ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಸಮಸ್ಯೆ ಎಂಥದ್ದು ಎಂಬುದು ಗೊತ್ತೇ ಇದೆ. ಎಷ್ಟು ಥಿಯೇಟರ್‌ಗಳಿದ್ದರೂ ಸಿಲಿಕಾನ್ ಸಿಟಿಯಲ್ಲಂತೂ ಅದಕ್ಕೆ ಬರ ಇದ್ದೇ ಇದೆ. ಈಗ ಬೆಂಗಳೂರಿನಲ್ಲಿ ಹೊಸ ಮಾಲ್ ತಲೆ ಎತ್ತಿದೆ. ಅಲ್ಲಿ ಐದು ಚಿತ್ರಮಂದಿರಗಳಿವೆ. ಆ ಪೈಕಿ ಮೂರು ಪರದೆಗಳನ್ನು ಕನ್ನಡ ಚಿತ್ರಗಳಿಗಾಗಿ ಕಾಯ್ದಿರಿಸಲಾಗಿದೆ. ಅಂದಹಾಗೆ, ಈ ಮಾಲ್ ಜಿ.ಟಿ. ಸಂಸ್ಥೆಯದ್ದು.
ಈ ಸಂಸ್ಥೆ ಪ್ರಸನ್ನ ಹಾಗೂ ಪ್ರಮೋದ್ ಚಿತ್ರಮಂದಿರಗಳನ್ನು ಹೊಂದಿದೆ. 1986 ರಲ್ಲಿ ಡಾ.ರಾಜ್‌ಕುಮಾರ್ ಈ ಚಿತ್ರಮಂದಿರಗಳಿಗೆ ಚಾಲನೆ ನೀಡಿದ್ದರು. ಕಳೆದ ವರ್ಷವಷ್ಟೇ ಪ್ರಮೋದ್ ಚಿತ್ರಮಂದಿರವನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ಸುಮಾರು 160 ಕೋಟಿ ವೆಚ್ಚದಲ್ಲಿ ಜಿಟಿ ಮಾಲ್ ಮತ್ತು ಅತ್ಯಾಧುನಿಕ 7.1 ಸೌಂಡ್ ಸೌಲಭ್ಯವುಳ್ಳ ಐದು ಪರೆದೆಗಳಿರುವ ಚಿತ್ರಮಂದಿರಗಳಿವೆ.
ಆ ಜಿಟಿ ಮಾಲ್‌ನಲ್ಲಿರುವ ನಾಲ್ಕು ಮಹಡಿಗಳಲ್ಲಿ ಮೊದಲ ಮಹಡಿಯನ್ನು ಬಿಗ್‌ಬಜಾರ್‌ಗೆ ನೀಡಲಾಗಿದೆ. ಅಂದಹಾಗೆ, ಈ ಜಿಟಿ ಮಾಲ್‌ನ ರೂವಾರಿಗಳಾರು ಗೊತ್ತಾ? ತಿಮ್ಮಯ್ಯ ಮಕ್ಕಳಾದ ಟಿ.ಆನಂದಪ್ಪ, ಟಿ.ಗಂಗಾಧರ್, ಟಿ.ರಾಮಕೃಷ್ಣ, ಟಿ.ಮಂಜುನಾಥ್. ಇವರೆಲ್ಲರಿಗೂ 2002ರಲ್ಲಿ ಮಾಲ್ ನಿರ್ಮಿಸುವ ಪ್ಲಾನ್ ಇತ್ತು. ಆ ಪ್ಲಾನ್ 2016ಕ್ಕೆ ಈಡೇರಿದೆ. ಈ ಮಾಲ್ ಉಸ್ತುವಾರಿಯನ್ನು ಸತ್ಯಂ ಸಂಸ್ಥೆ ವಹಿಸಿಕೊಂಡಿದೆ.
ಅಂದಹಾಗೆ, ಈ ಮಾಲ್‌ನಲ್ಲಿರುವ ಚಿತ್ರಮಂದಿರಗಳ ಟಿಕೆಟ್ ಬೆಲೆ 100 ರಿಂದ 120 ರೂ. ಇರಲಿದೆ. ಗೋಲ್ಡ್ ಕ್ಲಾಸ್‌ಗೆ 300 ರೂ. ನಿಗದಿಪಡಿಸಲಾಗಿದೆ. ನಾಲ್ಕು ಚಿತ್ರಮಂದಿರಗಳಲ್ಲಿ 250 ಆಸನಗಳಿದ್ದರೆ, ಒಂದು ಚಿತ್ರಮಂದಿರದಲ್ಲಿ 150 ಆಸನಗಳಿವೆ. ಇತ್ತೀಚೆಗೆ ನಡೆದ ಪೂಜೆ ಸಮಾರಂಭದಲ್ಲಿ ನಟ ರವಿಚಂದ್ರನ್, ಶಿವರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರೆ ಇತರರು ಪಾಲ್ಗೊಂಡಿದ್ದರು. ಮಾರ್ಚ್ 1ರಂದು ಮಾಲ್‌ಗೆ ಚಾಲನೆ ಸಿಗಲಿದೆ.