ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರು ಮಾ.31 ಮತ್ತು ಏಪ್ರಿಲ್ 1ರಂದು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಮೈತ್ರಿ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಭಾನುವಾರ ಸಂಜೆ 4 ಗಂಟೆಗೆ ನಾರಾಯಣ ಶಾಸ್ತ್ರೀ ರಸ್ತೆಯ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕೃಷ್ಣರಾಜ ಕ್ಷೇತ್ರದಲ್ಲಿ ಮತಯಾಚನೆ ಆರಂಭಿಸಲಿದ್ದಾರೆ. ಸೋಮವಾರ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸೇರಿದಂತೆ ಇನ್ನಿತರ ಮುಖಂಡರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಮಾತನಾಡಿ, ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿರುವ ಬಿಜೆಪಿ, ಕೋಮುದಳ್ಳುರಿ ಹರಡಲು ಪ್ರಚೋದನೆ ನೀಡುತ್ತಿದೆ. ಇಂತಹ ಕೋಮುವಾದಿಯನ್ನು ಆಡಳಿತದಿಂದ ದೂರವಿಡುವ ಸಲುವಾಗಿ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು, ಭಿನ್ನಾಭಿಪ್ರಾಯವನ್ನು ಮರೆತು ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಪರ ಕೆಲಸ ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಅಧ್ಯಕ್ಷ ಟಿ.ಎಸ್.ರವಿಶಂಕರ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ, ದಕ್ಷಿಣಾಮೂರ್ತಿ, ಮುಖಂಡರುಗಳಾದ ಎಂ.ಸಿ.ಚಿಕ್ಕಣ್ಣ, ಎನ್.ಎಸ್.ಗೋಪಿನಾಥ್, ಜಿ ಸೋಮಶೇಖರ್, ವೀಣಾ, ಮಂಜುಳಾ ಮಾನಸ,ನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ ಮತ್ತಿತರರು ಹಾಜರಿದ್ದರು.