Advertisement

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಯೋಜನೆಗಳಿಗೆ ಚಾಲನೆ

09:35 AM Mar 29, 2018 | Karthik A |

ಕಾಸರಗೋಡು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ 2018-19ರ ಸಾಲಿನ ಕಾಸರಗೋಡು ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಯೋಜನೆಗಳಿಗೆ ಮಂಗಳವಾರ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು. ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ| ಎಂ.ಜಿ.ಆರ್‌. ಅರಸ್‌ ಅವರು ಚುಟುಕು ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಮೈಸೂರಿನ ಮೇಘನಾ ಚಾರಿಟೆಬಲ್‌ ಟ್ರಸ್ಟ್‌ ಸ್ಥಾಪಕ ಅಧ್ಯಕ್ಷೆ ಲತಾ ಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗೋವಾ ಕನ್ನಡ ಸಂಘದ ಅಧ್ಯಕ್ಷ ಅರುಣ್‌ ಕುಮಾರ್‌, ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ. ಕುಳಮರ್ವ, ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಅಧ್ಯಕ್ಷ ಶಿವರಾಮ ಕಾಸರಗೋಡು, ಚುಟುಕು ಕವಿ, ಪತ್ರಕರ್ತ ವಿರಾಜ್‌ ಅಡೂರು, ವಿಕೆಎಂ ನಾಟಕ ಸಂಸ್ಥೆಯ ಅಧ್ಯಕ್ಷ ಕೆ.ಎಸ್‌. ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ, ಕೆಬಿಟಿ ಬಸ್‌ ಮಾಲಕ ನಿರಂಜನ ಕೊರಕ್ಕೋಡು, ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಸಪ್ತಗಿರಿ ಮಹಿಳಾ ಭಜನಾ ಸಂಘದ ಸದಸ್ಯರು ಪ್ರಾರ್ಥಿಸಿದರು.

ವಿಚಾರಗೋಷ್ಠಿ: ಈ ಸಂದರ್ಭದಲ್ಲಿ ಕನ್ನಡ ಗ್ರಾಮದಲ್ಲಿ ನಡೆದ ಚುಟುಕು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅವರು ಮಾತನಾಡಿ ಚುಟುಕು ಜೀವ ಅರಳಿಸುವ ಗುಟುಕಿನಷ್ಟು ಶಕ್ತಿಯುತ. ವಿಡಂಬನೆ, ಹಾಸ್ಯ, ಆಹ್ಲಾದ ಹಾಗೂ ವಿಚಾರಗಳ ಹೂರಣದಲ್ಲಿ ಚುಟುಕಗಳು ರಚನೆಯಾಗಬೇಕು ಎಂದು ಹೇಳಿದರು. ಚುಟುಕು ರಚನೆಯ ಇತಿಮಿತಿಗಳು ಎಂಬ ವಿಚಾರದಲ್ಲಿ ಪ್ರಬಂಧ ಮಂಡಿಸಿದ ಶಿಕ್ಷಕ ಹರೀಶ್‌ ಸುಲಯ ಒಡ್ಡಂಬೆಟ್ಟು ಅವರು ಮಾತನಾಡಿ, ಕಾವ್ಯಗಳು ಅಂತರ್ಮುಖೀ ಹಾಗೂ ಅನಂತಮುಖೀ. ಕಾವ್ಯಕ್ಕೆ ನಿಲುಕದ ವಸ್ತುವಿಲ್ಲ. ಕವಿಯು ತನ್ನ ಅನುಭವಗಳನ್ನು ಕಾವ್ಯದ ಮೂಲಕ ಬಿಂಬಿಸುತ್ತಾನೆ. ಚುಟುಕುಗಳು ಹಾಗೂ ಹನಿಗವನಗಳು ಪ್ರತ್ಯೇಕ ಲಕ್ಷಣವನ್ನು ಹೊಂದಿದೆ. ಚುಟುಕುಗಳು ಕುಟುಕುವಂತಿರಬೇಕು ಆದರೆ ಮನ ನೋಯಿಸುವಂತಿರಬಾರದು ಎಂದು ಹೇಳಿದರು. 

ಕಾಸರಗೋಡಿನ ಚುಟುಕು ಸಾಹಿತ್ಯದ ಕುರಿತು ಮಾತನಾಡಿದ ಪತ್ರಕರ್ತ ಪುರುಷೋತ್ತಮ ಭಟ್‌ ಅವರು, ಕಾಸರಗೋಡಿನ ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಹೆಚ್ಚು. ಸಾಹಿತ್ಯದ ಉದ್ದೇಶವೇ ಸುಸ್ಥಿರ ಹಾಗೂ ಸಂಯಮದ ಜೀವನದ ರೂಪೀಕರಣ. ಕಾಸರಗೋಡು ಜಿಲ್ಲೆಯಲ್ಲಿ ಗಣಪತಿ ದಿವಾಣರಿಂದ ಹಿಡಿದು ಈವರೆಗೆ ಅನೇಕ ಚುಟುಕು ಕವಿಗಳನ್ನು ಕಂಡಿದ್ದೇವೆ. ಚುಟುಕು ಸಾಹಿತ್ಯಕ್ಕೆ ಕಾಸರಗೋಡಿನಲ್ಲಿ ವಿಶೇಷ ಮನ್ನಣೆ ಹಿಂದಿನಿಂದಲೂ ಇದೆ ಎಂದು ಹೇಳಿದರು.

ಕವಿಗೋಷ್ಠಿ: ಈ ಸಂದರ್ಭದಲ್ಲಿ ನಡೆದ ಬಹುಭಾಷಾ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಹಿಸಿ ಮಾತನಾಡಿ, ಕಾವ್ಯ ಮಾಧ್ಯಮದಲ್ಲಿ ಚುಟುಕು ಪ್ರಕಾರವು ಹೆಚ್ಚು ಸಾಂದ್ರವಾಗಿರುವ ಮಾಧ್ಯಮ. ಅವಸರದ ಇಂದಿನ ದಿನದಲ್ಲಿ ಹೆಚ್ಚಿನ ಯುವ ಜನಾಂಗ ಚುಟುಕು ಸಾಹಿತ್ಯವನ್ನು ಹೆಚ್ಚು ಇಷ್ಟ ಪಡುತ್ತಾರೆ ಎಂದು ಹೇಳಿದರು.
 
ಕವಿಗೋಷ್ಠಿಯಲ್ಲಿ ಕೆ.ನರಸಿಂಹ ಭಟ್‌ ಏತಡ್ಕ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌, ರಂಗ ಶರ್ಮ ಉಪ್ಪಂಗಳ, ಜಯ ಮಣಿಯಂಪಾರೆ, ಶಾರದಾ ಎಸ್‌. ಭಟ್‌ ಕಾಡಮನೆ, ಪ್ರಭಾವತಿ ಕೆದಿಲಾಯ ಪುಂಡೂರು, ಜ್ಯೋತ್ಸಾ$° ಕಡಂದೇಲು, ಶ್ಯಾಮಲಾ ರವಿರಾಜ್‌ ಕುಂಬಳೆ, ವಿರಾಜ್‌ ಅಡೂರು, ಚೇತನಾ ಕುಂಬಳೆ, ರವೀಂದ್ರನ್‌ ಪಾಡಿ ಭಾಗವಹಿಸಿದ್ದರು. ಕವಿಗಳಿಗೆ ಸ್ಮರಣಿಕೆ ಹಾಗೂ ಪುಸ್ತಕ ಉಡುಗೊರೆ ನೀಡಿ ಗೌರವಿಸಲಾಯಿತು. ವಿರಾಜ್‌ ಅಡೂರು ಕಾರ್ಯಕ್ರಮ ಸಂಯೋಜಕರಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ ಸಾಹಿತ್ಯ ಅಭಿಯಾನ, ಸಮ್ಮೇಳನ, ಮಕ್ಕಳಿಗಾಗಿ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

Advertisement

ಚುಟುಕು ಸಾಹಿತ್ಯ ಜನರಿಗಿಷ್ಟ
ಕಾವ್ಯ ಮಾಧ್ಯಮದಲ್ಲಿ ಚುಟುಕು ಪ್ರಕಾರವು ಹೆಚ್ಚು ಸಾಂದ್ರವಾಗಿರುವ ಮಾಧ್ಯಮ. ಅವಸರದ ಇಂದಿನ ದಿನದಲ್ಲಿ ಹೆಚ್ಚಿನ ಯುವ ಜನಾಂಗ ಚುಟುಕು ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಬಹುಭಾಷಾ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next