ಮೈಸೂರು: ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಮತ್ತು ಭಾಷೆಯ ಸದ್ಬಳಕೆಯನ್ನು ಉತ್ತೇಜಿಸಲು ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ (ಸಿಐಐಎಲ್) ಭಾರತದ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆ ‘ಕೂ’ನ ಮಾತೃಸಂಸ್ಥೆ ಬಾಂಬಿನೇಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ (MoU) ಮಾಡಿಕೊಂಡಿದೆ. ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸ್ಥಾಪಿಸಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಕೂ ಆ್ಯಪ್‌ನಲ್ಲಿ ಕಂಟೆಂಟ್ ನಿರ್ವಹಣೆಯ ನೀತಿ ನಿಯಮ ಮತ್ತು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಕೆಲಸ ನಿರ್ವಹಿಸಲಿದೆ. ಬಳಕೆದಾರರಿಗೆ ಆನ್ ಲೈನ್ ಬೆದರಿಕೆ, ನಿಂದನೆಗಳನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವತ್ತ ಕೇಂದ್ರೀಯ ಭಾಷಾ ಭಾರತೀಯ ಸಂಸ್ಥೆ ಗಮನಹರಿಸಲಿದೆ.
ಈ ಸಹಭಾಗಿತ್ವದ ಮೂಲಕ ಸಂವಿಧಾನದದ 8ನೇ ಶೆಡ್ಯೂಲ್‌ನಲ್ಲಿ ನಮೂದಿಸಿರುವ 22 ಭಾಷೆಗಳಲ್ಲಿನ ಸೂಕ್ಷ್ಮ ಅಥವಾ ಆಕ್ಷೇಪಾರ್ಹ ಪದಗಳು, ಪದಗುಚ್ಛಗಳು ಮತ್ತು ಸಂಕ್ಷಿಪ್ತ ಪದಗಳನ್ನು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಪಟ್ಟಿ ಮಾಡಲಿದೆ. ಇದಕ್ಕಾಗಿ ಕೂ ಸಂಬಂಧಿತ ದತ್ತಾಂಶಗಳನ್ನು ಮತ್ತು ತಾಂತ್ರಿಕ ಸಹಕಾರವನ್ನು ಒದಗಿಸಲಿದೆ. ಈ ಒಪ್ಪಂದವು ಎರಡು ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಭಾಷೆಗಳ ಜವಾಬ್ದಾರಿಯುತ ಬಳಕೆಯನ್ನು ಅಭಿವೃದ್ಧಿಪಡಿಸಲಿದೆ. ಮತ್ತು ಕೂ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ಆನ್‌ಲೈನ್ ಜಗತ್ತಿನಲ್ಲಿ ಕಟ್ಟಿಕೊಡಲಿದೆ.
ಕೂ ಆ್ಯಪ್ ಮತ್ತು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ಈ ಸಹಭಾಗಿತ್ವವು ಭಾರತೀಯ ಭಾಷೆಗಳಲ್ಲಿನ ಆಕ್ಷೇಪಾರ್ಹ, ಅಗೌರವಯುತ ಮತ್ತು ಅವಹೇಳನಕಾರಿ ಪದಗಳ, ಅಭಿವ್ಯಕ್ತಿಯ ಪಟ್ಟಿಯನ್ನು ರೂಪಿಸಲಿದೆ. ಜೊತೆಗೆ ಭಾರತೀಯ ಭಾಷೆಗಳಲ್ಲಿ ಬಳಕೆದಾರರು ಹಂಚುವ ವಿಷಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡಲಿದೆ. ಈವರೆಗೆ ಭಾರತೀಯ ಭಾಷೆಗಳಲ್ಲಿ ಇಂತಹ ಯಾವುದೇ ಪ್ರಯತ್ನಗಳೂ ನಡೆದಿಲ್ಲ ಎಂಬುದು ಉಲ್ಲೇಖಾರ್ಹ ವಿಷಯವಾಗಿದೆ.
ಈ ಒಪ್ಪಂದವನ್ನು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಕೂ ಆ್ಯಪ್‌ನಲ್ಲಿ ಸಂವಹನ ನಡೆಸಲು ದೊರೆತಿರುವ ಅವಕಾಶವು ಭಾರತೀಯ ಭಾಷೆಗಳ ಬಳಕೆದಾರರಿಗೆ ಸಂವಿಧಾನಬದ್ಧ ಸಮಾನತೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಒದಗಿಸಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಗಿ ‘ಕೂ’ನಲ್ಲಿ ನಡೆಯುವ ಸಂವಹನದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವಾಗಿದೆ. ಜೊತೆಗೆ ಆಕ್ಷೇಪಾರ್ಹ ಭಾಷೆಯ ಬಳಕೆ ಮತ್ತು ನಿಂದನೆಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಇರಿಸಬೇಕಿದೆ. ಈ ನಿಟ್ಟಿನಲ್ಲಿ ‘ಕೂ’ ನಡೆಸುತ್ತಿರುವ ಪ್ರಯತ್ನ ಗಮನಾರ್ಹ. ಹೀಗಾಗಿ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಸಾಮಾಜಿಕ ಜಾಲತಾಣವನ್ನು ಶುದ್ಧಗೊಳಿಸುವ ಕೂ ಪ್ರಯತ್ನಕ್ಕೆ ಕೈಜೋಡಿಸಿದೆ ಎಂದು ತಿಳಿಸಿದರು.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಕೂ ಸಹ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, ಭಾರತದ ಬಹುಭಾಷೆಗಳಲ್ಲಿ ಸಂವಹನ ನಡೆಸುವ ಮತ್ತು ಸಂಪರ್ಕಿಸುವ ನೆರವು ನೀಡುವ ಕೂ ಈ ಒಪ್ಪಂದದ ಮೂಲಕ ತನ್ನ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲಿದೆ. ಬಳಕೆದಾರರು ಭಾಷೆಗಳ ವೈಶಿಷ್ಟ್ಯದ ಜೊತೆಗೆ ‘ಕೂ’ನಲ್ಲಿ ಸಂವಹನ ನಡೆಸಲು ನಾವು ಬಯಸುತ್ತೇವೆ. ಅಂತರ್ಜಾಲ ಜಗತ್ತನ್ನು ಇನ್ನಷ್ಟು ಸುರಕ್ಷಿತ, ನಂಬಿಕೆ ಮತ್ತು ವಿಶ್ವಾಸಾರ್ಹಗೊಳಿಸಲು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ಜೊತೆ ಕೈಜೋಡಿಸಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅವಕಾಶ ಒದಗಿಸುವ ಕೂ ಸದ್ಯ 9 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಅಲ್ಲದೇ 22 ಭಾಷೆಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಸಿಐಐಎಲ್ ಜೊತೆಗಿನ ಈ ಸಹಯೋಗದ ಮೂಲಕ, ಕೂ ಅಪ್ಲಿಕೇಶನ್ ಸ್ಥಳೀಯ ಭಾಷೆಗಳಲ್ಲಿ ಬಳಸಲಾಗುವ ಪದಗಳ ತರ್ಕ, ವ್ಯಾಕರಣ ಮತ್ತು ಆಯಾ ಸಂದರ್ಭದ ಪದಬಳಕೆಯ ಸೂಕ್ಷ್ಮಗಳ ಕುರಿತು ತಿಳಿವಳಿಕೆಯನ್ನು ಪ್ರಚುರಪಡಿಸುತ್ತದೆ. ಹೆಚ್ಚಿನದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲಿದೆ. ಹಾಗೂ ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ ಸಮರ್ಪಕ ಕಂಟೆಂಟ್ ನಿರ್ವಹಣೆಯ ಮೂಲಕ ಜನರು ಉತ್ತಮ ಕಂಟೆಂಟ್‌ಗಳಲ್ಲಿ ಎಂಗೇಜ್ ಆಗುವಂತೆ ಮಾಡಲಿದೆ.