ಹೊಸದಿಲ್ಲಿ: ಅಮೆರಿಕದ ಗುಪ್ತಚರ ಸಂಸ್ಥೆ (CIA) ವಿಶ್ವಹಿಂದೂ ಪರಿಷತ್ (VHP) ಹಾಗೂ ಬಜರಂಗ ದಳವನ್ನು ‘ಧಾರ್ಮಿಕ ಉಗ್ರ ಸಂಘಟನೆ’ಗಳು ಎಂದು ಹೆಸರಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಮೆರಿಕ ಗುಪ್ತಚರ ಇಲಾಖೆ (CIA) ವಾರ್ಷಿಕವಾಗಿ ಬಿಡುಗಡೆ ಮಾಡುವ ‘ವರ್ಲ್ಡ್ ಫ್ಯಾಕ್ಟ್ ಬುಕ್’ನಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಈ ಎರಡೂ ಸಂಘಟನೆಗಳನ್ನು ‘ರಾಜಕೀಯವಾಗಿ ಒತ್ತಡ ಹೇರುವ’ ಸಂಘಟನೆಗಳೂ ಎಂದೂ ಪ್ರಸ್ತಾವಿಸಲಾಗಿದೆ. RSS, ಹುರ್ರಿಯತ್ ಕಾನ್ಫರೆನ್ಸ್, ಜಮೀಯತ್ ಉಲೇಮಾ-ಇ-ಹಿಂದ್ ಸೇರಿದಂತೆ ದೇಶದ ಹಲವು ಸಂಘಟನೆಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. RSS ಅನ್ನು ರಾಷ್ಟ್ರೀಯವಾದಿ ಸಂಘಟನೆ, ಹುರ್ರಿಯತ್ ಕಾನ್ಫರೆನ್ಸ್‌ಗೆ ಪ್ರತ್ಯೇಕತಾವಾದಿ ಸಂಘಟನೆ, ಜಮೀಯತ್ ಉಲೇಮಾವನ್ನು ಧಾರ್ಮಿಕ ಸಂಘಟನೆ ಎಂದು ವರ್ಗೀಕರಿಸಲಾಗಿದೆ.
ಕ್ಷಮೆ ಕೇಳಿ- VHP: ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ VHP, ‘ಈ ಕೂಡಲೇ CIA ಭಾರತೀಯರ ಕ್ಷಮೆ ಕೇಳಬೇಕು. ಇಲ್ಲವಾದರೆ, ಜಾಗತಿಕ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದೆ.
ಟ್ವಿಟರ್ ನಲ್ಲಿ ಆಕ್ರೋಶ: CIA ಕ್ರಮದ ಬಗ್ಗೆ ಟ್ವಿಟರ್ ನಲ್ಲಿ ಟೀಕಾ ಪ್ರಹಾರ ನಡೆಸಲಾಗಿದೆ. ಜಾಗೃತಿ ಶುಕ್ಲಾ ಎಂಬುವರು, ‘VHP, ಬಜರಂಗದಳಗಳು ಯಾಕೆ ಭಯೋತ್ಪಾದಕ ಸಂಘಟನೆಗಳೆನಿಸಿಕೊಂಡವು? ಮೋದಿ ಸರ್ಕಾರದ ಮೇಲೆ ಒತ್ತಡ ಹೇರಲಿಕ್ಕೋ?’ ಎಂದು ಪ್ರಶ್ನಿಸಿದ್ದಾರೆ. ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಅಮೆರಿಕವನ್ನು ಟೀಕಿಸಿದ್ದಾರೆ.
ಏನಿದು ಫ್ಯಾಕ್ಟ್ ಬುಕ್?
ಅಮೆರಿಕದ ಗುಪ್ತಚರ ಇಲಾಖೆ ತಾನು ಕ್ರೋಡೀಕರಿಸಿದ ಅನೇಕ ಗುಪ್ತ ಮಾಹಿತಿಗಳ ಸಂಗ್ರಹಗಳನ್ನು ‘ವರ್ಲ್ಡ್ ಫ್ಯಾಕ್ಟ್ ಬುಕ್’ ಎಂಬ ಹೆಸರಿನಲ್ಲಿ ವಾರ್ಷಿಕವಾಗಿ ಪ್ರಕಟಿಸುತ್ತದೆ. ಇದರಲ್ಲಿ ಜಗತ್ತಿನ 267 ದೇಶಗಳ ಬಗ್ಗೆ ಮಾಹಿತಿ ಇರುತ್ತದೆ. ಈ ಪುಸ್ತಕ ಸಾರ್ವಜನಿಕರ ಬಳಕೆಗಾಗಿ ಅಲ್ಲದೆ, ಅಮೆರಿಕದ ಸಂಸದರ ಅವಗಾಹನೆಗಾಗಿ ಮಾತ್ರವೇ ಮುದ್ರಿಸಲಾಗುತ್ತದೆ. ವಿವಿಧ ತನಿಖಾ ಸಂಸ್ಥೆಗಳು ಹೆಚ್ಚುವರಿ ಮಾಹಿತಿಗಾಗಿ ಈ ಪುಸ್ತಕವನ್ನು ಬಳಸಿಕೊಳ್ಳುತ್ತವೆ.