಿಡ್ 19 ಸಂಕಷ್ಟ ಇನ್ನಷ್ಟು ಚಿಂತೆಗೀಡು ಮಾಡಿರುವುದಂತೂ ನಿಜ.
ಈ ಬಣ್ಣದ ಬದುಕನ್ನೇ ನಂಬಿದವರ ಪಾಲಿಗೆ ಕೋವಿಡ್ 19 ಅಕ್ಷರಶಃ ಯಮಸ್ವರೂಪಿ. ಅದೇನೆ ಸಮಸ್ಯೆ ಇದ್ದರೂ, ಈ ಮನರಂಜನೆ ಕ್ಷೇತ್ರ ತಕ್ಕಮಟ್ಟಿಗೆ ಎಲ್ಲಾ ನೋವನ್ನು ಮರೆಸುತ್ತದೆ. ಆದರೆ ಈಗ ಈ ಮನರಂಜನಾ ಕ್ಷೇತ್ರಕ್ಕೇ ತಲೆನೋವಾಗಿದೆ. ಎಲ್ಲಾ ಸಮಸ್ಯೆಗು ಇರುವಂತೆ ಇದಕ್ಕೂ ಒಂದು ಪರಿಹಾರ ಇದ್ದೇ ಇರುತ್ತೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂಬ ಆಶಾಭಾವನೆಯಲ್ಲೇ ಸಿನಿಮಾ ಮಂದಿ ದಿನ ಸವೆಸುತ್ತಿದ್ದಾರೆ.
* ವಿಜಯ್ ಭರಮಸಾಗರ