ಮೈಸೂರು:ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಕರಣವನ್ನು ಗುರುವಾರ ಸಿಐಡಿ ತನಿಖೆಗೆ ನೀಡಿದೆ. ಇಬ್ಬರು ಆರೋಗ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹಳೆ ನೋಟಿಸ್ ಅಂಟಿಸಿದ್ದ ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರನ್ನು ಕರ್ತವ್ಯ ಲೋಪದ ಕಾರಣಕ್ಕೆ ಅಮಾನತು ಮಾಡಲಾಗಿದೆ.ಪ್ರಕರಣ ಬೆಳಕಿಗೆ ಬಂದ ನಂತರ ಹಳೆ ನೋಟಿಸ್ ಅಂಟಿಸಿ ಆರೋಗ್ಯ ಇಲಾಖೆಗೆ ಮುಜುಗರ ತಂದಿದ್ದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಅನಧಿಕೃತ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ರವಿ ಅವರನ್ನು ಅಮಾನತು ಮಾಡಲಾಗಿದೆ.ಇಲಾಖೆ ತನಿಖೆ ಬಾಕಿ ಇರಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಮೈಸೂರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈಗ ಬಂಧಿತರಾಗಿರುವವರು ಯಾರೂ ವೈದ್ಯರಲ್ಲ.ಎಲ್ಲಾ ಲ್ಯಾಬ್ ಟೆಕ್ನಿಷಿಯನ್ ಗಳಿದ್ದಾರೆ. ಮೈಸೂರು ಮಾತಾ ಆಸ್ಪತ್ರೆ ಮಾಲಕ ವೈದ್ಯ ಚಂದನ್ ಬಲ್ಲಾಳ್ ಕೂಡ ವೈದ್ಯನಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದು ರಾಜ್ಯಾದ್ಯಂತ ಇರುವ ಜಾಲ. ಭ್ರೂಣ ಹತ್ಯೆ ತಡೆಯಲು ಅಧಿಕಾರಿಗಳು ವಿಫಲ ಆಗಿದ್ದಾರೆ. ನಮ್ಮ ಇಲಾಖೆಯಲ್ಲಿ ಆಗಿರುವ ಲೋಪದ ಬಗ್ಗೆ ಮುಚ್ಚುಮರೆ ಇಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗುತ್ತೆ. ಯಾವುದೇ ಮುಲಾಜು ನೋಡಬೇಡಿ ಎಂದು ಸಿಎಂ ಹೇಳಿದ್ದಾರೆ. ಇದೊಂದು ವ್ಯವಸ್ಥಿತ ಜಾಲ.ಕೇವಲ ಮಂಡ್ಯ, ಮೈಸೂರು ದಾವಣಗೆರೆ ಅಂತ ಹೇಳಲು ಸಾಧ್ಯವಿಲ್ಲ.ಈ ರೀತಿಯ ಚಟುವಟಿಕೆ ರಾಜ್ಯಾದ್ಯಂತ ನಡೆದಿರಬಹುದು.ಈಗಾಗಿ ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ ಎಂದರು.
ಇದು ಹೇಯ ಕೃತ್ಯ. ದಾಖಲೆ ಪ್ರಾಕರ 270 ಭ್ರೂಣ ಹತ್ಯೆಯಾಗಿದೆ. ಇದಕ್ಕಿಂತ ಹೆಚ್ಚು ಆಗಿರಬಹದು. ಇದನ್ನು ಎಷ್ಟು ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ ಗೊತ್ತಿಲ್ಲ. ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.ಇರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.