Advertisement

ಸಿಐಡಿಯಿಂದ ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ ತನಿಖೆ: ಬೊಮ್ಮಾಯಿ

03:56 PM Feb 23, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಸ್ಪೋಟ ದುರಂತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಿಐಡಿ ಮೂಲಕ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

Advertisement

ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗಗಿಂತಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೀಕರವಾಗಿ ದುರಂತ ಸಂಭವಿಸಿರುವುದು ನೋವಿನ ಸಂಗತಿ. ಈ ಘಟನೆಯಲ್ಲಿ ಮೃತಪಟ್ಟಿರುವ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಮೃತರ ಕುಟಂಬ ಸದಸ್ಯರಿಗೆ ತಲಾ 5 ಲಕ್ಷ ರೂಗಳ ಪರಿಹಾರ ನೀಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಷ್ಟು ಕಲ್ಲುಕ್ವಾರಿ ಮತ್ತು ಕ್ರಷರ್‍ ಗಳು ನಡೆಯುತ್ತಿವೆ. ಎಷ್ಟು ಮಂದಿ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ, ಪರವಾನಿಗೆಯನ್ನು ಪಡೆದುಕೊಂಡಿರುವ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆಯೇ ಎನ್ನುವುದರ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದು ವೇಳೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದರೆ ಕೂಡಲೇ ಸ್ಥಗಿತಗೊಳಿಸಲು ನಿರ್ದೇಶನ ಮಾಡಿದ್ದೇವೆ. ಪ್ರಕರಣದಲ್ಲಿ ಕಂದಾಯ-ಪೊಲೀಸ್ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತು ಸಹ ತನಿಖೆ ನಡೆಸಲಾಗುತ್ತಿದ್ದು ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದರೆ ಅವರ ಮೇಲೆಯೂ ಸಹ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.

ಆಂಧ್ರ ಪ್ರದೇಶದ ಇಬ್ಬರು ,ಸ್ಥಳೀಯ ಒಬ್ಬ ವ್ಯಕ್ತಿ ಕ್ವಾರಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಫೆ.07 ರಂದು ಕ್ವಾರಿಯ ಮೇಲೆ ದಾಳಿ ನಡೆಸಿ ಸ್ಪೋಟಕ ವಸ್ತುಗಳನ್ನು ಪತ್ತೆಹಚ್ಚಲು ನಿರ್ಲಕ್ಷ್ಯವಹಿಸಿರುವ ಕುರಿತು ಮತ್ತು ಆರೋಪಿಗಳನ್ನು ಬಂಧಿಸಲು ವಿಳಂಭವಾಗಿರುವ ಕುರಿತು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು( ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ-ಡಿವೈಎಸ್ಪಿ) ಪಾತ್ರದ ಕುರಿತು ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡಲು ಎಡಿಜಿಪಿ ಅವರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಕೂಡಲೇ ಕ್ರಮ ಜರುಗಿಸುತ್ತೇನೆ. ಈ ಪ್ರಕರಣದಲ್ಲಿ ಯಾವುದೇ ಪಕ್ಷದ ವ್ಯಕ್ತಿ ಭಾಗಿಯಾಗಿರಲಿ ಯಾರನ್ನು ಸಹ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ:ಬ್ರಾಹ್ಮಣರ ಕ್ಷಮೆ ಕೋರಿದ ಕಿಶೋರ್:ಪೊಗರು ಚಿತ್ರದ 14 ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿಗೆ   

Advertisement

ಗೋಮಾಳ ಅಥವಾ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆಯೇ ಎಂಬುದರ ಕುರಿತು ಸಹ ತನಿಖೆ ನಡೆಸಲಾಗುತ್ತದೆ ಕಂದಾಯ, ಪೊಲೀಸ್, ಅರಣ್ಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅಧಿಕಾರಿಗಳು ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದ್ದು ಪ್ರಸ್ತುತ ತಲೆಮರಿಸಿಕೊಂಡಿರುವ ಮೂವರನ್ನು ಬಂಧಿಸಲು ಪ್ರತ್ಯೇಕವಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು ಎಲ್ಲಾ ಹಂತದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.

ಸುತ್ತೋಲೆ ಬದಲಾವಣೆ: ರಾಜ್ಯದಲ್ಲಿ ಎಷ್ಟು ಕಡೆ ಗಣಿಗಾರಿಕೆ ನಡೆಸಲಾಗುತ್ತಿದೆ ಅದರಲ್ಲಿ ಎಷ್ಟು ಮಂದಿ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವರದಿ ಸಲ್ಲಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ದುರಂತ ಸಂಭವಿಸಿದ ಬಳಿಕ ಪ್ರತಿ ತಿಂಗಳು ವರದಿ ಸಲ್ಲಿಸಲು ಸುತ್ತೋಲೆಯನ್ನು ಹೊರಡಿಸಿದ್ದೇನೆ. ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುವರನ್ನು ಸದೆಬಡೆಯುವ ಕೆಲಸವನ್ನು ಮಾಡುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಎಡಿಜಿಪಿ ಪ್ರತಾಪ್‍ರೆಡ್ಡಿ, ಈಜಿಪಿ ಚಂದ್ರಶೇಕರ್, ಜಿಲ್ಲಾಧಿಕಾರಿ ಆರ್.ಲತಾ, ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆವಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next