Advertisement

ವಾರಂಟಿ ಅವಧಿಗೆ ಮೊದಲೇ ಚರ್ಚ್‌ ಸ್ಟ್ರೀಟ್‌ ಡ್ಯಾಮೇಜ್‌!

11:05 AM Jun 24, 2018 | Team Udayavani |

ಬೆಂಗಳೂರು: ರಸ್ತೆಯ ಮಧ್ಯೆ ಕಿತ್ತು ಬಂದಿರುವ ಕಲ್ಲುಗಳು, ಎಲ್ಲೆಂದರಲ್ಲಿ ವಾಹನ ನಿಲುಗಡೆ, ವಿಲೇವಾರಿಯಾಗದೆ ದುರ್ನಾಥ ಬೀರುತ್ತಿರುವ ತ್ಯಾಜ್ಯ ರಾಶಿ, ರಸ್ತೆಬದಿ ಗುಟ್ಕಾ, ಪಾನ್‌ ಉಗುಳಿದ ಕಲೆಗಳು, ರಸ್ತೆಯಲ್ಲೇ ನಿಂತಿರುವ ಮಳೆ ನೀರು… ಒಂದು ಶತಮಾನ, ಅಂದರೆ ನೂರು ವರ್ಷಗಳ ಬಾಳಿಕೆ ಬರುತ್ತದೆ ಎಂದು ಹೇಳಿ, ಸುಮಾರು ಹತ್ತು ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ನಗರದ ಪ್ರತಿಷ್ಠಿತ ಚರ್ಚ್‌ ಸ್ಟ್ರೀಟ್‌ನ ಸ್ಥಿಯತಿಯಿದು. ನೂರು ವರ್ಷ ಕಾಲ ಬಾಳಿಕೆಬರಬೇಕಿದ್ದ ರಸ್ತೆಯಲ್ಲಿನ ಕಲ್ಲುಗಳು ಮೂರೇ ತಿಂಗಳಿಗೆ ಕಿತ್ತು ಬರುತ್ತಿವೆ.

Advertisement

ಬಿಬಿಎಂಪಿ ವತಿಯಿಂದ ಟೆಂಡರ್‌ ಶ್ಯೂರ್‌ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದರ್ಜೆಯ ಚರ್ಚ್‌ ಸ್ಟ್ರೀಟ್‌ನಲ್ಲಿ ಕಳಪೆ ಕಾಮಗಾರಿ ನಡೆದಿರುವುವು ಅಲ್ಪಾವಧಿಯಲ್ಲೇ ಬಯಲಾಗಿದೆ. ಯೂರೋಪ್‌ ಮಾದರಿಯಲ್ಲಿ ಕಾಬಲ್‌ ಸ್ಟೋನ್‌ ಬಳಸಿ ಇದೇ ಮೊದಲ ಬಾರಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರ ಬಳಕೆಗೆ ಮುಕ್ತವಾದ ಮೂರು ತಿಂಗಳಲ್ಲಿಯೇ ಚರ್ಚ್‌ಸ್ಟ್ರೀಟ್‌ಗೆ ಅಳವಡಿಸಿರುವ ಕಾಬಲ್‌ ಸ್ಟೋನ್‌ಗಳು ಕಿತ್ತು ಹೊರಬರುತ್ತಿವೆ.

ವಿವಿಧ ಸೇವೆಗಳಿಗಾಗಿ ರಸ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ ಪಾಲಿಕೆ, ಚರ್ಚ್‌ಸ್ಟ್ರೀಟ್‌ನಲ್ಲೂ ಯೋಜನೆ ಅನುಷ್ಠಾನಗೊಳಿಸಿತ್ತು. ಆದರೆ, ಬಳಕೆಗೆ ಮುಕ್ತಗೊಂಡ 3 ತಿಂಗಳಲ್ಲಿಯೇ 750 ಮೀಟರ್‌ ಉದ್ದದ ರಸ್ತೆಯ ಹತ್ತಾರು ಕಡೆ ಕಲ್ಲುಗಳು ಕಿತ್ತು ಬಂದಿದ್ದು, ಕಳಪೆ ಕಾಮಗಾರಿ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಕಾಬಲ್‌ ಸ್ಟೋನ್‌ ಬಳಸುವುದರಿಂದ ರಸ್ತೆ ಸುಮಾರು 100 ವರ್ಷ ಬಾಳಿಕೆ ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಕೇವಲ 750 ಮೀಟರ್‌ ಉದ್ದದ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 9.2 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ಕೇವಲ 100 ದಿನಗಳಲ್ಲೇ ಕಲ್ಲುಗಳು ಕಿತ್ತು ಬರುತ್ತಿರುವುದು ಕಳಪೆ ಕಾಮಗಾರಿ ನಡೆದಿರುವುದನ್ನು ಬಿಂಬಿಸುತ್ತಿದೆ.

ಬೇಕಾಬಿಟ್ಟಿ ಪಾರ್ಕಿಂಗ್‌: ಚರ್ಚ್‌ ಸ್ಟ್ರೀಟ್‌ ಬಲ ಭಾಗದಲ್ಲಿ ಪಾರ್ಕಿಂಗ್‌ ಬೇ ನಿರ್ಮಿಸಿ ವಾಹನಗಳ ನಿಲುಗಡೆಗೆ ಪಾಲಿಕೆ ಅವಕಾಶ ಕಲ್ಪಿಸಿದೆ. ಆದರೆ, ಬಹುತೇಕ ಕಡೆಗಳಲ್ಲಿ ಎಡಭಾಗದಲ್ಲಿಯೇ ವಾಹನಗಳ ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.

Advertisement

ರಸ್ತೆಯ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ರಸ್ತೆಯ ಎರಡೂ ಬದಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಬಹುತೇಕ ಭಾಗಗಳಲ್ಲಿ ಗಿಡಗಳು ಹಾಗೂ ಪಾದಚಾರಿ ಮಾರ್ಗದ ಮೇಲೆ ಸಿಗರೇಟ್‌ ತುಂಡುಗಳು, ಕಾಫಿ-ಟಿ ಕಪ್‌, ಗುಟ್ಕಾ ಪಾಕೇಟ್‌ ಸೇರಿದಂತೆ ಇತರೆ ತ್ಯಾಜ್ಯ ಸೇರಿ ರಸ್ತೆಯ ಸೌಂದರ್ಯವನ್ನು ಹಾಳು ಮಾಡುತ್ತಿವೆ.

ರಸ್ತೆಯಲ್ಲೇ ನಿಲ್ಲುವ ಮಳೆನೀರು: ಮಳೆನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಇದರಿಂದ ಭೂಮಿಗೆ ನೀರಿಳಿದು ಕಲ್ಲುಗಳು ಸಡಿಲಗೊಳ್ಳುತ್ತಿದ್ದು, ವಾಹನಗಳು ಸಂಚಾರಿಸಿದಾಗ ಕಲ್ಲುಗಳು ಕಿತ್ತು ಬರುತ್ತಿವೆ. ತ್ಯಾಜ್ಯ ಸಂಗ್ರಹಣೆಗಾಗಿ ರಸ್ತೆಯ ಎರಡೂ ಬದಿಯ ಅಲ್ಲಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಲಾಗಿದೆ.

ಆದರೆ, ಪೌರಕಾರ್ಮಿಕರು ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ತ್ಯಾಜ್ಯ, ಡಬ್ಬಿಗಳಲ್ಲಿಯೇ ಉಳಿದಿದೆ. ಮಳೆ ನೀರು ಡಸ್ಟ್‌ಬಿನ್‌ ಸೇರಿದ್ದರಿಂದ ಕಸ ಕೊಳೆತು, ದುರ್ವಾಸನೆ ಹೊಮ್ಮುತ್ತಿದೆ. ಇನ್ನೂ ಕೆಲವೆಡೆ ಪಾದಚಾರಿ ಮಾರ್ಗದಲ್ಲಿಯೇ ತ್ಯಾಜ್ಯ ಸುರಿದಿದ್ದು, ಪಾದಚಾರಿಗಳು ನಡೆದಾಡಲು ತೊಂದರೆಯಾಗುತ್ತಿದೆ.

ಚರ್ಚ್‌ಸ್ಟ್ರೀಟ್‌ನಲ್ಲಿ ಅಳವಡಿಸಲಾಗಿರುವ ಕಾಬಲ್‌ ಸ್ಟೋನ್‌ಗಳು ಕಿತ್ತು ಬಂದಿರುವುದು ಗಮನಕ್ಕೆ ಬಂದಿದೆ. ಕಾಬಲ್‌ ಕಲ್ಲುಗಳಿಂದ ನಿರ್ಮಿಸಿದ ರಸ್ತೆ ಕನಿಷ್ಠ 25 ವರ್ಷ ಬಾಳಿಕೆ ಬರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೂ ಕಲ್ಲುಗಳು ಕಿತ್ತು ಬರಲು ಕಾರಣವೇನು ಎಂಬ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 
-ಆರ್‌.ಸಂಪತ್‌ರಾಜ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next