ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ರೇಸ್ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ಅಧಿಕಾರಿಗಳು ಕ್ಲಬ್‌ನ ಮೇಲೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ವೀನ್ ಲತೀಫಾ ಸೇರಿದಂತೆ ಕೆಲವು ಕುದುರೆಗಳಿಗೆ ಉದ್ದೀಪನ ಮದ್ದು ನೀಡುತ್ತಿದ್ದಾರೆ ಎಂದು ಆರೋಪಿಸಿ ರೇಸ್ ಕುದುರೆಗಳ ಮಾಲೀಕರ ಸಂಘದ ಅಧ್ಯಕ್ಷ ಚಂದ್ರೇಗೌಡ ಇತ್ತೀಚೆಗೆ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಗಂಭೀರ ಸ್ವರೂಪದ ಪ್ರಕರಣವಾಗಿದ್ದರಿಂದ ಸರ್ಕಾರ ಹೆಚ್ಚಿನ ವಿಚಾರಣೆಗಾಗಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಡಿಐಜಿ ನಾಗರಾಜ್, ಎಸ್ಪಿ ಕುಮಾರಸ್ವಾಮಿ ನೇತೃತ್ವದ ತಂಡ ಬೆಳಗ್ಗೆ 11 ಗಂಟೆಗೆ ದಾಳಿ ನಡೆಸಿ, ಕ್ಲಬ್‌ನ ಸಿಇಒ ನಿರ್ಮಲ್‌ಪ್ರಸಾದ್ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳ ವಿಚಾರಣೆ ನಡೆಸಿದರು.
ಪದಾಧಿಕಾರಿಗಳಿಗೆ ನೋಟಿಸ್: ಪ್ರಕರಣ ಸಂಬಂಧ ಕ್ಲಬ್‌ನ ಅಧ್ಯಕ್ಷ ಜಗನ್ನಾಥ್, ಸಿಇಒ ನಿರ್ಮಲ್ ಪ್ರಸಾದ್, ಚೀಫ್ ಸ್ಟೈಫಂಡರಿ ಆಫೀಸರ್ ಪ್ರದ್ಯುಮ್ನ ಸಿಂಗ್, ವೈದ್ಯ ಡಾ.ಮಹೇಶ್, ಕುದುರೆ ಮಾಲೀಕ ಅರ್ಜುನ್ ಸಜನಾನಿ ಮತ್ತು ಜಾಕಿ ನೀಲ್ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೇಸ್‌ನ ದೃಶ್ಯಾವಳಿ, ಹಾರ್ಡ್ ಡಿಸ್ಕ್ ವಶ: ಗುರುವಾರ ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳ ತಂಡ, ಕ್ಲಬ್ ಹಾಗೂ ಕುದುರೆ ಲಾಯವನ್ನು ಸಂಪೂರ್ಣ ವಾಗಿ ಪರಿಶೀಲನೆ ನಡೆಸಿತು. ಬಳಿಕ ರೇಸ್ ಜಾಗ, ಕುದುರೆ ಲಾಯ ಬಳಿಯಿದ್ದ ಸಿಸಿ ಕ್ಯಾಮೆರಾಗಳ ದೃಶ್ಯವಾಳಿಗಳು, ಕಂಪ್ಯೂಟರ್‌ಗಳ ಹಾರ್ಡ್‌ಡಿಸ್ಕ್ಗಳನ್ನು ವಶಕ್ಕೆ ಪಡೆಯಿತು. ಜತೆಗೆ ಕ್ವೀನ್ ಲತೀಫಾ ಭಾಗವಹಿಸಿದ್ದ ರೇಸ್‌ನ ಸಂದರ್ಭದಲ್ಲಿ ನಡೆದಿರುವ ಬೆಟ್ಟಿಂಗ್ ದಾಖಲೆಗಳನ್ನು ಸಹ ಸಂಗ್ರಹಿಸಲಾಗಿದೆ ಎಂದು ಸಿಐಡಿಯ ಮೂಲಗಳು ತಿಳಿಸಿವೆ.
ಏನಿದು ಉದ್ದೀಪನ ಮದ್ದು ಪ್ರಕರಣ ?
ಕುದುರೆ ಕ್ವೀನ್ ಲತೀಫಾ ಮಾರ್ಚ್‌ನಲ್ಲಿ ನಡೆದ ಬಿಟಿಸಿ ಟ್ರೋಫಿಯಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಅದರ ಮೂತ್ರದ ಮಾದರಿಯನ್ನು ಸಂಗ್ರಹಿಸಿ ದೆಹಲಿಯ ಪರೀûಾ ಕೇಂದ್ರಕ್ಕೆ ಕಳುಹಿಸಿದಾಗ ನಿಷೇಧಿತ ಮದ್ದನ್ನು ಕುದುರೆಗೆ ನೀಡಿರುವುದು ವರದಿಯಲ್ಲಿ ಗೊತ್ತಾಗಿತ್ತು. ಇದಾದ ಬಳಿಕ ಊಟಿಯಲ್ಲಿ ನಡೆದ ಟ್ರೋಫಿಯಲ್ಲಿ ಲತೀಫಾ ಭಾಗವಹಿಸಿತ್ತು.
ಈ ಕುದುರೆ ಮೇಲೆ ಬುಕ್ಕಿಗಳು ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದರು. ಆದರೆ, ಲತೀಫಾ 4ನೇ ಸ್ಥಾನಗಳಿಸಿ ಸೋಲು ಕಂಡಿತ್ತು. ಈ ಮಾಹಿತಿ ಇದ್ದರೂ ಟರ್ಫ್ನ ಸಿಇಒ ನಿರ್ಮಲ್ ಪ್ರಸಾದ್ ಹಾಗೂ ಪದಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ರೇಸ್ ಕುದುರೆಗಳ ಮಾಲೀಕರ ಸಂಘದ ಅಧ್ಯಕ್ಷ ದೂರು ನೀಡಿದ್ದರು.