ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿಯ 50ನೇ ಸಭೆಯು ಚಿತ್ರಪ್ರೇಮಿಗಳಿಗೆ ಶುಭಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ಪೂರೈಸಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯನ್ನು ಶೇ. 5ಕ್ಕೆ ಇಳಿಸಲು ಮಂಡಳಿ ನಿರ್ಧರಿಸಿದೆ.
ಈವರೆಗೆ ಇದಕ್ಕೆ ಶೇ. 18 ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದಲ್ಲದೆ ತೆರಿಗೆ ಪದ್ಧತಿಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಂಗಳವಾರದ ಸಭೆಯಲ್ಲಿ ತರಲಾಗಿದೆ. ಫಿಶ್ ಸೊಲ್ಯೂಬಲ್ ಪೇಸ್ಟ್, ಎಲ್‌ಡಿ ಸ್ಲಾéಗ್‌ಗಳ ತೆರಿಗೆಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಆನ್‌ಲೈನ್ ಗೇಮಿಂಗ್ ಕಂಪೆನಿಗಳು, ಕುದುರೆ ರೇಸ್ ಮತ್ತು ಕ್ಯಾಸಿನೋಗಳ ವಹಿವಾಟಿನ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇಷ್ಟು ತೆರಿಗೆ ವಿಧಿಸುವುದರಿಂದ ಇಡೀ ಉದ್ಯಮವೇ ನಾಶವಾಗಲಿದೆ ಎಂಬ ಗೇಮಿಂಗ್
ಉದ್ಯಮಗಳ ಕಳವಳಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ನಿರ್ಮಲಾ, “ನಾವು ಯಾವ ಉದ್ಯಮವನ್ನೂ ನಾಶ ಮಾಡುತ್ತಿಲ್ಲ’ ಎಂದಿದ್ದಾರೆ.
ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಖಾಸಗಿ ಬಾಹ್ಯಾಕಾಶ ಕಂಪೆನಿಗಳು ನೀಡುವ ಉಪಗ್ರಹ ಸೇವೆಗಳಿಗೂ ತೆರಿಗೆ ವಿನಾಯಿತಿ ಒದಗಿಸಲಾಗಿದೆ.
ಇದೇ ವೇಳೆ, ಸೆಸ್ ಆಕರ್ಷಿಸುವ ನಿಟ್ಟಿನಲ್ಲಿ ಎಸ್‌ಯುವಿಗಳ ವ್ಯಾಖ್ಯಾನವನ್ನು ಬದಲಿಸಲಾಗಿದೆ. ಪ್ರಸ್ತುತ ಎಸ್‌ಯುವಿ ಎಂದು ಕರೆಸಿಕೊಳ್ಳಲು ನಾಲ್ಕು ಮಾನದಂಡಗಳಿದ್ದವು. ಆ ವಾಹನವು “ಎಸ್‌ಯುವಿ’ ಎಂದು ಕರೆಸಿಕೊಳ್ಳಬೇಕು, ನಾಲ್ಕು ಮೀ. ಅಥವಾ ಅದಕ್ಕಿಂತ ಹೆಚ್ಚು ಉದ್ದವಿರಬೇಕು, ಎಂಜಿನ್ ಸಾಮರ್ಥ್ಯ 1,500 ಸಿ.ಸಿ.ಗಿಂತ ಹೆಚ್ಚಿರಬೇಕು ಮತ್ತು ಗ್ರೌಂಡ್ ಕ್ಲಿಯರೆನ್ಸ್ ಕನಿಷ್ಠ 170 ಎಂ.ಎಂ. ಇರಬೇಕು. ಈ ವ್ಯಾಖ್ಯಾನವನ್ನು ಮಂಗಳವಾರದ ಸಭೆಯಲ್ಲಿ ಬದಲಾಯಿಸಲಾಗಿದ್ದು, ಇನ್ನು ಮುಂದೆ ಕೊನೆಯ 3 ಮಾನದಂಡಗಳಿದ್ದರೆ “ಎಸ್‌ಯುವಿ’ ಎಂದು ಪರಿಗಣಿಸಲಾಗುತ್ತದೆ.